ADVERTISEMENT

ಪ್ಲೇ ಆಫ್‌ ತಲುಪಲು ಇದ್ದ ‘ಗುರಿ’ಯ ಬಗ್ಗೆ 11ನೇ ಓವರ್‌ನಲ್ಲಿ ತಿಳಿಯಿತು: ಕೊಹ್ಲಿ

ಏಜೆನ್ಸೀಸ್
Published 3 ನವೆಂಬರ್ 2020, 13:09 IST
Last Updated 3 ನವೆಂಬರ್ 2020, 13:09 IST
ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್ (ನೀಲಿ ಪೋಷಾಕು) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ
ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ನಾಯಕ ಶ್ರೇಯಸ್‌ ಅಯ್ಯರ್ (ನೀಲಿ ಪೋಷಾಕು) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ   

ಅಬುಧಾಬಿ: ಲೀಗ್‌ ಹಂತದಲ್ಲಿ ತನ್ನ ಕೊನೆಯ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಪ್ಲೇ ಆಫ್‌ಗೆ ತಲುಪಬೇಕಾದರೆ 17.3ನೇ ಓವರ್‌ವರೆಗೆ ಸೋಲೊಪ್ಪಿಕೊಳ್ಳದೆ ಆಡಬೇಕಿತ್ತು. ಆದರೆ ಈ ವಿಚಾರ ಪಂದ್ಯದ ಎರಡನೇ ಇನಿಂಗ್ಸ್‌ನ 11ನೇ ಓವರ್‌ ವೇಳೆ ತಿಳಿಯಿತು ಎಂದು ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 152 ರನ್ ಕಲೆಹಾಕಿತ್ತು. ಈ ಗುರಿ ಬೆನ್ನತ್ತಿದ ಡೆಲ್ಲಿ ಅನುಭವಿ ಶಿಖರ್‌ ಧವನ್‌ (54) ಮತ್ತು ಅಜಿಂಕ್ಯ ರಹಾನೆ (60) ಗಳಿಸಿದ ಅರ್ಧಶತಕಗಳ ನೆರವಿನಿಂದ ಇನ್ನೂ ಒಂದು ಓವರ್‌ ಬಾಕಿ ಇರುವಂತೆಯೇ ಗೆದ್ದು ಬೀಗಿತ್ತು. ಈ ಪಂದ್ಯವು 19 ಓವರ್‌ಗಳವರೆಗೆ ಸಾಗಿದ ಕಾರಣ, ಕೊಹ್ಲಿ ಪಡೆ ಸೋಲು ಕಂಡರೂರನ್‌ರೇಟ್ ಆಧಾರದಲ್ಲಿ ಪ್ಲೇ ಆಫ್‌ಗೆ ಅರ್ಹತೆ ಪಡೆದುಕೊಂಡಿದೆ.

ಪ್ಲೇ ಆಫ್‌ಗೆ ಅರ್ಹತೆ ಪಡೆಯಬೇಕಾದರೆ ಡೆಲ್ಲಿ ತಂಡವನ್ನು 17.3ನೇ ಓವರ್‌ ಒಳಗೆ ಗೆಲುವು ಸಾಧಿಸದಂತೆ ತಡೆಯಬೇಕು ಎಂಬುದನ್ನು 11ನೇ ಓವರ್‌ ವೇಳೆ ತಂಡದ ಆಡಳಿತ ತಿಳಿಸಿತು. ಪಂದ್ಯ ನಮ್ಮ ಕೈಯಿಂದ ಜಾರಿದರೂ, ಮಧ್ಯದಲ್ಲಿ ಉತ್ತಮವಾಗಿ ನಿಯಂತ್ರಣ ಸಾಧಿಸಿದೆವು. ಪ್ಲೇ ಆಫ್‌ಗೆ ಅರ್ಹತೆ ಪಡೆದಿರುವುದರಿಂದ ನಾವು ಸಂತಸಗೊಂಡಿದ್ದೇವೆ ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಹ್ಲಿ ಹೇಳಿದ್ದಾರೆ.

ADVERTISEMENT

ನಮಗೆ ಅವಕಾಶವಿದೆ, ಒಂದು ತಂಡವಾಗಿ ನಾವು ಅದನ್ನು ಬಯಸಿದ್ದೆವು. ನಮ್ಮ ಮುಂದಿನ ಹಾದಿಯ ಬಗ್ಗೆ ನಮ್ಮ ಆಟಗಾರರಲ್ಲಿ ಉತ್ಸಾಹವಿದೆ ಎಂಬ ಖಾತ್ರಿ ಇದೆ. ಉತ್ತಮವಾಗಿ ಆಡಬೇಕಿದೆ ಎಂದಿದ್ದಾರೆ.

ಸದ್ಯ 9 ಜಯದೊಂದಿಗೆ 18 ಅಂಕಗಳನ್ನು ಹೊಂದಿರುವ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, 16 ಅಂಕಗಳನ್ನು ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಆಡಲಿದೆ. ಈ ಪಂದ್ಯವು ನವೆಂಬರ್‌ 5 ರಂದು ದುಬೈನಲ್ಲಿ ನಡೆಯಲಿದೆ.ಆರ್‌ಸಿಬಿ 14 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದು, ಪ್ಲೇ ಆಫ್‌ನಲ್ಲಿ ಆಡುವ ನಾಲ್ಕನೇ ತಂಡ ಯಾವುದು ಎಂಬುದು ನಿರ್ಧಾರವಾಗಿಲ್ಲ. ಆದರೆ, 14 ಅಂಕಗಳನ್ನು ಹೊಂದಿರುವ ಕೋಲ್ಕತ್ತ ನೈಟ್‌ರೈಡರ್ಸ್‌ ಸದ್ಯ ನಾಲ್ಕನೇ ಸ್ಥಾನದಲ್ಲಿದೆ.

ಇಂದು ಲೀಗ್‌ ಹಂತದ ಕೊನೆಯ ಪಂದ್ಯ ನಡೆಯಲಿದ್ದು, ಮುಂಬೈ ಮತ್ತು ಸನ್‌ರೈಸರ್ಸ್ ಹೈದರಾಬಾದ್‌ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯದ ಫಲಿತಾಂಶವು ಪ್ಲೇ ಆಫ್‌ ತಲುಪುವ ನಾಲ್ಕನೇ ತಂಡ ಯಾವುದು ಎಂಬುದನ್ನು ನಿರ್ಧರಿಸಲಿದೆ.

ಹೈದರಾಬಾದ್ ತಂಡದ ಖಾತೆಯಲ್ಲಿ ಕೇವಲ 12 ಅಂಕಗಳಿವೆ. ಆದರೆ, ರನ್‌ರೇಟ್‌ ಕೋಲ್ಕತ್ತಕಿಂತ ಉತ್ತಮವಾಗಿರುವುದರಿಂದ, ಇಂದಿನ ಪಂದ್ಯದಲ್ಲಿ ಈ ತಂಡ ಗೆದ್ದರೆ ಸಾಕು. ಪ್ಲೇ ಆಫ್‌ಗೆ ತಲುಪುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.