ADVERTISEMENT

INDvsAUS ಸರಣಿ: ಒಂದಕ್ಕಿಂತ ಹೆ‌ಚ್ಚು ಹಗಲು–ರಾತ್ರಿ ಟೆಸ್ಟ್ ಆಯೋಜನೆಯತ್ತ ಚಿತ್ತ

ಪಿಂಕ್‌ ಟೆಸ್ಟ್‌

ಏಜೆನ್ಸೀಸ್
Published 6 ಡಿಸೆಂಬರ್ 2019, 10:06 IST
Last Updated 6 ಡಿಸೆಂಬರ್ 2019, 10:06 IST
   

ಮೆಲ್ಬೋರ್ನ್‌: ಆಸ್ಟ್ರೇಲಿಯಾದಲ್ಲಿ ಭಾರತ ತಂಡದೆದುರು 2021ರಲ್ಲಿ ನಡೆಯಲಿರುವ ಟೆಸ್ಟ್‌ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಹಗಲು–ರಾತ್ರಿ ಪಂದ್ಯಗಳನ್ನು ಆಯೋಜಿಸಲು ಅನುಮತಿ ಕೋರಿ ಬಿಸಿಸಿಐಗೆ ಮನವಿ ಸಲ್ಲಿಸಲು ಕ್ರಿಕೆಟ್‌ ಆಸ್ಟ್ರೇಲಿಯಾ(ಸಿಎ) ಸಜ್ಜಾಗಿದೆ.

ಮುಂದಿನ ವರ್ಷ ಜನವರಿಯಲ್ಲಿ ನಡೆಯುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಆಡಲು ಆಸಿಸ್‌ ತಂಡ ಭಾರತಕ್ಕೆ ಬರಲಿದೆ. ಈ ಸರಣಿ ನಡುವೆ ಸಿಎಮುಖ್ಯಸ್ಥ ಎರ್ಲ್‌ ಎಡಿಂಗ್ಸ್‌, ಬಿಸಿಸಿಐ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಮಾಡಿದೆ. ಈ ಸರಣಿಯು ಜನವರಿ 14ರಿಂದ ಆರಂಭವಾಗಲಿದೆ.

ಕ್ರಿಕ್‌ಇನ್ಫೋ ಜೊತೆ ಮಾತನಾಡಿರುವ ಎಡಿಂಗ್ಸ್‌, ‘ಅವರು(ಭಾರತ ತಂಡ) ಮೊದಲ ಹಗಲು–ರಾತ್ರಿ ಪಂದ್ಯ ಆಯೋಜಿಸಿ ಸುಲಭವಾಗಿ ಗೆದ್ದಿದ್ದಾರೆ. ಹೀಗಾಗಿ ಹಗಲು–ರಾತ್ರಿ ಪಂದ್ಯಗಳ ಬಗ್ಗೆ ಸ್ಪಷ್ಟತೆ ಗಳಿಸಿರುತ್ತಾರೆ. ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಲು ಸಮ್ಮತಿ ಸೂಚಿಸಲಿದ್ದಾರೆ ಎಂಬ ಬಗ್ಗೆ ಯಾವುದೇ ಅನುಮಾನಗಳು ಇಲ್ಲ. ಜನವರಿ ಭೇಟಿ ವೇಳೆ ಆ ಬಗ್ಗೆ ಮಾತುಕತೆ ನಡೆಸಲಿದ್ದೇವೆ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಎಬಿಸಿ ರೆಡಿಯೊಗೆ ಹೇಳಿಕೆ ನೀಡಿದ್ದಸಿಎ ಸಿಇಒ ಕೆವಿನ್‌ ರಾಬರ್ಟ್‌, ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಹೆಚ್ಚು ಹಗಲು ರಾತ್ರಿ ಪಂದ್ಯ ಆಯೋಜನೆ ಕುರಿತು ಮಾತನಾಡಿದ್ದರು.

ಭಾರತದಲ್ಲಿ ಹಗಲು–ರಾತ್ರಿ ಟೆಸ್ಟ್‌ ಆಯೋಜಿಸಲುಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿವಿಶೇಷ ಕಾಳಜಿ ತೋರಿದ್ದರು. ಅದರಂತೆ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯ ಕೊನೆಯ ಪಂದ್ಯವನ್ನು ಹಗಲು–ರಾತ್ರಿ ಆಯೋಜಿಸಲಾಗಿತ್ತು. ಅಕ್ಟೋಬರ್‌22-26ರವರೆಗೆ ನಡೆದ ಪಂದ್ಯವನ್ನು ಭಾರತ ಇನಿಂಗ್ಸ್‌ ಹಾಗೂ 46 ರನ್‌ ಅಂತರದಿಂದ ಗೆದ್ದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.