ADVERTISEMENT

ಜಿ.ಕೆ.ಅನಿಲ್ ಕುಮಾರ್ ಸಂದರ್ಶನ: ಯುವ ಆಟಗಾರರಿಗೆ ಖಾಲಿ ಕ್ರೀಡಾಂಗಣದ ಲಾಭ

ಐಪಿಎಲ್ ವೀಕ್ಷಕ ವಿವರಣೆಗಾರ

ಗಿರೀಶದೊಡ್ಡಮನಿ
Published 8 ನವೆಂಬರ್ 2020, 19:29 IST
Last Updated 8 ನವೆಂಬರ್ 2020, 19:29 IST
ಜಿ.ಕೆ. ಅನಿಲಕುಮಾರ್ (ಎಡಬದಿ)
ಜಿ.ಕೆ. ಅನಿಲಕುಮಾರ್ (ಎಡಬದಿ)   

ಬೆಂಗಳೂರು: 'ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಹೊಸ ಹುಡುಗರುತುಂಬಾ ಚೆನ್ನಾಗಿ ಆಡುತ್ತಿದ್ದಾರೆ. ಅದರ ಹಿಂದಿರುವ ಕಾರಣಗಳಲ್ಲಿ ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣವೂ ಒಂದು. ಅವರು ವಯೋಮಿತಿಯ ಮತ್ತು ದೇಶಿ ಟೂರ್ನಿಗಳಲ್ಲಿ ಖಾಲಿ ಮೈದಾನಗಳಲ್ಲಿ ಆಡಿದ ಅನುಭವ ಇಲ್ಲಿ ಅವರಿಗೆ ಅನುಕೂಲವಾಯಿತು. ಬೇಕಾದರೆ ಎಲ್ಲ ತಂಡಗಳ ಯುವ ಆಟಗಾರರ ಸಾಧನೆಯನ್ನು ನೋಡಿ' –

ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ವಾಹಿನಿಯಲ್ಲಿ ಐಪಿಎಲ್‌ ವೀಕ್ಷಕ ವಿವರಣೆ ನೀಡುತ್ತಿರುವ ಮಾಜಿ ಕ್ರಿಕೆಟಿಗ ಜಿ.ಕೆ.ಅನಿಲ್ ಕುಮಾರ್ ಅವರ ವಿಶ್ವಾಸದ ನುಡಿಗಳಿವು. ಅನುಭವಿ ಕೋಚ್ ಕೂಡ ಆಗಿರುವ ಬೆಂಗಳೂರಿನ ಅನಿಲಕುಮಾರ್ ಅವರು ಪ್ರಜಾವಾಣಿಗೆ ನೀಡಿದ ಸಂದರ್ಶನ ಇಲ್ಲಿದೆ.

* ಕೊರೊನಾ ಕಾಲದಲ್ಲಿ ನಡೆಯುತ್ತಿರುವ ಈ ಟೂರ್ನಿಯಲ್ಲಿ ಆಟಗಾರರ ಮೇಲಿರುವ ಒತ್ತಡ ಯಾವ ರೀತಿಯದ್ದು? ಅದನ್ನು ಅವರು ಹೇಗೆ ನಿಭಾಯಿಸಿದ್ದಾರೆ?

ADVERTISEMENT

ಆಟಗಾರರು ಯಾವಾಗಲೂ ಮಾನಸಿಕವಾಗಿ ಬಹಳ ಗಟ್ಟಿಯಾಗಿರುತ್ತಾರೆ. ಆದರೆ ಕೊರೊನಾ ಸಂಕಷ್ಟವು ಅನಿರೀಕ್ಷಿತವಾಗಿತ್ತು. ಅಭ್ಯಾಸಕ್ಕೆ ಅವಕಾಶ ಕಡಿಮೆ ಇತ್ತು. ಆದರೂ ತಮ್ಮ ಮನೆಗಳಲ್ಲಿ, ವಸತಿ ಸಂಕೀರ್ಣಗಳಲ್ಲಿ ಲಭ್ಯವಿದ್ದ ಸೌಲಭ್ಯಗಳನ್ನೇ ಬಳಸಿಕೊಂಡು ಫಿಟ್‌ನೆಸ್‌ ಉಳಿಸಿಕೊಂಡಿರುವುದು ಶ್ಲಾಘನೀಯ. ಆದರೆ, ಖಾಲಿ ಕ್ರೀಡಾಂಗಣಗಳಲ್ಲಿ ಆಡುವುದು ನಿಜಕ್ಕೂ ಸವಾಲು. ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಿದ ಆಟಗಾರರಿಗೆ ಅದು ನಿಜಕ್ಕೂ ಕಠಿಣ. ಆದರೆ, ಯುವ ಆಟಗಾರರು, ದೇಶಿ ಕ್ರಿಕೆಟ್‌ನಲ್ಲಿ ಆಡಿ ಹೋದವರಿಗೆ ಇದರಿಂದ ತೊಂದರೆಯಾಗಿಲ್ಲ. ಅದರಲ್ಲೂ ಪದಾರ್ಪಣೆ ಮಾಡಿದವರಂತೂ ಅದಕ್ಕಾಗಿಯೇ ಮಿಂಚುತ್ತಿದ್ದಾರೆ.

(ಕೆಳಗಿನ ಪ್ಲೇಯರ್‌ ಕ್ಲಿಕ್‌(I>) ಮಾಡಿ ಸಂದರ್ಶನದ ಪಾಡ್‌ಕಾಸ್ಟ್ ಕೇಳಿ)

* ಆರ್‌ಸಿಬಿಯಲ್ಲಿ ಆಡಿದ ದೇವದತ್ತ ಪಡಿಕ್ಕಲ್‌ ಅವರ ಬಗ್ಗೆ ಏನ್ ಹೇಳ್ತೀರಿ?

– ಅದ್ಭುತ ಪ್ರತಿಭೆ ಅದು. ಪಂದ್ಯವನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಾರೆ. ಪರಿಸ್ಥಿತಿಗೆ ತಕ್ಕಂತೆ ಆಡುತ್ತಾರೆ. ಅವರು ಕರ್ನಾಟಕ ತಂಡದಲ್ಲಿದ್ದಾಗ ನಾನು ಕೋಚ್ ಆಗಿ ನೋಡಿದ್ದೇನೆ. ಅವರ ಅಭ್ಯಾಸದಲ್ಲಿ ಪರಿಶ್ರಮಪಡುತ್ತಾರೆ. ಹೆಚ್ಚು ಕಾಲ ಆಡುತ್ತಾರೆ. ಆರ್‌ಸಿಬಿಯಲ್ಲಿರುವ ತಾರಾ ಆಟಗಾರರನ್ನು ನೋಡಿಯೂ ಕಲಿಯುವ ತಾಳ್ಮೆ ಮತ್ತು ವಿವೇಕ ಅವರಲ್ಲಿದೆ. ಅವರಿಗೆ ಉಜ್ವಲ ಭವಿಷ್ಯ ಇದೆ.

* ಈ ಟೂರ್ನಿಯಲ್ಲಿ ಕರ್ನಾಟಕದ ಹುಡುಗರ ಆಟದ ಬಗ್ಗೆ ನಿಮ್ಮ ಅಭಿಪ್ರಾಯವೇನು?

– ಕೆ.ಎಲ್. ರಾಹುಲ್, ಮಯಂಕ್ ಅಗರವಾಲ್, ದೇವದತ್ತ ಪಡಿಕ್ಕಲ್, ಶ್ರೇಯಸ್ ಗೋಪಾಲ್ ಅವರೆಲ್ಲರನ್ನೂ 14 ವರ್ಷದೊಳಗಿನವರ ವಯೋಮಿತಿಯಲ್ಲಿ ಆಡುವಾಗಿನಿಂದಲೂ ನೋಡಿದ್ದೇನೆ. ಮಾರ್ಗದರ್ಶನ ನೀಡಿದ್ದೇನೆ. ಅದೇ ಹುಡುಗರು ಇವತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ಅದ್ಭುತವಾಗಿ ಆಡುತ್ತಿದ್ದಾರೆ. ಅವರ ಬಗ್ಗೆ ನಾನು ವೀಕ್ಷಕ ವಿವರಣೆ ಕೊಟ್ಟಿದ್ದು ಬಹಳ ವಿಶಿ್ಷ್ಟವಾದ ಅನುಭವ.

* ಕಾಮೆಂಟ್ರಿ ಬಾಕ್ಸ್‌ನಲ್ಲಿ ನಿಮ್ಮ ಅನುಭವ ಹೇಗಿದೆ?

–ವಿಜಯ್ ಭಾರದ್ವಾಜ್, ವೆಂಕಟೇಶ್ ಪ್ರಸಾದ್, ಜೊತೆಗೆ ಆಡಿದ್ದವರು. ಈಗ ಮತ್ತೆ ಕಾಮೆಂಟ್ರಿ ಬಾಕ್ಸ್‌ನಲ್ಲಿ ಒಂದಾಗಿ ಮಾತಾನಾಡುವುದು ವಿಶಿಷ್ಟ ಅನುಭವ. ಜಿ.ಆರ್. ವಿಶ್ವನಾಥ್ ಅವರಂತಹ ದಿಗ್ಗಜರೊಂದಿಗೆ ಕಾಮೆಂಟ್ರಿ ಮಾಡಿರುವುದು ಕೂಡ ದೊಡ್ಡ ಅನುಭವ. ರಣಜಿ ತಂಡಕ್ಕೆ ವಿನಯಕುಮಾರ್ ನಾಯಕರಾಗಿದ್ದಾಗ, ನಾನು ಕೋಚ್‌ ಆಗಿದ್ದೆ. ಈಗಲೂ ಅವರೊಂದಿಗೆ ಕಾಮೆಂಟ್ರಿಯಲ್ಲಿ ಜೊತೆಗೂಡಿದ್ದ ಖುಷಿ ಕೊಡ್ತು.

* ಐಪಿಎಲ್‌ನಲ್ಲಿ ಬೌಂಡರಿ ಲೈನ್‌ ಫೀಲ್ಡಿಂಗ್‌ ಇಷ್ಟೊಂದು ಉತ್ತಮವಾಗಿ ಬೆಳೆದಿರುವ ಹಿಂದಿನ ಗುಟ್ಟೇನು?

ಕಳೆದ ನಾಲ್ಕೈದು ವರ್ಷಗಳಿಂದ ಫೀಲ್ಡಿಂಗ್ ಕೋಚ್ ಗಳು ನೀಡುತ್ತಿರುವ ತರಬೇತಿ ಇದಕ್ಕೆ ಕಾರಣ. ಇಬ್ಬರನ್ನು ಬೌಂಡರಿಲೈನ್‌ನಲ್ಲಿ ನಿಲ್ಲಿಸಲಾಗುತ್ತದೆ. ಒಬ್ಬ ಚೆಂಡನ್ನು ಹಿಡಿದು ಇನ್ನೊಬ್ಬನಿಗೆ ಕೊಡುವುದನ್ನು ಅಭ್ಯಾಸ ಮಾಡಿಸಲಾಗುತ್ತದೆ. ಬೌಂಡರಿ ಹಗ್ಗದ ಮೇಲೆಯೇ ಕ್ಯಾಚ್‌ ಪಡೆದು ತಮ್ಮ ಕಾಲು ನೆಲಕ್ಕೆ ತಗಲುವ ಮುನ್ನವೇ ಚೆಂಡನ್ನು ಹೊರಗಿರುವ ಇನ್ನೊಬ್ಬ ಆಟಗಾರನತ್ತ ಒಗೆಯುವುದನ್ನು ಪ್ರಾಕ್ಟಿಸ್‌ ಮಾಡಿಸಲಾಗುತ್ತದೆ. ಅದು ಈಗ ಫಲ ಕೊಡುತ್ತಿದೆ. ಎಲ್ಲ ವಯೋಮಿತಿಯ ಆಟಗಾರರೂ ಈ ಅಭ್ಯಾಸವನ್ನು ಕರಗತ ಮಾಡಿಕೊಂಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ನಮ್ಮವರೂ ಸೇರಿ ಆಡುವ ಐಪಿಎಲ್‌ನಲ್ಲಿ ಇಂತಹ ಕಲೆಗಳನ್ನು ಸಿದ್ಧಿಸಿಕೊಳ್ಳಲು ಸಾಧ್ಯವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.