ADVERTISEMENT

IPL 2021: ಚೆನ್ನೈ ಗೆಲುವಿನ ಓಟ, ಕೆಕೆಆರ್‌ಗೆ ಕೈತಪ್ಪಿದ ಗೆಲುವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಸೆಪ್ಟೆಂಬರ್ 2021, 14:30 IST
Last Updated 26 ಸೆಪ್ಟೆಂಬರ್ 2021, 14:30 IST
ರವೀಂದ್ರ ಜಡೇಜ
ರವೀಂದ್ರ ಜಡೇಜ   

ಅಬುಧಾಬಿ: ಐಪಿಎಲ್‌ನಲ್ಲಿ ರವೀಂದ್ರ ಜಡೇಜ ಆಲ್‌ರೌಂಡರ್ ಆಟದ (22 ರನ್ ಮತ್ತು 1 ವಿಕೆಟ್) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಭಾನುವಾರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಎರಡು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಮೊದಲು ಬೌಲಿಂಗ್‌ನಲ್ಲಿ 21 ರನ್ ತೆತ್ತು ಒಂದು ವಿಕೆಟ್ ಕಬಳಿಸಿದ ಜಡೇಜ ಬಳಿಕ ಬ್ಯಾಟಿಂಗ್‌ನಲ್ಲಿ ಕೇವಲ ಎಂಟು ಎಸೆತಗಳಲ್ಲಿ 22 ರನ್ (2 ಸಿಕ್ಸರ್, 2 ಬೌಂಡರಿ) ಸಿಡಿಸಿ ಚೆನ್ನೈ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು.

ಗೆಲುವಿನ ಅಂಚಿನಲ್ಲಿ ಜಡೇಜ ಔಟ್ ಆದರೂ ಸಹ ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ದೀಪಕ್ ಚಾಹರ್ ಗೆಲುವಿನ ರನ್ ಬಾರಿಸುವ ಮೂಲಕ ಸಿಎಸ್‌ಕೆ ಗೆಲುವಿನ ಓಟ ಮುಂದುವರಿಸಿತು.

ADVERTISEMENT

ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತ ಆರು ವಿಕೆಟ್ ನಷ್ಟಕ್ಕೆ 171 ರನ್‌ ಪೇರಿಸಿತ್ತು. ಬಳಿಕ ಸವಾಲಿನ ಮೊತ್ತ ಬೆನ್ನತ್ತಿದ ಸಿಎಸ್‌ಕೆ ಎಂಟು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ಗೆಲುವಿನ ಓಟ ಮುಂದುವರಿಸಿರುವ ಚೆನ್ನೈ, ಆಡಿರುವ 10 ಪಂದ್ಯಗಳಲ್ಲಿ 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮಗದೊಮ್ಮೆ ಅಗ್ರಸ್ಥಾನಕ್ಕೇರಿದೆ. ಅಲ್ಲದೆ ಪ್ಲೇ-ಆಫ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿದೆ. ಅತ್ತ ಕೆಕೆಆರ್ 10 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಕಾಯ್ದುಕೊಂಡಿದೆ.

ಸವಾಲಿನ ಮೊತ್ತ ಬೆನ್ನತ್ತಿದ ಚೆನ್ನೈಗೆ ಆರಂಭಿಕರಾದ ಋತುರಾಜ್ ಗಾಯಕವಾಡ ಹಾಗೂ ಫಾಫ್ ಡು ಪ್ಲೆಸಿ ಬಿರುಸಿನ ಆರಂಭವೊದಗಿಸಿದರು. ಇವರಿಬ್ಬರು 50 ಎಸೆತಗಳಲ್ಲಿ 74 ರನ್‌ಗಳ ಜೊತೆಯಾಟ ನೀಡಿ ಭದ್ರ ಅಡಿಪಾಯ ಹಾಕಿದರು. 28 ಎಸೆತಗಳನ್ನು ಎದುರಿಸಿದ ಗಾಯಕವಾಡ್, ಆ್ಯಂಡ್ರೆ ರಸೆಲ್ ದಾಳಿಯಲ್ಲಿ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ಎರಡು ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳು ಸೇರಿದ್ದವು.

ಬಳಿಕ ಮೊಯಿನ್ ಅಲಿ ಜೊತೆಗೂಡಿದ ಡು ಪ್ಲೆಸಿ ತಂಡವನ್ನು ಮುನ್ನಡೆಸಿದರು. ಆದರೆ ಡು ಪ್ಲೆಸಿ ಓಟಕ್ಕೆ ಕನ್ನಡಿಗ ಪ್ರಸಿದ್ಧ ಕೃಷ್ಣ ಬ್ರೇಕ್ ಹಾಕಿದರು. 30 ಎಸೆತಗಳನ್ನು ಎದುರಿಸಿದ ಫಾಫ್, ಏಳು ಬೌಂಡರಿಗಳ ನೆರವಿನಿಂದ 43 ರನ್ ಗಳಿಸಿದರು.

ಪಂದ್ಯದ ಮಧ್ಯಂತರ ಅವಧಿಯಲ್ಲಿ ತಮ್ಮದೇ ಬ್ಯಾಟ್ಸ್‌ಮನ್‌ಗಳ ಎಡವಟ್ಟಿನಿಂದಾಗಿ ಚೆನ್ನೈ ಹಿನ್ನೆಡೆ ಅನುಭವಿಸಿತು. ಅಂಬಟಿ ರಾಯುಡು (10), ಸುರೇಶ್ ರೈನಾ (11), ನಾಯಕ ಮಹೇಂದ್ರ ಸಿಂಗ್ ಧೋನಿ (1) ಹಾಗೂ ಸ್ಯಾಮ್ ಕರನ್ (4) ನಿರಾಸೆ ಅನುಭವಿಸಿದರು.

ಆದರೆ ರವೀಂದ್ರ ಜಡೇಜ ಇತ್ತಂಡಗಳ ನಡುವಣ ವ್ಯತ್ಯಾಸಕ್ಕೆ ಕಾರಣವಾದರು. ಪ್ರಸಿದ್ಧ ಕೃಷ್ಣ ಎಸೆದ ಇನ್ನಿಂಗ್ಸ್‌ನ 19ನೇ ಓವರ್‌ನಲ್ಲಿ 22 ರನ್ ಚಚ್ಚುವ ಮೂಲಕ ಚೆನ್ನೈ ಗೆಲುವಿನ ದಡ ಸೇರಿಸಲು ನೆರವಾದರು. ಅಂತಿಮ ಓವರ್‌ನಲ್ಲಿ ನಾಲ್ಕು ರನ್ ಬೇಕಾಗಿತ್ತು. ಆದರೆ ಸುನಿಲ್ ನಾರಾಯಣ್ ಎಸೆದ 19ನೇ ಓವರ್‌ನ ಐದನೇ ಎಸೆತದಲ್ಲಿ ಜಡೇಜ ಔಟ್ ಆದರೂ ಅಂತಿಮ ಎಸೆತದಲ್ಲಿ ದೀಪಕ್ ಚಾಹರ್ ಗೆಲುವಿನ ರನ್ ಬಾರಿಸಿದರು.

ಈ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಕೋಲ್ಕತ್ತ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಇನ್ನಿಂಗ್ಸ್‌ನ ಪ್ರಥಮ ಓವರ್‌ನಲ್ಲೇ ಶುಭಮನ್ ಗಿಲ್ (9) ರನೌಟ್ ಆದರು. ಆದರೂ ರಾಹುಲ್ ತ್ರಿಪಾಠಿ ಜೊತೆ ಸೇರಿದ ವೆಂಕಟೇಶ ಅಯ್ಯರ್ ತಂಡವನ್ನು ಮುನ್ನಡೆಸಿದರು.

ಪರಿಣಾಮ 5 ಓವರ್‌ಗಳಲ್ಲೇ ತಂಡದ ಮೊತ್ತ 50ರ ಗಡಿ ದಾಟಿತು. ಕಳೆದೆರಡು ಪಂದ್ಯಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಅಯ್ಯರ್ (18) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ಶಾರ್ದೂಲ್ ಠಾಕೂರ್ ದಾಳಿಯಲ್ಲಿ ವಿಕೆಟ್ ಒಪ್ಪಿಸಿದರು.

ಬಳಿಕ ಕ್ರೀಸಿಗಿಳಿದ ಏಯಾನ್ ಮಾರ್ಗನ್ (8) ನಿರಾಸೆ ಮೂಡಿಸಿದರು. ಬೌಂಡರಿ ಗೆರೆ ಬಳಿ ಫಾಫ್ ಡು ಪ್ಲೆಸಿ ಅದ್ಭುತ ಕ್ಯಾಚ್ ಹಿಡಿದರು. ಇನ್ನೊಂದೆಡೆ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ತ್ರಿಪಾಠಿ ತಂಡವನ್ನು ಮುನ್ನಡೆಸಿದರು. ಆದರೆ ಅರ್ಧಶತಕದ ಸನಿಹದಲ್ಲಿ ರವೀಂದ್ರ ಜಡೇಜ ದಾಳಿಯಲ್ಲಿ ಕ್ಲೀನ್ ಬೌಲ್ಡ್ ಆದರು. 33 ಎಸೆತಗಳನ್ನು ಎದುರಿಸಿದ ತ್ರಿಪಾಠಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 45 ರನ್ ಗಳಿಸಿದರು.

ಅತ್ತ ಅಪಾಯಕಾರಿಯಾಗಿ ಮುನ್ನುಗ್ಗುತ್ತಿದ್ದ ಆ್ಯಂಡ್ರೆ ರಸೆಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಶಾರ್ದೂಲ್, ಮಗದೊಮ್ಮೆ ಎದುರಾಳಿಗಳ ಓಟಕ್ಕೆ ಕಡಿವಾಣ ಹಾಕಿದರು. 15 ಎಸೆತಗಳನ್ನು ಎದುರಿಸಿದ ರಸೆಲ್ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 20 ರನ್ ಗಳಿಸಿದರು.

ಅಂತಿಮ ಹಂತದಲ್ಲಿ ಅಮೋಘ ಆಟ ಪ್ರದರ್ಶಿಸಿದ ದಿನೇಶ್ ಕಾರ್ತಿಕ್ ಹಾಗೂ ನಿತೀಶ್ ರಾಣಾ, ಕೋಲ್ಕತ್ತಗೆ ಸವಾಲಿನ ಮೊತ್ತ ಪೇರಿಸಲು ನೆರವಾದರು. ಕೇವಲ 11 ಎಸೆತಗಳನ್ನು ಎದುರಿಸಿದ ಕಾರ್ತಿಕ್ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು.

ಆ ಮೂಲಕ ಕೆಕೆಆರ್ ಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. 27 ಎಸೆತಗಳನ್ನು ಎದುರಿಸಿದ ರಾಣಾ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿ ಅಜೇಯರಾಗುಳಿದರು.

ಚೆನ್ನೈ ಪರ ಶಾರ್ದೂಲ್ ಠಾಕೂರ್ ಹಾಗೂ ಜೋಶ್ ಹೇಜಲ್‌ವುಡ್ ತಲಾ ಎರಡು ವಿಕೆಟ್‌ಗಳನ್ನು ಹಂಚಿದರು. ಒಂದು ವಿಕೆಟ್ ಪಡೆದ ರವೀಂದ್ರ ಜಡೇಜ ಕೇವಲ 21 ರನ್ ಮಾತ್ರ ಬಿಟ್ಟುಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.