ADVERTISEMENT

ಪರ್ಯಾಯ ಮಾರ್ಗ ಕಂಡುಕೊಳ್ಳಲೇಬೇಕು: ಜಸ್‌ಪ್ರೀತ್‌ ಬೂಮ್ರಾ

ಭಾರತದ ಮಧ್ಯಮ ವೇಗದ ಬೌಲರ್‌ ಅಭಿಪ್ರಾಯ

ಏಜೆನ್ಸೀಸ್
Published 1 ಜೂನ್ 2020, 19:30 IST
Last Updated 1 ಜೂನ್ 2020, 19:30 IST
ಜಸ್‌ಪ್ರೀತ್‌ ಬೂಮ್ರಾ 
ಜಸ್‌ಪ್ರೀತ್‌ ಬೂಮ್ರಾ    

ನವದೆಹಲಿ: ‘ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ), ಕೊರೊನಾ ವೈರಾಣು ಹರಡುವುದನ್ನು ತಡೆಗಟ್ಟುವ ಸಲುವಾಗಿ ಚೆಂಡಿಗೆ ಎಂಜಲು ಹಚ್ಚುವುದನ್ನು ನಿಷೇಧಿಸಿದರೆ, ಚೆಂಡಿನ ಹೊಳಪಿಗಾಗಿ ಪರ್ಯಾಯ ಮಾರ್ಗ ಕಂಡುಕೊಳ್ಳುವುದು ಅನಿವಾರ್ಯ’ ಎಂದು ಭಾರತ ಕ್ರಿಕೆಟ್‌ ತಂಡದ ಮಧ್ಯಮ ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಚೆಂಡಿಗೆ ಎಂಜಲು ಹಚ್ಚುವ ಪದ್ಧತಿಗೆ ತಿಲಾಂಜಲಿ ಇಡಬೇಕೆಂದು ಅನಿಲ್‌ ಕುಂಬ್ಳೆ ನೇತೃತ್ವದ ಕ್ರಿಕೆಟ್‌ ಸಮಿತಿಯು ಐಸಿಸಿಗೆ ತಿಳಿಸಿದೆ. ಮುಂದಿನ ವಾರ ನಡೆಯುವ ಸಭೆಯಲ್ಲಿ ಐಸಿಸಿ, ಈ ಕುರಿತು ಮತ್ತೊಮ್ಮೆ ಚರ್ಚಿಸಿ, ಅಂತಿಮ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

‘ಪಂದ್ಯದ ವೇಳೆ ಎದುರಾಳಿ ಬ್ಯಾಟ್ಸ್‌ಮನ್‌ ಅನ್ನು ಔಟ್‌ ಮಾಡಿದ ಬಳಿಕ ನಾನು ಸಹ ಆಟಗಾರರನ್ನು ಅಪ್ಪಿಕೊಂಡು ಸಂಭ್ರಮಿಸುವುದು ತೀರಾ ವಿರಳ. ‘ಹೈ ಫೈವ್‌’ ಸಂಭ್ರಮದಿಂದಲೂ ದೂರವೇ ಉಳಿಯುತ್ತೇನೆ. ಇವೆರಡಕ್ಕೂ ಕಡಿವಾಣ ಹಾಕಿದರೆ ವೈಯಕ್ತಿಕವಾಗಿ ನನಗೇನೂ ಸಮಸ್ಯೆಯಾಗುವುದಿಲ್ಲ’ ಎಂದು ವೆಸ್ಟ್‌ ಇಂಡೀಸ್‌ನ ಇಯಾನ್‌ ಬಿಷಪ್‌ ಹಾಗೂ ದಕ್ಷಿಣ ಆಫ್ರಿಕಾದ ಶಾನ್‌ ಪೊಲಾಕ್‌ ಅವರ ಜೊತೆಗಿನ ಐಸಿಸಿ ವಿಡಿಯೊ ಸಂವಾದದಲ್ಲಿ ಭಾಗಿಯಾಗಿದ್ದ ಬೂಮ್ರಾ ತಿಳಿಸಿದ್ದಾರೆ.

ADVERTISEMENT

‘ಮತ್ತೆ ಕ್ರಿಕೆಟ್‌ ಅಂಗಳಕ್ಕೆ ಮರಳಿದ ಬಳಿಕ ನಾವು ಯಾವೆಲ್ಲ ನಿಯಮಗಳನ್ನು ಪಾಲಿಸಬೇಕೊ ಗೊತ್ತಿಲ್ಲ. ಚೆಂಡು ಹಳತಾದ ಬಳಿಕ ಅದಕ್ಕೆ ಹೊಳಪು ನೀಡಲು ಎಂಜಲು ಹಚ್ಚಲೇಬೇಕಾಗುತ್ತದೆ. ಇದನ್ನು ನಿಷೇಧಿಸಿದರೆ ಬೌಲರ್‌ಗಳಿಗೆ ತುಂಬಾ ಕಷ್ಟವಾಗುತ್ತದೆ. ಚೆಂಡು ತಿರುವು ಪಡೆಯುವಂತೆ ಮಾಡಲು ನಾವು ಬೇರೆ ದಾರಿ ಹುಡುಕಲೇಬೇಕು’ ಎಂದೂ 26 ವರ್ಷ ವಯಸ್ಸಿನ ಬೂಮ್ರಾ ನುಡಿದಿದ್ದಾರೆ.

ಬೌಲರ್‌ಗಳ ಹಿತದೃಷ್ಟಿಯಿಂದಆಸ್ಟ್ರೇಲಿಯಾದ ಕೂಕಬುರಾ ಸಂಸ್ಥೆಯು ಮೇಣ ಹಚ್ಚಿ ಹೊಳಪು ಮೂಡಿಸಬಹುದಾದಂತಹ ಚೆಂಡುಗಳನ್ನು ತಯಾರಿಸಲು ಮುಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.