ADVERTISEMENT

IPL 2021: ರಾಜಸ್ಥಾನ್ ವಿರುದ್ಧ ಆರ್‌ಸಿಬಿಗೆ 7 ವಿಕೆಟ್ ಅಂತರದ ಭರ್ಜರಿ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಸೆಪ್ಟೆಂಬರ್ 2021, 18:09 IST
Last Updated 29 ಸೆಪ್ಟೆಂಬರ್ 2021, 18:09 IST
ಗ್ಲೆನ್ ಮ್ಯಾಕ್ಸ್‌ವೆಲ್
ಗ್ಲೆನ್ ಮ್ಯಾಕ್ಸ್‌ವೆಲ್   

ದುಬೈ: ಗ್ಲೆನ್ ಮ್ಯಾಕ್ಸ್‌ವೆಲ್ ಬಿರುಸಿನ ಅರ್ಧಶತಕ ಹಾಗೂ ಬೌಲರ್‌ಗಳ ಸಾಂಘಿಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ನಲ್ಲಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಏಳು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಹರ್ಷಲ್ ಪಟೇಲ್, ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹ್ಮದ್ ದಾಳಿಗೆ ತತ್ತರಿಸಿದ ರಾಜಸ್ಥಾನ್ ಒಂಬತ್ತು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಲಷ್ಟೇ ಸಮರ್ಥವಾಯಿತು. ಬಳಿಕ ಕೇವಲ 30 ಎಸೆತಗಳಲ್ಲಿ ಅಜೇಯ ಅರ್ಧಶತಕ ಬಾರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ತಂಡವನ್ನು 17.1 ಓವರ್‌ಗಳಲ್ಲೇ ಗೆಲುವಿನ ದಡ ಸೇರಿಸಲು ನೆರವಾದರು. ಶ್ರೀಕರ್ ಭರತ್ ಕೂಡ 44 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು.

ಈ ಗೆಲುವಿನೊಂದಿಗೆ ಆಡಿರುವ 11 ಪಂದ್ಯಗಳಲ್ಲಿ ಏಳನೇ ಜಯದೊಂದಿಗೆ ಒಟ್ಟು 14 ಅಂಕಗಳನ್ನು ಸಂಪಾದಿಸಿರುವ ಆರ್‌ಸಿಬಿ, ಮೂರನೇ ಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ಪ್ಲೇ-ಆಫ್ ಪ್ರವೇಶದತ್ತ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಅತ್ತ ರಾಜಸ್ಥಾನ್, ಅಷ್ಟೇ ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ.

ADVERTISEMENT

ಸವಾಲಿನ ಮೊತ್ತ ಬೆನ್ನತ್ತಿದ ಆರ್‌ಸಿಬಿಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ತ ಪಡಿಕ್ಕಲ್ ಉತ್ತಮ ಆರಂಭವೊದಗಿಸಿದರು. ಇವರಿಬ್ಬರು ಮೊದಲ ವಿಕೆಟ್‌ಗೆ 5.2 ಓವರ್‌ಗಳಲ್ಲಿ 48 ರನ್‌ಗಳ ಜೊತೆಯಾಟ ನೀಡಿದರು. ಈ ವೇಳೆ ಪಡಿಕ್ಕಲ್ (22) ವಿಕೆಟ್ ನಷ್ಟವಾಯಿತು. ಬೆನ್ನಲ್ಲೇ ಉತ್ತಮವಾಗಿ ಆಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ (25) ರನೌಟ್ ಆದರು.

ಈ ಹಂತದಲ್ಲಿ ಜೊತೆಗೂಡಿದ ಶ್ರೀಕರ್ ಭರತ್ ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್ 69ರನ್‌ಗಳ ಮಹತ್ವದ ಜೊತೆಯಾಟ ನೀಡಿ ತಂಡದ ಗೆಲುವನ್ನು ಸುಲಭಗೊಳಿಸಿದರು.

30 ಎಸೆತಗಳನ್ನು ಎದುರಿಸಿದ ಮ್ಯಾಕ್ಸ್‌ವೆಲ್ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 50 ರನ್ ಗಳಿಸಿ ಅಜೇಯರಾಗುಳಿದರು. 35 ಎಸೆತಗಳನ್ನು ಎದುರಿಸಿದ ಭರತ್ 44 ರನ್ (3 ಬೌಂಡರಿ, 1 ಸಿಕ್ಸರ್) ಗಳಿಸಿದರು. ಇನ್ನುಳಿದಂತೆ ಎಬಿ ಡಿವಿಲಿಯರ್ಸ್ 4 ರನ್ ಗಳಿಸಿ ಔಟಾಗದೆ ಉಳಿದರು. ರಾಜಸ್ಥಾನ್ ಪರ ಮುಸ್ತಫಿಜುರ್ ರಹ್ಮಾನ್ ಎರಡು ವಿಕೆಟ್ ಕಬಳಿಸಿದರು.

ಲೂಯಿಸ್ ಹೋರಾಟ ವ್ಯರ್ಥ, ರಾಜಸ್ಥಾನ್ ದಿಢೀರ್ ಕುಸಿತ...
ಈ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ರಾಜಸ್ಥಾನ್ ತಂಡಕ್ಕೆ ಆರಂಭಿಕರಾದ ಎವಿನ್ ಲೂಯಿಸ್ ಹಾಗೂ ಯಶಸ್ವಿ ಜೈಸ್ವಾಲ್ ಬಿರುಸಿನ ಆರಂಭವೊದಗಿಸಿದರು. ಅಲ್ಲದೆ ಮೊದಲ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದರು.

ಈ ಹಂತದಲ್ಲಿ ದಾಳಿಗಿಳಿದ ಡ್ಯಾನ್ ಕ್ರಿಸ್ಟಿಯನ್, ಯುವ ಬ್ಯಾಟ್ಸ್‌ಮನ್ ಜೈಸ್ವಾಲ್ ವಿಕೆಟ್ ಕಬಳಿಸಿದರು. ಆಗಲೇ ಮೊದಲ ವಿಕೆಟ್‌ಗೆ 50 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟ ನೀಡಿದರು. 22 ಎಸೆತಗಳನ್ನು ಎದುರಿಸಿದ ಜೈಸ್ವಾಲ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 31 ರನ್ ಗಳಿಸಿದರು.

ಅತ್ತ ಬಿರುಸಿನ ಆಟವಾಡಿದ ಲೂಯಿಸ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಸಾಧನೆ ಮಾಡಿದರು. ಪರಿಣಾಮ 11 ಓವರ್‌ಗಳಲ್ಲೇ ತಂಡದ ಮೊತ್ತ 100ರ ಗಡಿ ಸೇರಿತು.

ಆದರೆ ಲೂಯಿಸ್ ವಿಕೆಟ್ ಪತನದೊಂದಿಗೆ ಪಂದ್ಯದ ಚಿತ್ರಣವೇ ಬದಲಾಯಿತು. ಉತ್ತಮವಾಗಿ ಆಡುತ್ತಿದ್ದ ಲೂಯಿಸ್ ಹೊರದಬ್ಬುವಲ್ಲಿ ಪದಾರ್ಪಣಾ ವೇಗಿ ಜಾರ್ಜ್ ಗಾರ್ಟನ್ ಯಶಸ್ವಿಯಾದರು. 37 ಎಸೆತಗಳನ್ನು ಎದರಿಸಿದ ಲೂಯಿಸ್ 58 ರನ್ (5 ಬೌಂಡರಿ, 3 ಸಿಕ್ಸರ್) ಗಳಿಸಿದರು.

ಮಧ್ಯಂತರ ಅವಧಿಯಲ್ಲಿ ರಾಜಸ್ಥಾನ್ ಓಟಕ್ಕೆ ಆರ್‌ಸಿಬಿ ಸ್ಪಿನ್ನರ್‌ಗಳು ಕಡಿವಾಣ ಹಾಕಿದರು. ಮಹಿಪಾಲ್ ಲೊಮ್ರೊರ್ (3) ಅವರನ್ನು ಯಜುವೇಂದ್ರ ಚಾಹಲ್ ಬಲೆಗೆ ಬೀಳಿಸಿದರು. 14ನೇ ಓವರ್‌ನಲ್ಲಿ ಸಂಜು ಸ್ಯಾಮ್ಸನ್ (19) ಹಾಗೂ ರಾಹುಲ್ ತೆವಾಟಿಯಾ (2) ವಿಕೆಟ್ ಕಬಳಿಸಿದ ಶಹಬಾಜ್ ಅಹ್ಮದ್ ಡಬಲ್ ಆಘಾತ ನೀಡಿದರು.

ಇಲ್ಲಿಂದ ಬಳಿಕವೂ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ಲಯಾಮ್ ಲಿವಿಂಗ್‌ಸ್ಟೋನ್ (6) ಅವರನ್ನು ಚಾಹಲ್ ಹೊರದಬ್ಬಿದರು. ಅಂತಿಮ ಓವರ್‌ನಲ್ಲಿ ರಿಯಾನ್ ಪರಾಗ್ (9), ಕ್ರಿಸ್ ಮೊರಿಸ್ (14) ಹಾಗೂ ಚೇತನ್ ಸಕಾರಿಯಾ (2) ವಿಕೆಟ್‌ಗಳನ್ನು ಕಬಳಿಸಿದ ಹರ್ಷಲ್ ಪಟೇಲ್ ಎದುರಾಳಿಗಳಿಗೆ ಬಲವಾದ ಪೆಟ್ಟು ನೀಡಿದರು.

ಪರಿಣಾಮ ಒಂದು ಹಂತದಲ್ಲಿ 11 ಓವರ್‌ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ರಾಜಸ್ಥಾನ್, 149 ರನ್ ಗಳಿಸುವಷ್ಟರಲ್ಲಿ ಒಂಬತ್ತು ವಿಕೆಟ್‌ಗಳನ್ನು ಕಳೆದುಕೊಂಡಿತು.

ಈ ಮೂಲಕ ಕೊನೆಯ ಒಂಬತ್ತು ಓವರ್‌ಗಳ ಅಂತರದಲ್ಲಿ 49 ರನ್ನಿಗೆ ಎಂಟು ವಿಕೆಟ್‌ಗಳನ್ನು ಕಳೆದುಕೊಂಡಿತು. ಆರ್‌ಸಿಬಿ ಪರ ಹರ್ಷಲ್ ಪಟೇಲ್ ಮೂರು ಮತ್ತು ಯಜುವೇಂದ್ರ ಚಾಹಲ್ ಹಾಗೂ ಶಹಬಾಜ್ ಅಹ್ಮದ್ ತಲಾ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಪದಾರ್ಪಣಾ ವೇಗಿ ಜಾರ್ಜ್ ಕಾರ್ಟನ್ ಸಹ ಒಂದು ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.