ADVERTISEMENT

ಎರಡನೇ ಟೆಸ್ಟ್: ಲಂಡನ್‌ಗೆ ಭಾರತ ತಂಡ, ಲಾರ್ಡ್ಸ್‌ಗೆ ಗಂಗೂಲಿ

ನಾಟಿಂಗ್‌ಹ್ಯಾಂನಲ್ಲೇ ಉಳಿದ ಸೂರ್ಯಕುಮಾರ್ ಯಾದವ್, ಪೃಥ್ವಿ ಶಾ; 10 ದಿನ ಕ್ವಾರಂಟೈನ್

ಪಿಟಿಐ
Published 9 ಆಗಸ್ಟ್ 2021, 13:18 IST
Last Updated 9 ಆಗಸ್ಟ್ 2021, 13:18 IST
ವಾರ್ಮ್ ಅಪ್‌ ವೇಳೆ ಭಾರತ ತಂಡ –ಟ್ವಿಟರ್ ಚಿತ್ರ
ವಾರ್ಮ್ ಅಪ್‌ ವೇಳೆ ಭಾರತ ತಂಡ –ಟ್ವಿಟರ್ ಚಿತ್ರ   

ಲಂಡನ್‌: ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ಎದುರಿನ ಎರಡನೇ ಟೆಸ್ಟ್ ಪಂದ್ಯ ಆಡಲು ಸೋಮವಾರ ಲಂಡನ್‌ಗೆ ಬಂದು ತಲುಪಿತು. ಪಂದ್ಯ 12ರಂದು ಆರಂಭಗೊಳ್ಳಲಿದ್ದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಈ ಪಂದ್ಯದ ವೇಳೆ ಹಾಜರಿರುವರು‌.

ನಾಟಿಂಗ್‌ಹ್ಯಾಂನಲ್ಲಿ ಭಾನುವಾರ ಕೊನೆಗೊಂಡ ಮೊದಲ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು. ಭಾರತ ಗೆಲುವಿಗೆ ಸುಲಭ ಗುರಿಯನ್ನು ಬೆನ್ನತ್ತಿತ್ತು. ಆದರೆ ಕೊನೆಯ ದಿನದ ಆಟಕ್ಕೆ ಮಳೆ ಅಡ್ಡಿಯಾದ ಕಾರಣ ಪಂದ್ಯವನ್ನು ಡ್ರಾದಲ್ಲಿ ಮುಕ್ತಾಯಗೊಳಿಸಲು ನಿರ್ಧರಿಸಲಾಗಿತ್ತು. ಶ್ರೀಲಂಕಾ ಎದುರಿನ ಸರಣಿಯಲ್ಲಿ ಆಡಿ ತಡವಾಗಿ ತಂಡವನ್ನು ಸೇರಿಕೊಂಡಿರುವ ಸೂರ್ಯಕುಮಾರ್ ಯಾದವ್ ಮತ್ತು ಪೃಥ್ವಿ ಶಾ ಅವರು ನಾಟಿಂಗ್‌ಹ್ಯಾಂನಲ್ಲೇ ಉಳಿದಿದ್ದು ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಆರ್‌ಟಿ–ಪಿಸಿಆರ್ ಪರೀಕ್ಷೆಯ ವರದಿ ನೆಗೆಟಿವ್ ಬಂದ ಕಾರಣ ಎಲ್ಲ ಆಟಗಾರರೂ ಲಂಡನ್‌ಗೆ ತೆರಳಿದ್ದಾರೆ. ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಕ್ವಾರಂಟೈನ್ ಆಗಸ್ಟ್ 13ರಂದು ಮುಕ್ತಾಯವಾಗಲಿದೆ. ಆದ್ದರಿಂದ ಆಗಸ್ಟ್ 14ರ ನಂತರವಷ್ಟೇ ಅವರು ಅಭ್ಯಾಸ ಮಾಡಲಿದ್ದಾರೆ. ಹೀಗಾಗಿ ಮೂರನೇ ಟೆಸ್ಟ್‌ ಪಂದ್ಯಕ್ಕೆ ಅವರು ಲಭ್ಯರಾಗಲಿದ್ದಾರೆ. ಪಂದ್ಯ ಲೀಡ್ಸ್‌ನಲ್ಲಿ ಆಗಸ್ಟ್‌ 25ರಂದು ಆರಂಭವಾಗಲಿದೆ.

ADVERTISEMENT

ಪಂದ್ಯ ವೀಕ್ಷಣೆಗೆ ಗಂಗೂಲಿ

ಭಾರತದಿಂದ ತೆರಳುವ ಪ್ರವಾಸಿಗರಿಗೆ ನಿರ್ಬಂಧ ಸಡಿಲಗೊಳಿಸಿರುವ ಕಾರಣ ಎರಡನೇ ಪಂದ್ಯ ವೀಕ್ಷಣೆಗೆ ಸೌರವ್ ಗಂಗೂಲಿ ತೆರಳಲಿದ್ದಾರೆ. ಬ್ರಿಟನ್‌ ಆರೋಗ್ಯ ಇಲಾಖೆಯ ಪ್ರಕಾರ ಎರಡು ಡೋಸ್ ಲಸಿಕೆ ಪಡೆದಿರುವ ಯಾವುದೇ ವ್ಯಕ್ತಿ ಈಗ ಅಲ್ಲಿಗೆ ಪ್ರಯಾಣ ಬೆಳೆಸಬಹುದಾಗಿದೆ. ಅವರಿಗೆ 10 ದಿನಗಳ ಕಠಿಣ ಕ್ವಾರಂಟೈನ್ ಅಗತ್ಯವಿಲ್ಲ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಉಪಾಧ್ಯಕ್ಷ ರಾಜೀವ್ ಶುಕ್ಲಾ, ಖಜಾಂಚಿ ಅರುಣ್ ಧುಮಲ್ ಮುಂತಾದವರು ಕೂಡ ಪಂದ್ಯ ವೀಕ್ಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.