ADVERTISEMENT

IPL 2021: ಪಡಿಕ್ಕಲ್ ಸೆಂಚುರಿ ದಾಖಲೆ; ಕಿಂಗ್ ಕೊಹ್ಲಿ 6,000 ರನ್ ಮೈಲಿಗಲ್ಲು

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2021, 18:08 IST
Last Updated 22 ಏಪ್ರಿಲ್ 2021, 18:08 IST
   

ಮುಂಬೈ: ದೇವದತ್ತ ಪಡಿಕ್ಕಲ್ ಚೊಚ್ಚಲ ಶತಕ ಹಾಗೂ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಆಟದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ 10 ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

ಈ ಮೂಲಕ ಅನೇಕ ದಾಖಲೆಯನ್ನು ಬರೆಯಲಾಗಿದೆ. ಇದು ಐಪಿಎಲ್‌ನಲ್ಲಿ ದೇವದತ್ತ ಪಡಿಕ್ಕಲ್ ಬ್ಯಾಟ್‌ನಿಂದ ಸಿಡಿದ ಚೊಚ್ಚಲ ಶತಕವಾಗಿದೆ. 51 ಎಸೆತಗಳಲ್ಲಿ ಪಡಿಕ್ಕಲ್ ಈ ಸಾಧನೆ ಮಾಡಿದ್ದರು.

ಅಲ್ಲದೆ ಟೀಮ್ ಇಂಡಿಯಾ ಕ್ಯಾಪ್ ಧರಿಸುವ ಮೊದಲೇ ಐಪಿಎಲ್‌ನಲ್ಲಿ ಶತಕ ಬಾರಿಸಿದ ಕೆಲವೇ ಕೆಲವು ಸಾಧಕರ ಸಾಲಿಗೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ಕರ್ನಾಟಕದ ಮನೀಶ್ ಪಾಂಡೆ ಇದೇ ಸಾಧನೆ ಮಾಡಿದ್ದರು.

ADVERTISEMENT

ಅತ್ತ ನಾಯಕ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 6,000 ರನ್ ಮೈಲಿಗಲ್ಲು ಕ್ರಮಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಭಾಜನವಾಗಿದ್ದಾರೆ. 196ನೇ ಪಂದ್ಯದ 188ನೇ ಇನ್ನಿಂಗ್ಸ್‌ನಲ್ಲಿ ಕೊಹ್ಲಿ ಈ ದಾಖಲೆ ಬರೆದಿದ್ದಾರೆ. ಕೊಹ್ಲಿ ಬಳಿಕ ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸುರೇಶ್ ರೈನಾ 5,448 ರನ್ ಗಳಿಸಿದ್ದಾರೆ.

ಆರ್‌ಸಿಬಿ ಪರ ಮೊದಲ ವಿಕೆಟ್‌ಗೆ ಅತಿ ಹೆಚ್ಚು ರನ್‌ಗಳ ಜೊತೆಯಾಟ ನೀಡಿದ ದಾಖಲೆಯು ಪಡಿಕ್ಕಲ್-ಕೊಹ್ಲಿ ಜೋಡಿಯ ಪಾಲಾಗಿದೆ. ಇವರಿಬ್ಬರು 16.3 ಓವರ್‌ಗಳಲ್ಲಿ ಅಜೇಯ 181 ರನ್ ಪೇರಿಸುವ ಮೂಲಕ ಆರ್‌ಸಿಬಿಗೆ ಸ್ಮರಣೀಯ ಗೆಲುವು ಒದಗಿಸಿಕೊಟ್ಟಿದ್ದರು.

52 ಎಸೆತಗಳನ್ನು ಎದುರಿಸಿದ ಪಡಿಕ್ಕಲ್ 11 ಬೌಂಡರಿ ಹಾಗೂ ಆರು ಭರ್ಜರಿ ಸಿಕ್ಸರ್ ನೆರವಿನಿಂದ 101 ರನ್ ಗಳಿಸಿ ಅಜೇಯರಾಗುಳಿದರು. ಅತ್ತ ನಾಯಕ ವಿರಾಟ್ ಕೊಹ್ಲಿ 47 ಎಸೆತಗಳಲ್ಲಿ ಆರು ಬೌಂಡರಿ ಹಾಗೂ ಮೂರು ಸಿಕ್ಸರ್ ನೆರವಿನಿಂದ 72ರನ್ ಗಳಿಸಿ ಔಟಾಗದೆ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.