ADVERTISEMENT

ಡಬ್ಲ್ಯುಟಿಸಿ ಫೈನಲ್‌ಗೆ ಮೊದಲು ಭಾರತ ತಂಡಕ್ಕೆ ‘ವ್ಯವಸ್ಥಿತ ಪ್ರತ್ಯೇಕವಾಸ’: ಐಸಿಸಿ

ಪಿಟಿಐ
Published 29 ಮೇ 2021, 12:48 IST
Last Updated 29 ಮೇ 2021, 12:48 IST
ಐಸಿಸಿ ಲೋಗೊ
ಐಸಿಸಿ ಲೋಗೊ   

ದುಬೈ: ನ್ಯೂಜಿಲೆಂಡ್‌ ವಿರುದ್ಧ ನಿಗದಿಯಾಗಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೂ ಮೊದಲು ಭಾರತ ತಂಡದ ಆಟಗಾರರಿಗೆ ‘ವ್ಯವಸ್ಥಿತ ಪ್ರತ್ಯೇಕವಾಸ‘ ಇರಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶನಿವಾರ ತಿಳಿಸಿದೆ. ಆದರೆ ಇಂಗ್ಲೆಂಡ್‌ನಲ್ಲಿ ತಂಡಕ್ಕಿರುವ ‘ಕಠಿಣ ಕ್ವಾರಂಟೈನ್‌‘ ಅವಧಿಯನ್ನು ಅದು ಉಲ್ಲೇಖಿಸಿಲ್ಲ.

ಜೂನ್ 18ರಿಂದ 22ರವರೆಗೆ ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ವಿಶ್ವದ ಎರಡು ಪ್ರಮುಖ ತಂಡಗಳು ಮುಖಾಮುಖಿಯಾಗಲಿವೆ.

ಆತಿಥೇಯ ತಂಡದ ಎದುರು ದ್ವಿಪಕ್ಷೀಯ ಸರಣಿ ಆಡಲು ನ್ಯೂಜಿಲೆಂಡ್ ಈಗಾಗಲೇ ಇಂಗ್ಲೆಂಡ್‌ಗೆ ಬಂದಿಳಿದಿದೆ. ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ ತಂಡವು ತವರಿನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಜೂನ್‌ 3ರಂದು ಇಂಗ್ಲೆಂಡ್‌ ತಲುಪಲಿದೆ.

ADVERTISEMENT

‘ಮೇ 17ರಂದು ಬಿಡುಗಡೆಯಾಗಿರುವ ಆರೋಗ್ಯ ಸುರಕ್ಷಾ ಕಾಯ್ದೆಯಲ್ಲಿ ವಿವರಿಸಿರುವಂತೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ನಡೆಸಲು ಇಂಗ್ಲೆಂಡ್ ಸರ್ಕಾರ ಅನುಮತಿ ನೀಡಿದೆ. ಭಾರತ ತಂಡವು ಇಂಗ್ಲೆಂಡ್ ತಲುಪಿದ ಬಳಿಕ ನೇರವಾಗಿ ಹ್ಯಾಂಪ್‌ಶೈರ್ ಬೌಲ್‌ನ ಹೊಟೇಲ್‌ಗೆ ತೆರಳಲಿದೆ. ಅಲ್ಲಿ ಕೋವಿಡ್‌ ಪರೀಕ್ಷೆಗಳಿಗೆ ಒಳಗಾದ ಬಳಿಕ ಆಟಗಾರರು ವ್ಯವಸ್ಥಿತ ಪ್ರತ್ಯೇಕವಾಸಕ್ಕೆ ತೆರಳಲಿದ್ದಾರೆ‘ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಆದರೆ ಸೌತಾಂಪ್ಟನ್‌ನಲ್ಲಿ ತಂಡಕ್ಕಿರುವ ಕಠಿಣ ಕ್ವಾರಂಟೈನ್ ಅವಧಿಯನ್ನು ಐಸಿಸಿ ಉಲ್ಲೇಖಿಸಿಲ್ಲ. ನ್ಯೂಜಿಲೆಂಡ್ ತಂಡಕ್ಕೆ ತರಬೇತಿಗೂ ಮೊದಲು ಮೂರು ದಿನಗಳ ರೂಮ್ ಕ್ವಾರಂಟೈನ್ ಮಾಡಲಾಗಿತ್ತು.

ಪ್ರತ್ಯೇಕವಾಸದ ಅವಧಿಯಲ್ಲಿ ನಿರಂತರವಾಗಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತದೆ.

ಮುಂಬೈನಲ್ಲಿ 14 ದಿನಗಳ ಬಯೋಬಬಲ್ ವಾಸ ಮುಗಿಸಿ ಭಾರತ ತಂಡವು ಇಂಗ್ಲೆಂಡ್‌ಗೆ ತೆರಳಲಿದೆ. ಬಯೋಬಬಲ್‌ನಲ್ಲಿ ಕೋವಿಡ್‌ಗೆ ಸಂಬಂಧಿಸಿದ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ಆರು ಬಾರಿ ನಡೆಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.