ADVERTISEMENT

ಭಾರತ–ಲಂಕಾ ಕ್ರಿಕೆಟ್‌ ಸರಣಿ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 21:40 IST
Last Updated 11 ಜೂನ್ 2020, 21:40 IST

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಣ ನಿಗದಿತ ಓವರ್‌ಗಳ ಕ್ರಿಕೆಟ್‌ ಸರಣಿಯನ್ನು ಕೊರೊನಾ ವೈರಾಣು ಹರಡುವ ಭೀತಿಯಿಂದಾಗಿ ಮುಂದಕ್ಕೆ ಹಾಕಲಾಗಿದೆ.

ಭಾರತ ತಂಡವು ತಲಾ ಮೂರು ಪಂದ್ಯಗಳ ಏಕದಿನ ಹಾಗೂ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಆಡಲು ಈ ತಿಂಗಳ ಅಂತ್ಯದಲ್ಲಿ ಸಿಂಹಳೀಯ ನಾಡಿಗೆ ಪ್ರವಾಸ ಕೈಗೊಳ್ಳಬೇಕಿತ್ತು.

‘ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಈ ಸಮಯದಲ್ಲಿ ಲಂಕಾ ಪ್ರವಾಸ ಕೈಗೊಳ್ಳುವುದು ಸೂಕ್ತವಲ್ಲ. ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಜೂನ್‌ ಮತ್ತು ಜುಲೈನಲ್ಲಿ ನಿಗದಿಯಾಗಿದ್ದ ಸರಣಿಗಳನ್ನು ಮುಂದಕ್ಕೆ ಹಾಕಿದ್ದೇವೆ’ ಎಂದು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಖಜಾಂಚಿ ಅರುಣ್‌ ಸಿಂಗ್‌ ಧುಮಾಲ್‌ ತಿಳಿಸಿದ್ದಾರೆ.

ADVERTISEMENT

‘ಫ್ಯೂಚರ್‌ ಟೂರ್ಸ್‌ ಪ್ರೋಗ್ರಾಮ್‌ಗೆ (ಎಫ್‌ಟಿಪಿ) ನಾವು ಬದ್ಧರಾಗಿದ್ದೇವೆ. ಕೊರೊನಾ ಬಿಕ್ಕಟ್ಟು ಬಗೆಹರಿದ ಬಳಿಕ ಲಂಕಾ ಪ್ರವಾಸ ಕೈಗೊಳ್ಳಲಿದ್ದೇವೆ. ಈ ಸಂಬಂಧ ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಜೊತೆ ಚರ್ಚಿಸಿದ್ದೇವೆ. ಶೀಘ್ರವೇ ಹೊಸ ದಿನಾಂಕಗಳನ್ನು ಪ್ರಕಟಿಸುತ್ತೇವೆ’ ಎಂದೂ ಅವರು ಹೇಳಿದ್ದಾರೆ.

ಹೊರಾಂಗಣ ಅಭ್ಯಾಸಕ್ಕೆ ಕೇಂದ್ರ ಕ್ರೀಡಾ ಸಚಿವಾಲಯ ಹಸಿರು ನಿಶಾನೆ ತೋರಿದೆ. ಹೀಗಿದ್ದರೂ ಕ್ರಿಕೆಟಿಗರು ತಾಲೀಮಿನಿಂದ ದೂರ ಉಳಿದಿದ್ದಾರೆ.

ತರಬೇತಿ ಆರಂಭವಾದ ಬಳಿಕ ‘ಮ್ಯಾಚ್‌ ಫಿಟ್‌ನೆಸ್‌’ ಮರಳಿ ಪಡೆಯಲು ಕ್ರಿಕೆಟಿಗರಿಗೆ ನಾಲ್ಕರಿಂದ ಆರು ವಾರಗಳು ಬೇಕಾಗುತ್ತವೆ. ಹೀಗಾಗಿ ಆಗಸ್ಟ್‌ನಲ್ಲಿ ಸರಣಿ ನಡೆಸಲು ಉಭಯ ಮಂಡಳಿಗಳು ಚಿಂತಿಸಿವೆ ಎಂದೂ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.