ADVERTISEMENT

ಡಿ.29ರಂದು ಸೈಯದ್ ಕಿರ್ಮಾನಿಯ ‘ಸ್ಟಂಪ್ಡ್’ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:16 IST
Last Updated 24 ಡಿಸೆಂಬರ್ 2024, 16:16 IST
<div class="paragraphs"><p>ಸೈಯದ್ ಕಿರ್ಮಾನಿ&nbsp;</p></div>

ಸೈಯದ್ ಕಿರ್ಮಾನಿ 

   

ಬೆಂಗಳೂರು: ಭಾರತ ಕ್ರಿಕೆಟ್ ಕ್ಷೇತ್ರದ ದಿಗ್ಗಜ ವಿಕೆಟ್‌ಕೀಪರ್–ಬ್ಯಾಟರ್ ಸೈಯದ್ ಮುಜ್ತಾಬಾ ಹುಸೇನ್ ಕಿರ್ಮಾನಿ ಅವರು ಇದೇ ತಿಂಗಳು 29ರಂದು 75ನೇ ವಸಂತಕ್ಕೆ ಕಾಲಿಡಲಿದ್ದಾರೆ. ಈ ಸಂದರ್ಭದಲ್ಲಿ ಅವರ  ಆತ್ಮಚರಿತ್ರೆ ‘ಸ್ಟಂಪ್ಡ್‌ –ಲೈಫ್ ಬಿಹ್ಯಾಂಡ್ ಅ್ಯಂಡ್ ಬಿಯಾಂಡ್ ದ 22 ಯಾರ್ಡ್ಸ್‌’ ಲೋಕಾರ್ಪಣೆಗೊಳ್ಳಲಿದೆ. 

1983ರ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿ ವಿಕೆಟ್ ಕೀಪರ್ ಆಗಿದ್ದ ಬೆಂಗಳೂರಿನ ಕಿರ್ಮಾನಿ ಅವರ ಹೆಸರಿನಲ್ಲಿ ಹಲವು ದಾಖಲೆಗಳು ಇವೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಿ2 ಹಾಲ್‌ನಲ್ಲಿ ಇದೇ 29ರಂದು ಬೆಳಿಗ್ಗೆ 11 ಗಂಟೆಗೆ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. 

ADVERTISEMENT

‘ನನ್ನ ಸಹ ಆಟಗಾರರು, ಸ್ನೇಹಿತರಲ್ಲಿ ಬಹುತೇಕರು ತಮ್ಮ ಆತ್ಮಕಥೆಗಳನ್ನು ಪ್ರಕಟಿಸಿದ್ದಾರೆ. ಸುನಿಲ್ ಗಾವಸ್ಕರ್ ಅದರಲ್ಲಿ ಪ್ರಥಮರು. ಆದರೆ ನಾನೊಬ್ಬ ಮಾತ್ರ ಇದುವರೆಗೆ ಪುಸ್ತಕ ಬರೆಯುವುದರ ಕುರಿತು ಹೆಚ್ಚು ಯೋಚಿಸಿರಲಿಲ್ಲ. ಆದರೆ ಇದೀಗ ನನ್ನ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದ ಕುರಿತು ಕೃತಿ ರಚಿಸಬೇಕು ಎಂದು ಆಪ್ತರು ಮತ್ತು ಕುಟುಂಬದ ಒತ್ತಾಯ ಹೆಚ್ಚಿತ್ತು. ಯುವಪೀಳಿಗೆಗೆ ನನ್ನ ಅನುಭವಗಳನ್ನು ಈ ಪುಸ್ತಕದ ಮೂಲಕ ಪರಿಚಯಿಸುವ ಪ್ರಯತ್ನ ಮಾಡಿರುವೆ. ಈ ಕೃತಿ ರಚನೆಯಲ್ಲಿ ಪತ್ರಕರ್ತ ದಕ್ಷೇಶ್ ಪಾಠಕ್ ಮತ್ತು ಸಂಶೋಧಕರೂ ಆಗಿರುವ ದೇಬಶೀಷ್ ಸೇನ್ ಗುಪ್ತಾ ಅವರು ಸಹಲೇಖಕರಾಗಿ ನನಗೆ ಸಹಾಯ ಮಾಡಿದ್ದಾರೆ’ ಎಂದು ಕಿರ್ಮಾನಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

‘ನಾನು ಹುಟ್ಟಿದ್ದು ಚೆನ್ನೈನಲ್ಲಿ. ಬೆಳೆದಿದ್ದು, ಶಿಕ್ಷಣ ಪಡೆದಿದ್ದು, ಕ್ರಿಕೆಟಿಗನಾಗಿದ್ದು ಬೆಂಗಳೂರಿನಲ್ಲಿ. ನಾನು ದೇಶಿ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಾಗಿನ ಹತ್ತಾರು ಅನುಭವಗಳನ್ನು ಈ ಕೃತಿಯಲ್ಲಿ ಉಲ್ಲೇಖಿಸಿರುವೆ. ನನ್ನ ನೆನಪುಗಳನ್ನು ಧ್ವನಿಮುದ್ರಿಸಿ ಈ ಇಬ್ಬರು ಲೇಖಕರಿಗೆ ಕಳಿಸುತ್ತಿದ್ದೆ. ಅವರು ಅದನ್ನು ಅಕ್ಷರರೂಪಕ್ಕೆ ಇಳಿಸಿದ್ದಾರೆ’ ಎಂದರು. 

‘ಪುಸ್ತಕಕ್ಕೆ ಸುನಿಲ್ ಗಾವಸ್ಕರ್ ಮುನ್ನುಡಿ ಬರೆದಿದ್ದಾರೆ. ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಪುಸ್ತಕ ಬಿಡುಗಡೆ ಮಾಡುವರು.  ಬಿ.ಎಸ್. ಚಂದ್ರಶೇಖರ್, ಯರಪಳ್ಳಿ ಪ್ರಸನ್ನ, ಜಿ.ಆರ್. ವಿಶ್ವನಾಥ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಸೇರಿದಂತೆ ಗಣ್ಯ ಕ್ರಿಕೆಟಿಗರು ಹಾಜರಿರುವರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನೂ ಆಹ್ವಾನಿಸಲಾಗಿದೆ’ ಎಂದರು.  

ಈ ಸಂದರ್ಭದಲ್ಲಿ ಹಾಜರಿದ್ದ ಲೇಖಕ ದಕ್ಷೇಶ್, ‘ಅವರು ಆಡಿದ ಹಲವು ಪಂದ್ಯಗಳನ್ನು ನಾನು ನೋಡಿದ್ದೇನೆ. ವರದಿ ಮಾಡಿದ್ದೇನೆ. ಕಿರ್ಮಾನಿ ಅವರು ಮೊದಲಿನಿಂದಲೂ ನೇರ ನಡೆ, ನುಡಿ ಮತ್ತು ಶಿಸ್ತಿನ ವ್ಯಕ್ತಿತ್ವದವರು. ಅವರು ಜಗತ್ತಿನ ಅಗ್ರಮಾನ್ಯ ವಿಕೆಟ್‌ಕೀಪರ್ ಆಗಿದ್ದಾರೆ. ಅವರು ಆಡಿದ ಕಾಲಘಟ್ಟದಲ್ಲಿ ಬಿ.ಎಸ್. ಚಂದ್ರಶೇಖರ್, ಯರಪಳ್ಳಿ ಪ್ರಸನ್ನ, ವೆಂಕಟರಾಘವನ್, ಬಿಷನ್ ಸಿಂಗ್ ಬೇಡಿ, ಮಣಿಂದರ್ ಸಿಂಗ್, ಶಿವರಾಮಕೃಷ್ಣನ್ ಅವರಂತಹ ಶ್ರೇಷ್ಠ ಸ್ಪಿನ್ನರ್‌ಗಳಿದ್ದರು. ಅವರೆಲ್ಲರಿಗೂ ವಿಕೆಟ್‌ಕೀಪಿಂಗ್ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಕಿರ್ಮಾನಿ ಅವರ ಚುರುಕುತನ ಮತ್ತು ನಿಖರತೆಯ ಮುಂದೆ ಅದೊಂದು ಸವಾಲೇ ಆಗಿರಲಿಲ್ಲ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.