ADVERTISEMENT

Asia Cup Under 19: ಫೈನಲ್‌ನಲ್ಲಿ ಭಾರತಕ್ಕೆ ಬಾಂಗ್ಲಾ ಬೌಲರ್‌ಗಳ ಸವಾಲು

ಪಿಟಿಐ
Published 7 ಡಿಸೆಂಬರ್ 2024, 11:46 IST
Last Updated 7 ಡಿಸೆಂಬರ್ 2024, 11:46 IST
ವೈಭವ್ ಸೂರ್ಯವಂಶಿ ಎಪಿ/ಪಿಟಿಐ ಚಿತ್ರ
ವೈಭವ್ ಸೂರ್ಯವಂಶಿ ಎಪಿ/ಪಿಟಿಐ ಚಿತ್ರ   

ದುಬೈ: ಭಾರತ ತಂಡ, ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಪುರುಷರ ಏಷ್ಯಾ ಕಪ್ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಭಾರತದ ಬಲಾಢ್ಯ ಬ್ಯಾಟಿಂಗ್‌ ಮತ್ತು ಬಾಂಗ್ಲಾದೇಶ ತಂಡದ ಚುರುಕಿನ ಬೌಲಿಂಗ್ ನಡುವಿನ ಪೈಪೋಟಿಗೆ ಫೈನಲ್ ವೇದಿಕೆಯಾಗಿದೆ.

ಈ ಟೂರ್ನಿಯ ಇತಿಹಾಸ ಗಮನಿಸಿದಲ್ಲಿ ಭಾರತ ಯಶಸ್ವಿ ತಂಡ ಎನಿಸಿದ್ದು, ಇದುವರೆಗೆ ಎಂಟು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಮೂರು ವರ್ಷಗಳ ನಂತರ ಪ್ರಶಸ್ತಿ ಮರಳಿ ಪಡೆಯಲು ತುದಿಗಾಲಿನಲ್ಲಿದೆ. ಈ ಹಿಂದಿನ ಆವೃತ್ತಿಯಲ್ಲಿ ಭಾರತ ತಂಡವನ್ನು ಮಣಿಸಿದ್ದ ಹಾಲಿ ಚಾಂಪಿಯನ್ ಬಾಂಗ್ಲಾದೇಶ ಪ್ರಶಸ್ತಿ ಉಳಿಸಿಕೊಳ್ಳುವ ತವಕದಲ್ಲಿದೆ.

ಭಾರತದ ಆರಂಭ ಆಟಗಾರರಾದ ಆಯುಷ್‌ ಮ್ಹಾತ್ರೆ (175 ರನ್‌) ಮತ್ತು 13 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ (167) ಅವರು ಟೂರ್ನಿಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿದ್ದಾರೆ.

ADVERTISEMENT

ಇನ್ನೊಂದು ಕಡೆ ಬಾಂಗ್ಲಾದೇಶ ತಂಡ ವೇಗದ ಬೌಲರ್‌ಗಳಾದ ಮೊಹಮ್ಮದ್ ಅಲ್‌ ಫಹದ್ ಮತ್ತು ಮೊಹಮದ್‌ ಇಕ್ಬಾಲ್ ಹಸನ್ ಇಮೊನ್ ಅವರ ದಾಳಿಯನ್ನು ನೆಚ್ಚಿಕೊಂಡಿದೆ. ಇಬ್ಬರೂ ತಲಾ 10 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಭಾರತ ಈ ಟೂರ್ನಿಯಲ್ಲಿ ಹಿನ್ನಡೆಯಿಂದ ಪುಟಿದೆದ್ದು ಬಂದಿದೆ. ಗುಂಪು ಹಂತದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಸೋತಿದ್ದ ಭಾರತ ನಂತರ ಚೇತರಿಸಿಕೊಂಡು, ಸೆಮಿಫೈನಲ್‌ನಲ್ಲಿ ಶ್ರೀಲಂಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಬಾಂಗ್ಲಾದೇಶ ಕಥೆಯೂ ಭಿನ್ನವಾಗಿಲ್ಲ. ಅದು ಶ್ರೀಲಂಕಾ ಎದುರು ಗುಂಪು ಹಂತದಲ್ಲಿ ಸೋಲನುಭವಿಸಿದ್ದ ಬಾಂಗ್ಲಾದೇಶ, ನಾಕೌಟ್ ತಲುಪಿದ ಮೇಲೆ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡದ ಮೇಲೆ ಏಳು ವಿಕೆಟ್‌ಗಳ ಸುಲಭ ಜಯಪಡೆದಿತ್ತು.

ಕಳೆದ ಬಾರಿಯ ಹಿನ್ನಡೆಗೆ ಪ್ರತೀಕಾರ ತೀರಿಸಿಕೊಳ್ಳಲು ಮೊಹಮ್ಮದ್ ಅಮಾನ್ ನೇತೃತ್ವದ ಭಾರತ ತಂಡಕ್ಕೆ ನಾಳೆ ಉತ್ತಮ ಅವಕಾಶವಿದೆ.

ಪಂದ್ಯ ಆರಂಭ: ಬೆಳಿಗ್ಗೆ 10.15

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.