ADVERTISEMENT

ಧೋನಿಯ ವಿಶ್ವಾಸ ಕಳೆದುಕೊಂಡಿರುವ ರೈನಾ ಬಿಕರಿಯಾಗದೇ ಉಳಿದರು: ಮಾಜಿ ಕ್ರಿಕೆಟಿಗ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 12:30 IST
Last Updated 16 ಫೆಬ್ರುವರಿ 2022, 12:30 IST
ಮಹೇಂದ್ರ ಸಿಂಗ್‌ ಧೋನಿ– ಸುರೇಶ್‌ ರೈನಾ
ಮಹೇಂದ್ರ ಸಿಂಗ್‌ ಧೋನಿ– ಸುರೇಶ್‌ ರೈನಾ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ –2022 (ಐಪಿಎಲ್) ಟಿ20 ಕ್ರಿಕೆಟ್‌ನ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬ್ಯಾಟರ್‌ ಸುರೇಶ್‌ ರೈನಾ ಬಿಕರಿಯಾಗದೇ ಉಳಿದಿದ್ದಾರೆ.

ಈ ಕುರಿತು ಸುದ್ದಿತಾಣ ‘ಕ್ರಿಕ್‌ ಬಜ್‌’ಗೆ ಪ್ರತಿಕ್ರಿಯಿಸಿರುವ ನ್ಯೂಜಿಲೆಂಡ್‌ನ ಮಾಜಿ ವೇಗಿ, ವೀಕ್ಷಕ ವಿವರಣೆಗಾರ ಸೈಮನ್ ಡೌಲ್, 'ಸುರೇಶ್‌ ರೈನಾ ಅವರು ಯುಎಇಯಲ್ಲಿ ತಂಡದ ನಿಷ್ಠೆ ಹಾಗೂ ಧೋನಿಯ ವಿಶ್ವಾಸವನ್ನು ಕಳೆದುಕೊಂಡರು. ಈ ಹಿನ್ನೆಲೆಯಲ್ಲಿ ಅವರನ್ನು ಮರಳಿ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆ ಕ್ಷೀಣಿಸಿತು’ ಎಂದು ತಿಳಿಸಿದ್ದಾರೆ.

2008ರಿಂದ 2021ರ ವರೆಗೂ ಐಪಿಎಲ್‌ ಹರಾಜಿನಲ್ಲಿ ಅತಿ ಹೆಚ್ಚು ಹಣ ಗಳಿಸಿದ ಆಟಗಾರರ ಪೈಕಿ ನಾಲ್ಕನೇ ಸ್ಥಾನದಲ್ಲಿರುವ ಸುರೇಶ್‌ ರೈನಾ ( ಒಟ್ಟು ₹110.7 ಕೋಟಿ) ಅವರನ್ನು ಈ ಬಾರಿ ಯಾವುದೇ ತಂಡ ಆಯ್ಕೆ ಮಾಡಿಲ್ಲ. ಇದೇ ಮೊದಲ ಬಾರಿಗೆ ಐಪಿಎಲ್‌ನಲ್ಲಿ ರೈನಾ ಬಿಕರಿಯಾಗದೆ ಉಳಿದಿದ್ದಾರೆ.

ADVERTISEMENT

ವೈಯಕ್ತಿಕ ಕಾರಣಗಳಿಂದಾಗಿ 2020ರ ಐಪಿಎಲ್‌ನಿಂದ ರೈನಾ ಮನೆಗೆ ಮರಳಿದ್ದರು. 2021ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಮತ್ತೆ ಸೇರ್ಪಡೆಯಾಗಿದ್ದ ಅವರು ಕೇವಲ 160 ರನ್‌ ಗಳಿಸಿದ್ದರು. ಬ್ಯಾಟಿಂಗ್‌ ಸರಾಸರಿ 17.77 ದಾಖಲಾಗಿತ್ತು.

'ಮಿಸ್ಟರ್‌ ಐಪಿಎಲ್‌' ಎಂದೇ ಹೆಸರಾಗಿದ್ದ ರೈನಾ ಅವರಿಗೆ ಮೂಲ ಬೆಲೆ ₹2 ಕೋಟಿ ನಿಗದಿಯಾಗಿತ್ತು. ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಆಗುವಲ್ಲಿ ಸುರೇಶ್ ರೈನಾ ಪಾತ್ರ ಪ್ರಮುಖವಾಗಿತ್ತು. ಐಪಿಎಲ್‌ ಟೂರ್ನಿಯಲ್ಲಿ ಅವರು ಈವರೆಗೂ 5,528 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.