ADVERTISEMENT

ಟಿ–20 ಕ್ರಿಕೆಟ್‌: ರೋಹಿತ್‌, ವಿರಾಟ್‌ ದಾಖಲೆ ಮುರಿದ ಮಿಥಾಲಿ ರಾಜ್‌

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2018, 5:54 IST
Last Updated 16 ನವೆಂಬರ್ 2018, 5:54 IST
   

ಬೆಂಗಳೂರು: ಭಾರತ ಮಹಿಳಾ ಕ್ರಿಕೆಟ್‌ ತಂಡದ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರು ಟಿ20 ಅಂತರಾಷ್ಟ್ರೀಯ ಪಂದ್ಯಗಳ ರನ್‌ ಗಳಿಕೆಯಲ್ಲಿ ಪುರುಷರ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಹಿಂದಿಕ್ಕಿದ ಸಾಧನೆ ಮಾಡಿದ್ದಾರೆ.

ಸದ್ಯಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಡುತ್ತಿರುವ ಮಿಥಾಲಿ, ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ 51 ರನ್‌ಗಳಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಅವರ ಆಟದ ಬಲದಿಂದ ಹರ್ಮನ್‌ ಪ್ರೀತ್‌ ಕೌರ್‌ ಬಳಗ 52ರನ್‌ಗಳ ಸುಲಭ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ ತಂಡಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಮೂರನೇ ಬಾರಿ ಸೆಮಿಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿತು.

ಸದ್ಯ ಮಹಿಳೆಯರ ಏಕದಿನ ಕ್ರಿಕೆಟ್‌ ಪಂದ್ಯಗಳಲ್ಲಿ ಅತಿಹೆಚ್ಚು ರನ್‌(6550) ಗಳಿಸಿದ ಆಟಗಾರ್ತಿ ಎನಿಸಿಕೊಂಡಿರುವ ಮಿಥಾಲಿ, ಒಟ್ಟಾರೆ ಭಾರತ ಪರ (ಪುರುಷ ಹಾಗೂ ಮಹಿಳೆಯರ) ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಶ್ರೇಯಕ್ಕೆ ಪಾತ್ರವಾದರು.

ADVERTISEMENT

ಈವರೆಗೆ ಟಿ20 ಕ್ರಿಕೆಟ್‌ನ 80 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಅವರು 2283 ರನ್‌ ಗಳಿಸಿದ್ದಾರೆ. ಇಷ್ಟೇ ಸಂಖ್ಯೆಯ ಇನಿಂಗ್ಸ್‌ಗಳನ್ನು ಆಡಿರುವ ರೋಹಿತ್‌ ಶರ್ಮಾ 2207 ರನ್‌ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನಗಳಲ್ಲಿ ವಿರಾಟ್‌ ಕೊಹ್ಲಿ(2102ರನ್‌, 58 ಇನಿಂಗ್ಸ್‌), ಹರ್ಮನ್‌ಪ್ರೀತ್‌ ಕೌರ್‌(1827ರನ್‌, 80 ಇನಿಂಗ್ಸ್‌), ಸುರೇಶ್‌ ರೈನಾ(1605ರನ್‌, 66 ಇನಿಂಗ್ಸ್‌) ಹಾಗೂ ಮಹೇಂದ್ರ ಸಿಂಗ್‌ ದೋನಿ(1487ರನ್‌, 80ಇನಿಂಗ್ಸ್‌) ಇದ್ದಾರೆ.

ಈ ಮಾಹಿತಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ(ಐಸಿಸಿ) ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.