ADVERTISEMENT

IPL 2021: ಆರ್‌ಸಿಬಿ ಪರ ಉತ್ತಮ ಪ್ರದರ್ಶನ ನೀಡುವ ಇರಾದೆಯಲ್ಲಿ ಪಡಿಕ್ಕಲ್

ಏಜೆನ್ಸೀಸ್
Published 12 ಏಪ್ರಿಲ್ 2021, 10:40 IST
Last Updated 12 ಏಪ್ರಿಲ್ 2021, 10:40 IST
ದೇವದತ್ ಪಡಿಕ್ಕಲ್
ದೇವದತ್ ಪಡಿಕ್ಕಲ್   

ಚೆನ್ನೈ:ಕೋವಿಡ್-19ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖವಾಗಿರುವ ಕರ್ನಾಟಕದ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್, ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಅತ್ಯುತ್ತಮ ಪ್ರದರ್ಶನವನ್ನು ನೀಡುವುದನ್ನು ಎದುರು ನೋಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ದಾಖಲಿಸಿ ಶುಭಾರಂಭ ಮಾಡಿಕೊಂಡಿತ್ತು. ಆದರೆ ಈ ಪಂದ್ಯದಿಂದ ದೇವದತ್ ಪಡಿಕ್ಕಲ್ ಹೊರಗುಳಿದಿದ್ದರು.

ಐಪಿಎಲ್‌ಗೂ ಮೊದಲು ಕೋವಿಡ್ ಸೋಂಕಿಗೊಳಗಾಗಿದ್ದ ಪಡಿಕ್ಕಲ್ ಮನೆಯಲ್ಲೇ ಪ್ರತ್ಯೇಕವಾಸದಲ್ಲಿದ್ದರು. ಬಳಿಕ ಚೇತರಿಸಿಕೊಂಡು ಆರ್‌ಸಿಬಿ ಕ್ಯಾಂಪ್‌ಗೆ ಮರಳಿದ್ದರು.

ADVERTISEMENT

'ಕೋವಿಡ್ ಹಿನ್ನೆಡೆಯಾಗಿ ಪರಿಣಮಿಸಿತ್ತು. ಆದರೆ ಒಮ್ಮೆ ಸೋಂಕಿಗೊಳಗಾದ ಬಳಿಕ ಪರಿಸ್ಥಿತಿ ನನ್ನ ನಿಯಂತ್ರಣದಲ್ಲಿರಲಿಲ್ಲ. ನಾನು ಪರಿಸ್ಥಿತಿಯನ್ನು ಒಪ್ಪಿಕೊಳ್ಳಲೇಬೇಕಿತ್ತು. ನಾನು ಫಿಟ್ ಆಗಿದ್ದು, ಆಡಲು ಸಿದ್ಧವಾಗಿದ್ದೇನೆ ಎಂಬುದನ್ನು ಖಾತ್ರಿಪಡಿಸಬೇಕಿತ್ತು. ಇದುವೇ ನನ್ನ ಮುಂದಿದ್ದ ಸವಾಲು ಆಗಿತ್ತು. ನಾನೀಗ ಆರಾಮವಾಗಿದ್ದೇನೆ. ಶೇಕಡಾ 100ರಷ್ಟು ಫಿಟ್ ಆಗಿರಲು ಪ್ರಯತ್ನಿಸಿದ್ದೇನೆ' ಎಂದು ಪಡಿಕ್ಕಲ್ ವಿವರಿಸಿದ್ದಾರೆ.

ಕಳೆದ ವರ್ಷ ಆರ್‌ಸಿಬಿ ಪರ ಪದಾರ್ಪಣೆ ಮಾಡಿರುವ ಪಡಿಕ್ಕಲ್ 15 ಪಂದ್ಯಗಳಲ್ಲಿ 31.53ರ ಸರಾಸರಿಯಲ್ಲಿ 473 ರನ್ ಪೇರಿಸಿದ್ದರು. ಇದರಲ್ಲಿ 74 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಸೇರಿದ್ದವು.

ಐಪಿಎಲ್‌ನಲ್ಲಿ ಆಡುವುದು ಅತ್ಯುತ್ತಮ ಅನುಭವವಾಗಿದೆ. ನನಗೆ ಲಭಿಸಿದ ಅವಕಾಶಗಳು ಮತ್ತು ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುವುದು ಇವೆಲ್ಲವೂ ಮುಖ್ಯವೆನಿಸುತ್ತದೆ. ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆ ಟ್ರೋಫಿಯಲ್ಲೂ ಉತ್ತಮ ಲಯದಲ್ಲಿರಲು ಪ್ರಯತ್ನಿಸಿದ್ದೆ. ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವುದು ನನ್ನ ಆತ್ಮವಿಶ್ವಾಸವನ್ನು ವೃದ್ಧಿಗೊಳಿಸಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.