ADVERTISEMENT

IPL 2021: ಕೋಲ್ಕತ್ತಗೆ ಪ್ಲೇ ಆಫ್‌ಗೇರುವ ಬಯಕೆ

ರಾಜಸ್ಥಾನ್ ರಾಯಲ್ಸ್ ಎದುರು ಹಣಾಹಣಿ; ವೆಂಕಟೇಶ ಅಯ್ಯರ್, ವರುಣ್ ಚಕ್ರವರ್ತಿ ಮೇಲೆ ನಿರೀಕ್ಷೆ

ಪಿಟಿಐ
Published 6 ಅಕ್ಟೋಬರ್ 2021, 18:55 IST
Last Updated 6 ಅಕ್ಟೋಬರ್ 2021, 18:55 IST
ವೆಂಕಟೇಶ್ ಅಯ್ಯರ್ –ಪಿಟಿಐ ಚಿತ್ರ
ವೆಂಕಟೇಶ್ ಅಯ್ಯರ್ –ಪಿಟಿಐ ಚಿತ್ರ   

ಶಾರ್ಜಾ: ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪ್ಲೇ ಆಫ್ ಕನಸು ಹೊತ್ತುಕೊಂಡು ಗುರುವಾರ ಕಣಕ್ಕೆ ಇಳಿಯಲಿದೆ. ಟೂರ್ನಿಯಿಂದ ಈಗಾಗಲೇ ಹೊರಬಿದ್ದಿರುವ ರಾಜಸ್ಥಾ‌ನ್ ರಾಯಲ್ಸ್ ವಿರುದ್ಧ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಸೆಣಸಲಿದೆ.

13 ಪಂದ್ಯಗಳಿಂದ 12 ಪಾಯಿಂಟ್ ಕಲೆ ಹಾಕಿರುವ ಕೋಲ್ಕತ್ತ ಪಾಯಿಂಟ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಉತ್ತಮ ರನ್‌ ರೇಟ್ ಹೊಂದಿರುವುದರಿಂದ ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ಗಿಂತ ಒಂದು ಹೆಜ್ಜೆ ಮುಂದೆ ಇದೆ. ಮುಂಬೈ ಕೂಡ 13 ಪಂದ್ಯಗಳಿಂದ 12 ಪಾಯಿಂಟ್ ಗಳಿಸಿದೆ. ಈ ತಂಡ ಕೊನೆಯ ಪಂದ್ಯವನ್ನು ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ಆಡಲಿದೆ.

ಕೋಲ್ಕತ್ತ ಮತ್ತು ಮುಂಬೈ ಇಂಡಿಯನ್ಸ್ ತಮ್ಮ ಕೊನೆಯ ಪಂದ್ಯಗಳನ್ನು ಗೆದ್ದುಕೊಂಡರೆ ರನ್‌ರೇಟ್‌ನಲ್ಲಿಮುಂಬೈಗಿಂತ ಮೇಲೆಯೇ ಉಳಿಯಲಿದೆ. ಆದರೆ ಸೋತರೆ ಸಂಕಷ್ಟಕ್ಕೆ ಸಿಲುಕಲಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಮುಂಬೈ ಭಾರಿ ಅಂತರದಿಂದ ಜಯಿಸಿತ್ತು.

ADVERTISEMENT

ಟೂರ್ನಿಯ ಎರಡನೇ ಹಂತದ ಆರಂಭದಲ್ಲಿ ಸತತ ಎರಡು ಜಯದೊಂದಿಗೆ ಕೋಲ್ಕತ್ತ ಉತ್ತಮ ಆರಂಭ ಕಂಡಿತ್ತು. ನಂತರ ಸೋಲು ಮತ್ತು ಗೆಲುವಿನ ಮಿಶ್ರ ಫಲಿತಾಂಶದೊಂದಿಗೆ ಮುಂದೆ ಸಾಗಿತ್ತು. ವೆಂಕಟೇಶ ಅಯ್ಯರ್ ಇತ್ತೀಚಿನ ಕೆಲವು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಮಾಡುತ್ತಿದ್ದು ತಂಡಕ್ಕೆ ಬಲ ತುಂಬಿದ್ದಾರೆ. ರಾಹುಲ್ ತ್ರಿಪಾಠಿ, ಶುಭಮನ್ ಗಿಲ್‌, ನಿತೀಶ್ ರಾಣಾ ಅವರಿಂದಲೂ ಉತ್ತಮ ಕಾಣಿಕೆ ಸಿಗುತ್ತಿದೆ. ಆದರೆ ನಾಯಕ ಏಯಾನ್ ಮಾರ್ಗನ್ ಇನ್ನೂ ಲಯ ಕಂಡುಕೊಂಡಿಲ್ಲ.

ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳಾದ ವರುಣ್ ಚಕ್ರವರ್ತಿ ಮತ್ತು ಸುನಿಲ್ ನಾರಾಯಣ್ ಯಾವುದೇ ಬ್ಯಾಟರ್‌ಗಳಿಗೆ ಸವಾಲೊಡ್ಡಬಲ್ಲರು. ಟಿಮ್ ಸೌಥಿ ಮತ್ತು ಶಿವಂ ಮಾವಿ ಕೂಡ ಬೌಲಿಂಗ್ ವಿಭಾಗಕ್ಕೆ ಬಲ ತುಂಬಿದ್ದಾರೆ. ಪ್ರಸಿದ್ಧ ಕೃಷ್ಣ ಉತ್ತಮ ದಾಳಿ ಸಂಘಟಿಸುತ್ತಿದ್ದರು. ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ 22 ರನ್ ಬಿಟ್ಟುಕೊಟ್ಟ ನಂತರ ತಂಡದಿಂದ ಕೈಬಿಡಲಾಗಿತ್ತು.

ಜಯದೊಂದಿಗೆ ಅಭಿಯಾನ ಮುಕ್ತಾಯಕ್ಕೆ ಪ್ರಯತ್ನ

ಟೂರ್ನಿಯಿಂದ ಹೊರಬಿದ್ದಿರುವ ರಾಜಸ್ಥಾನ್ ರಾಯಲ್ಸ್ ಕೊನೆಯ ಪಂದ್ಯದಲ್ಲಿ ಜಯ ಗಳಿಸಿ ಅಭಿಯಾನಕ್ಕೆ ಅಂತ್ಯಹಾಡಲು ‍ಪ್ರಯತ್ನಿಸಲಿದೆ. ಯಶಸ್ವಿಯ ಜೈಸ್ವಾಲ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಹೊರತುಪಡಿಸಿದರೆ ತಂಡದಲ್ಲಿರುವ ಭಾರತದ ಬ್ಯಾಟ್ಸ್‌ಮನ್‌ಗಳು ಈ ಬಾರಿ ಮಿಂಚಲಿಲ್ಲ. ಬೌಲಿಂಗ್ ವಿಭಾಗದಲ್ಲಿ ಮುಸ್ತಫಿಜುರ್ ರಹಿಮಾನ್ ಮತ್ತು ಚೇತನ್ ಸಕಾರಿಯ ಭರವಸೆ ತುಂಬಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಚೆನ್ನೈಗೆ ಅಗ್ರ ಸ್ಥಾನದ ಮೇಲೆ ಕಣ್ಣು

ಈಗಾಗಲೇ ಪ್ಲೇ ಆಫ್ ಹಂತಕ್ಕೇರಿರುವ ಚೆನ್ನೈ ಸೂಪರ್ ಕಿಂಗ್ಸ್ ಅಗ್ರ ಸ್ಥಾನದ ಮೇಲೆ ಕಣ್ಣಿಟ್ಟು ಪಂಜಾಬ್ ಕಿಂಗ್ಸ್ ವಿರುದ್ಧ ಗುರುವಾರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸೆಣಸಲಿದೆ.

ಹಿಂದಿನ ಎರಡು ಪಂದ್ಯಗಳಲ್ಲಿ ಸೋತಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಎಲ್ಲ ವಿಭಾಗಗಳಲ್ಲೂ ಬಲಿಷ್ಠವಾಗಿದ್ದು ಯಾವುದೇ ತಂಡವನ್ನು ಮಣಿಸುವ ಸಾಮರ್ಥ್ಯ ತನಗಿದೆ ಎಂಬುದನ್ನು ಈಗಾಗಲೇ ಸಾಬೀತು ಮಾಡಿದೆ. ಪಂಜಾಬ್ ಈಗಾಗಲೇ ಪ್ಲೇ ಆಫ್ ಭರವಸೆಯನ್ನು ಕಳೆದುಕೊಂಡಿದೆ.

ಋತುರಾಜ್ ಗಾಯಕವಾಡ್ ಮತ್ತು ಫಫ್ ಡು ಪ್ಲೆಸಿ ಜೋಡಿ ಚೆನ್ನೈಗೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕಕ್ಕೆ ಅಂಬಟಿ ರಾಯುಡು ಬಲ ತುಂಬಿದ್ದಾರೆ. ಮೋಯಿನ್ ಅಲಿ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದರೆ ಸುರೇಶ್ ರೈನಾ ಮತ್ತು ಮಹೇಂದ್ರ ಸಿಂಗ್ ಧೋನಿ ಅವರು ಫಾರ್ಮ್‌ನಲ್ಲಿಲ್ಲದೇ ಇರುವುದು ತಂಡದ ಆತಂಕಕ್ಕೆ ಕಾರಣವಾಗಿದೆ. ಆಲ್‌ರೌಂಡರ್ ರವೀಂದ್ರ ಜಡೇಜ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.

ಬೌಲಿಂಗ್ ವಿಭಾಗದದಲ್ಲಿ ದೀಪಕ್ ಚಾಹರ್ ಮಿಂಚುತ್ತಿದ್ದು ಶಾರ್ದೂಲ್ ಠಾಕೂರ್, ಜೋಶ್‌ ಹ್ಯಾಜಲ್‌ವುಡ್‌, ಡ್ವೇನ್ ಬ್ರಾವೊ ಅವರಿಂದಲೂ ಉತ್ತಮ ಕಾಣಿಕೆ ಸಿಗುತ್ತಿದೆ.

ಕೆ.ಎಲ್‌.ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ಸ್ಥಿರತೆಯ ಸಮಸ್ಯೆ ಎದುರಿಸುತ್ತಿದೆ. ರಾಹುಲ್ ಮತ್ತು ಮಯಂಕ್ ಅಗರವಾಲ್ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದರೆ. ಬೌಲಿಂಗ್‌ನಲ್ಲಿ ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್ ಮತ್ತು ರವಿ ಬಿಷ್ನೋಯಿ ಅವರ ಮೇಲೆ ಭರವಸೆ ಇದೆ.

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.