ADVERTISEMENT

IPL-2020: ರಾಯಲ್ಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2020, 18:45 IST
Last Updated 24 ಅಕ್ಟೋಬರ್ 2020, 18:45 IST
ಜೋಫ್ರಾ ಆರ್ಚರ್
ಜೋಫ್ರಾ ಆರ್ಚರ್   

ಅಬುಧಾಬಿ: ರಾಜಸ್ಥಾನ ರಾಯಲ್ಸ್ ತಂಡವು ಪ್ಲೇ ಆಫ್‌ ಪ್ರವೇಶದ ಸ್ಪರ್ಧೆಯಲ್ಲಿ ಜೀವಂತವಾಗಿರಬೇಕಾದರೆ ಭಾನುವಾರ ’ಹಾಲಿ ಚಾಂಪಿಯನ್‘ ಮುಂಬೈ ಇಂಡಿಯನ್ಸ್ ವಿರುದ್ಧ ಜಯಿಸಲೇಬೇಕಾದ ಒತ್ತಡದಲ್ಲಿದೆ.

ಶುಕ್ರವಾರ ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದರಿಂದ ಕೀರನ್ ಪೊಲಾರ್ಡ್ ನಾಯಕತ್ವದಲ್ಲಿ ಆಡಿದ್ದ ಮುಂಬೈ ತಂಡವು ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ 10 ವಿಕೆಟ್‌ಗಳ ಜಯ ಸಾಧಿಸಿತ್ತು. ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿತ್ತು.

ಟ್ರೆಂಟ್ ಬೌಲ್ಟ್‌ ಮತ್ತು ಜಸ್‌ಪ್ರೀತ್ ಬೂಮ್ರಾ ಚೆನ್ನೈ ತಂಡದ ಬ್ಯಾಟಿಂಗ್‌ ಪಡೆಯನ್ನು ದೂಳೀಪಟ ಮಾಡಿದ್ದರು. ಆರಂಭಿಕ ಬ್ಯಾಟಿಂಗ್ ಜೋಡಿ ಇಶಾನ್ ಕಿಶನ್ ಮತ್ತು ಕ್ವಿಂಟನ್ ಡಿ ಕಾಕ್ ಅವರು ವಿಕೆಟ್ ನಷ್ಟವಿಲ್ಲದೇ ಗೆಲುವಿನ ಗುರಿಯನ್ನು ಸುಲಭವಾಗಿ ಮುಟ್ಟಿದರು. ಎಲ್ಲ ವಿಭಾಗಗಳಲ್ಲಿಯೂ ಉತ್ತಮವಾಗಿ ಆಡುತ್ತಿರುವ ಮುಂಬೈ ತಂಡವನ್ನು ಎದುರಿಸಿ ನಿಲ್ಲುವುದು ರಾಯಲ್ಸ್‌ಗೆ ಸುಲಭಸಾಧ್ಯವಲ್ಲ.

ADVERTISEMENT

ಟೂರ್ನಿಯ ಆರಂಭದಲ್ಲಿ ಅಬ್ಬರಿಸಿದ ಸಂಜು ಸ್ಯಾಮ್ಸನ್ ಬ್ಯಾಟ್ ನಿಂದ ರನ್‌ಗಳು ಬರುತ್ತಿಲ್ಲ. ಜೋಫ್ರಾ ಆರ್ಚರ್‌ ಬಿಟ್ಟರೆ ರಾಯಲ್ಸ್‌ ತಂಡವು ಉಳಿದ ಬೌಲರ್‌ಗಳ ಮೇಲೆ ವಿಶ್ವಾಸವಿಡುವುದು ಕಷ್ಟ. ಬ್ಯಾಟಿಂಗ್‌ನಲ್ಲಿಯೂ ಜೋಫ್ರಾ ಸಿಕ್ಸರ್‌ಗಳನ್ನು ಸಿಡಿಸುತ್ತಾರೆ. ಈ ಅಸ್ಥಿರತೆಯ ನಡುವೆಯೇ ಹೋರಾಟ ಮಾಡುವ ಅನಿವಾರ್ಯತೆ ಸ್ಟೀವ್ ಸ್ಮಿತ್‌ ಬಳಗಕ್ಕೆ ಇದೆ.

ಮುಂಬೈ ತಂಡದ ನಾಯಕ ರೋಹಿತ್ ಶರ್ಮಾ ಚೇತರಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿಯಿಲ್ಲ. ರಾಯಲ್ಸ್ ಪಂದ್ಯದ ವಿರುದ್ಧ ಆಡುವುದೂ ಖಚಿತವಿಲ್ಲ.

ಪಂದ್ಯ ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಸೋಮವಾರದ ಪಂದ್ಯ: ಕೋಲ್ಕತ್ತ ನೈಟ್‌ ರೈಡರ್ಸ್‌–ಕಿಂಗ್ಸ್ ಇಲೆವನ್‌ ಪಂಜಾಬ್‌. ಆರಂಭ: ಸಂಜೆ 7.30

ಸ್ಥಳ:ಶಾರ್ಜಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.