ADVERTISEMENT

ಕೊಹ್ಲಿ ಬಳಗದ ಇಂಗ್ಲೆಂಡ್‌ ಪ್ರವಾಸಕ್ಕೆ ದಿನ ನಿಗದಿ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್, ಟೆಸ್ಟ್ ಸರಣಿ: ಕುಟುಂಬದವರಿಗೂ ಹೋಗಲು ಅನುಮತಿ

ಪಿಟಿಐ
Published 8 ಮೇ 2021, 15:14 IST
Last Updated 8 ಮೇ 2021, 15:14 IST
ಭಾರತ ಟೆಸ್ಟ್ ಕ್ರಿಕೆಟ್ ತಂಡ –ಪಿಟಿಐ ಚಿತ್ರ
ಭಾರತ ಟೆಸ್ಟ್ ಕ್ರಿಕೆಟ್ ತಂಡ –ಪಿಟಿಐ ಚಿತ್ರ   

ನವದೆಹಲಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಮತ್ತು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೆ ಸಜ್ಜಾಗುತ್ತಿರುವ ಭಾರತ ತಂಡ ಜೂನ್ ಎರಡರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಅದಕ್ಕೂ ಮೊದಲು ಆಟಗಾರರು ಮುಂಬೈನಲ್ಲಿ ಎಂಟು ದಿನಗಳ ಕಠಿಣ ಕ್ವಾರಂಟೈನ್‌ಗೆ ಒಳಗಾಗುವರು.

ನ್ಯೂಜಿಲೆಂಡ್ ಎದುರಿನ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಸೇರಿದಂತೆ ಆರು ಟೆಸ್ಟ್ ಪಂದ್ಯಗಳನ್ನು ಆಡಲಿರುವ ವಿರಾಟ್ ಕೊಹ್ಲಿ ಬಳಗ ಮೂರೂವರೆ ತಿಂಗಳು ಇಂಗ್ಲೆಂಡ್‌ನಲ್ಲಿ ಕಳೆಯಲಿದೆ. ಅಲ್ಲಿಗೆ ತಲುಪಿದ ಕೂಡಲೇ ಆಟಗಾರರು 10 ದಿನಗಳ ಸಾಮಾನ್ಯ ಕ್ವಾರಂಟೈನ್‌ಗೆ ಒಳಗಾಗುವರು. ಈ ಕ್ವಾರಂಟೈನ್ ಅವಧಿಯನ್ನು ಕಡಿಮೆ ಮಾಡುವ ಕುರಿತು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಚರ್ಚಿಸುತ್ತಿದೆ.

‘ತಂಡದ ಆಟಗಾರರುಭಾರತದಲ್ಲಿ ಎಂಟು ದಿನ ಹೋಟೆಲ್ ಕೊಠಡಿಯಲ್ಲೇ ಕಳೆಯಲಿದ್ದಾರೆ. ಈ ಅವಧಿಯಲ್ಲಿ ಎರಡು, ನಾಲ್ಕು ಮತ್ತು ಏಳನೇ ದಿನಗಳಲ್ಲಿ ಆರ್‌ಟಿ–ಪಿಸಿಆರ್ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರು ಮಾತ್ರ ವಿಮಾನವೇರಲಿದ್ದಾರೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದರು.

ADVERTISEMENT

‘ಬಬಲ್‌ನಿಂದ ಬಬಲ್‌ಗೆ ಆಟಗಾರರನ್ನು ಸ್ಥಳಾಂತರಿಸಲಾಗುವುದು. ಇಂಗ್ಲೆಂಡ್‌ನಲ್ಲಿ ಸಾಮಾನ್ಯ ಕ್ವಾರಂಟೈನ್ ಸಂದರ್ಭದಲ್ಲಿ ಅಭ್ಯಾಸ ಮಾಡಲು ಅವಕಾಶವಿದೆ. 10 ದಿನಗಳ ಕ್ವಾರಂಟೈನ್ ಕಡ್ಡಾಯವಾದರೆ ಜೂನ್ 13ರಿಂದ ತಂಡದ ಆಟಗಾರರಿಗೆ ನಗರ ಸುತ್ತಲು ಅವಕಾಶ ಸಿಗಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಜೂನ್ 18ರಂದು ಆರಂಭವಾಗಲಿದೆ. ಆತಿಥೇಯರ ಎದುರಿನ ಟೆಸ್ಟ್ ಸರಣಿ ಆಗಸ್ಟ್‌ ನಾಲ್ಕರಂದು ಆರಂಭವಾಗಲಿದೆ.

ಕುಟುಂಬಕ್ಕೆ ಅವಕಾಶ

ಸುದೀರ್ಘ ಕಾಲದ ಪ್ರವಾಸವಾಗಿರುವ ಕಾರಣ ಆಟಗಾರರು ಕುಟುಂಬದವರನ್ನು ಕರೆದುಕೊಂಡು ಹೋಗಲು ಅವಕಾಶ ಸಿಗಲಿದೆ. ಪತ್ನಿ–ಮಕ್ಕಳು ಆರಂಭದಲ್ಲೇ ಜೊತೆಯಲ್ಲಿತ್ತಾರೆಯೇ ಅಥವಾ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಂತರ ಅಲ್ಲಿಗೆ ತೆರಳುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಲಿಲ್ಲ.‌

ಇಂಗ್ಲೆಂಡ್‌ಗೆ ಪಯಣಿಸುವ ಮೊದಲು ಎಲ್ಲ ಆಟಗಾರರಿಗೆ ಬಿಸಿಸಿಐಲಸಿಕೆ ಹಾಕಿಸಲಿದೆ. ಆದರೆ ಸೋಂಕು ದೃಢಪಟ್ಟಿರುವ ಪ್ರಸಿದ್ಧ ಕೃಷ್ಣ ಅವರಿಗೆ ಸದ್ಯ ಲಸಿಕೆ ನೀಡಲು ಸಾಧ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.