ADVERTISEMENT

ಮಹಿಳಾ ಕ್ರಿಕೆಟ್‌ | ಒತ್ತಡ ಮೀರಿ ನಿಲ್ಲುವ ಕಲೆ ಕರಗತವಾಗಿಲ್ಲ : ಹೇಮಲತಾ ಕಲಾ

ಆಯ್ಕೆ ಸಮಿತಿಯ ನಿರ್ಗಮಿತ ಮುಖ್ಯಸ್ಥೆ ಕಲಾ ಹೇಳಿಕೆ

ಪಿಟಿಐ
Published 10 ಜುಲೈ 2020, 11:19 IST
Last Updated 10 ಜುಲೈ 2020, 11:19 IST
ಭಾರತ ಮಹಿಳಾ ಕ್ರಿಕೆಟ್‌ ತಂಡ –ಸಂಗ್ರಹ ಚಿತ್ರ 
ಭಾರತ ಮಹಿಳಾ ಕ್ರಿಕೆಟ್‌ ತಂಡ –ಸಂಗ್ರಹ ಚಿತ್ರ    

ನವದೆಹಲಿ: ‘ಭಾರತ ಮಹಿಳಾ ಕ್ರಿಕೆಟ್‌ ತಂಡವು ಫೈನಲ್‌ ಪಂದ್ಯಗಳಲ್ಲಿ ಒತ್ತಡ ಮೀರಿ ನಿಂತು ಆಡುವ ಕಲೆಯನ್ನು ಕರಗತಮಾಡಿಕೊಂಡಿಲ್ಲ. ಹೀಗಾಗಿಯೇ ಐಸಿಸಿ ಟೂರ್ನಿಗಳಲ್ಲಿ ತಂಡಕ್ಕೆ ಪ್ರಶಸ್ತಿ ಕೈಗೆಟುಕದಾಗಿದೆ’ ಎಂದು ಆಯ್ಕೆ ಸಮಿತಿಯ ನಿರ್ಗಮಿತ ಮುಖ್ಯಸ್ಥೆ ಹೇಮಲತಾ ಕಲಾ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಪರ 78 ಏಕದಿನ ಹಾಗೂ ಏಳು ಟೆಸ್ಟ್‌ ಪಂದ್ಯಗಳನ್ನು ಆಡಿರುವ ಕಲಾ, 2015ರಲ್ಲಿ ಆಯ್ಕೆ ಸಮಿತಿ ಸದಸ್ಯೆಯಾಗಿ ನೇಮಕವಾಗಿದ್ದರು. 2016ರಲ್ಲಿ ಅವರು ಸಮಿತಿಯ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿದ್ದರು.

‘ಪ್ರತಿಷ್ಠಿತ ಟೂರ್ನಿಗಳ ಫೈನಲ್‌ನಲ್ಲಿ ಸಮರ್ಥವಾಗಿ ಆಡುವ ಗುಣವನ್ನು ಆಟಗಾರ್ತಿಯರು ಮೈಗೂಡಿಸಿಕೊಳ್ಳಬೇಕು. ಈ ಬಾರಿಯ ಟ್ವೆಂಟಿ–20 ವಿಶ್ವಕಪ್‌ನಲ್ಲಿ ತಂಡದ ಬ್ಯಾಟಿಂಗ್‌ ವಿಭಾಗ ಸಂಪೂರ್ಣವಾಗಿ ಸೊರಗಿತ್ತು. ಹೀಗಾಗಿ ಹಿನ್ನಡೆ ಎದುರಾಯಿತು’ ಎಂದು ಅವರು ಹೇಳಿದ್ದಾರೆ.

ADVERTISEMENT

‘2017ರ ಏಕದಿನ ವಿಶ್ವಕಪ್‌ನಲ್ಲಿ ಪ್ರಶಸ್ತಿ ಜಯಿಸುವ ಸುವರ್ಣ ಅವಕಾಶ ತಂಡಕ್ಕೆ ಸಿಕ್ಕಿತ್ತು. ಸೆಮಿಫೈನಲ್‌ನಲ್ಲಿ ಮಿಥಾಲಿ ರಾಜ್‌ ಬಳಗವು ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿತ್ತು. ಇಂಗ್ಲೆಂಡ್‌ ಎದುರಿನ ಫೈನಲ್‌ನಲ್ಲಿ 229ರನ್‌ಗಳ ಗುರಿ ಬೆನ್ನಟ್ಟಿದ್ದ ತಂಡ ಒಂದು ಹಂತದಲ್ಲಿ ಮೂರುವಿಕೆಟ್‌ ಕಳೆದುಕೊಂಡು 190ರನ್‌ ದಾಖಲಿಸಿತ್ತು. ನಂತರ ಸತತವಾಗಿ ವಿಕೆಟ್‌ ಕಳೆದುಕೊಂಡಿದ್ದರಿಂದ ಪ್ರಶಸ್ತಿಯ ಆಸೆ ಕಮರಿತ್ತು’ ಎಂದಿದ್ದಾರೆ.

‘ಆಸ್ಟ್ರೇಲಿಯಾ, ಇಂಗ್ಲೆಂಡ್‌ನಂತಹ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯ ತಂಡಕ್ಕಿದೆ. ಟ್ವೆಂಟಿ–20 ಮಾದರಿಯಲ್ಲಿ ತಂಡವನ್ನು ಮುನ್ನಡೆಸಲು ಹರ್ಮನ್‌ಪ್ರೀತ್‌ ಕೌರ್ ಸಮರ್ಥರಾಗಿದ್ದಾರೆ. ಮಿಥಾಲಿ ರಾಜ್‌ ನಿವೃತ್ತಿಯ ಬಳಿಕ ಏಕದಿನ ತಂಡದ ಸಾರಥ್ಯವನ್ನೂ ಹರ್ಮನ್‌ಪ್ರೀತ್‌ಗೆ ವಹಿಸಲು ನಾವು ಚಿಂತಿಸಿದ್ದೆವು’ ಎಂದು 44 ವರ್ಷ ವಯಸ್ಸಿನ ಹೇಮಲತಾ ಹೇಳಿದ್ದಾರೆ.

ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ನಮ್ಮ ತಂಡವು ಎಲ್ಲಾ ವಿಧದಲ್ಲೂ ತುಂಬಾ ಹಿಂದಿದೆ ಎಂದು ಇತ್ತೀಚೆಗೆ ಹರ್ಮನ್‌ಪ್ರೀತ್‌ ಕೌರ್‌ ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಹೇಮಲತಾ ‘ಈ ಮಾತನ್ನು ನಾನು ಒಪ್ಪುವುದಿಲ್ಲ. ನಮ್ಮ ತಂಡದವರು ಈ ಹಿಂದೆ ಹಲವು ಸಲ ಆಸ್ಟ್ರೇಲಿಯಾವನ್ನು ಮಣಿಸಿದ್ದಾರೆ. ಕಾಂಗರೂ ನಾಡಿನ ತಂಡದವರು ಫೈನಲ್‌ ಪಂದ್ಯಗಳಲ್ಲಿ ಒತ್ತಡ ಮೀರಿನಿಂತು ಆಡುವ ಕಲೆಯನ್ನು ಕರಗತಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ನಾವು ಹಿಂದುಳಿದಿದ್ದೇವೆ. 2021ರ ವಿಶ್ವಕಪ್‌ನಲ್ಲಾದರೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು’ ಎಂದಿದ್ದಾರೆ.

‘ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಅನೇಕ ಯೋಜನೆಗಳನ್ನು ರೂಪಿಸಿದೆ. ಮಹಿಳಾ ಟ್ವೆಂಟಿ–20 ಚಾಲೆಂಜ್‌ ಇದಕ್ಕೊಂದು ಉದಾಹರಣೆ. ಪುರುಷರ ರೀತಿಯಲ್ಲೇ ಆರು ತಂಡಗಳನ್ನೊಳಗೊಂಡ ಮಹಿಳಾ ಐಪಿಎಲ್‌ ನಡೆಸಲು ಇನ್ನೂ ಮೂರು ವರ್ಷವಾದರೂ ಬೇಕು’ ಎಂದು ನುಡಿದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.