ADVERTISEMENT

ಕ್ರಿಕೆಟ್‌ ಟೆಸ್ಟ್‌: ಆಸ್ಟ್ರೇಲಿಯಾಕ್ಕೆ ಗೆಲುವಿನ ಕನಸು

ಪ್ಯಾಟ್‌ ಕಮಿನ್ಸ್‌ ಪ್ರಭಾವಿ ಬೌಲಿಂಗ್

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 11:03 IST
Last Updated 7 ಜನವರಿ 2023, 11:03 IST
ಪ್ಯಾಟ್‌ ಕಮಿನ್ಸ್‌ ಸಂಭ್ರಮ –ಎಎಫ್‌ಪಿ ಚಿತ್ರ
ಪ್ಯಾಟ್‌ ಕಮಿನ್ಸ್‌ ಸಂಭ್ರಮ –ಎಎಫ್‌ಪಿ ಚಿತ್ರ   

ಸಿಡ್ನಿ (ಎಎಫ್‌ಪಿ): ನಾಯಕ ಪ್ಯಾಟ್‌ ಕಮಿನ್ಸ್‌ ಅವರ ಪ್ರಭಾವಿ ಬೌಲಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಮೇಲುಗೈ ಸಾಧಿಸಿದೆ.

ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ನಾಲ್ಕನೇ ದಿನವಾದ ಶನಿವಾರದ ಆಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳಿಗೆ 149 ರನ್‌ ಗಳಿಸಿದೆ. ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 475 ರನ್‌ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಂಡಿತ್ತು.

ಪಂದ್ಯದ ಮೂರನೇ ದಿನದಾಟ ಮಳೆಯಿಂದ ರದ್ದಾಗಿತ್ತು. ನಾಲ್ಕನೇ ದಿನವೂ ಭೋಜನ ವಿರಾಮದವರೆಗೆ ಆಟ ನಡೆಯಲಿಲ್ಲ. ಒಟ್ಟು 59 ಓವರ್‌ಗಳ ಆಟಕ್ಕೆ ಮಳೆ ಅವಕಾಶ ನೀಡಿತು.

ADVERTISEMENT

ಆಸ್ಟ್ರೇಲಿಯಾ ಅದೇ ಮೊತ್ತಕ್ಕೆ ಇನಿಂಗ್ಸ್‌ ಡಿಕ್ಲೇರ್‌ ಮಾಡಿದ್ದರಿಂದ ಉಸ್ಮಾನ್‌ ಖ್ವಾಜಾ (ಔಟಾಗದೆ 195) ಅವರು ದ್ವಿಶತಕ ಗಳಿಸುವ ಅವಕಾಶ ಕಳೆದುಕೊಂಡರು.

ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್‌ ವೈಫಲ್ಯ ಈ ಪಂದ್ಯದಲ್ಲೂ ಮುಂದುವರಿಯಿತು. ಕಮಿನ್ಸ್‌ (29ಕ್ಕೆ 3) ಮತ್ತು ಹ್ಯಾಜೆಲ್‌ವುಡ್‌ (29ಕ್ಕೆ 2) ಅವರು ಪ್ರವಾಸಿ ತಂಡಕ್ಕೆ ಆಘಾತ ನೀಡಿದರು. ತೆಂಬಾ ಬವುಮಾ (35) ಹಾಗೂ ಖಾಯಾ ಜೊಂಡೊ (39) ಅಲ್ಪ ಪ್ರತಿರೋಧ ಒಡ್ಡಿದರು.

ಅಂತಿಮ ದಿನದಾಟಕ್ಕೆ ಮಳೆ ಅವಕಾಶ ನೀಡಿದರೆ, ಆಸ್ಟ್ರೇಲಿಯಾ ಗೆಲುವಿಗೆ ಪ್ರಯತ್ನಿಸಲಿದೆ. ಮೊದಲ ಎರಡು ಟೆಸ್ಟ್‌ ಜಯಿಸಿರುವ ಕಮಿನ್ಸ್‌ ಬಳಗ ಈ ಪಂದ್ಯವನ್ನೂ ಗೆದ್ದರೆ ‘ಕ್ಲೀನ್‌ಸ್ವೀಪ್’ ಸಾಧನೆ ಮಾಡಲಿದೆ.

ಸಂಕ್ಷಿಪ್ತ ಸ್ಕೋರ್‌: ಮೊದಲ ಇನಿಂಗ್ಸ್‌: ಆಸ್ಟ್ರೇಲಿಯಾ 4 ವಿಕೆಟ್‌ಗಳಿಗೆ 475 ಡಿಕ್ಲೇರ್ಡ್‌. ದಕ್ಷಿಣ ಆಫ್ರಿಕಾ 59 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 (ಡೀನ್‌ ಎಲ್ಗರ್‌ 15, ಸಾರೆಲ್‌ ಎರ್ವಿ 18, ತೆಂಬಾ ಬವುಮಾ 35, ಖಾಯಾ ಜೊಂಡೊ 39, ಕೈಲ್‌ ವೆರೆಯ್ನ್‌ 19, ಪ್ಯಾಟ್‌ ಕಮಿನ್ಸ್‌ 29ಕ್ಕೆ 3, ಜೋಶ್‌ ಹ್ಯಾಜೆಲ್‌ವುಡ್‌ 29ಕ್ಕೆ 2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.