ADVERTISEMENT

IPL 2021: ಟಾಸ್ ಗೆದ್ದರೂ ವಿರಾಟ್ ಕ್ಷಮೆಯಾಚಿಸಿದ್ದೇಕೆ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಏಪ್ರಿಲ್ 2021, 14:10 IST
Last Updated 22 ಏಪ್ರಿಲ್ 2021, 14:10 IST
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್‌ಶಾಟ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಕ್ಕೂ ಮುನ್ನ ವಿಚಿತ್ರವಾದ ಸನ್ನಿವೇಶ ಸೃಷ್ಟಿಯಾಗಿತ್ತು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಟಾಸ್ ಗೆದ್ದ ಪರಿಜ್ಞಾನವೇ ಇರಲಿಲ್ಲ. ಇದರಿಂದಾಗಿ ಕೊನೆಗೆ ಕ್ಷಮೆಯಾಚಿಸಬೇಕಾಯಿತು.

ಸಂಜೆ 7ಕ್ಕೆ ಸರಿಯಾಗಿ ಮ್ಯಾಚ್ ರೆಫರಿ ಸಾನಿಧ್ಯದಲ್ಲಿ ಟಾಸ್ ಹಾಕಲಾಯಿತು. ಸ್ವತಃ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದರು. ಈ ಸಂದರ್ಭದಲ್ಲಿ ಸಂಜು, 'ಟೇಲ್' ಎಂದು ಕರೆ ನೀಡುತ್ತಾರೆ.

ಆದರೆ ಟಾಸ್ ಗೆಲ್ಲುವಲ್ಲಿ ವಿರಾಟ್ ಯಶಸ್ವಿಯಾಗುತ್ತಾರೆ. ಆದರೂ ಟಾಸ್ ಗೆದ್ದ ಪರಿಜ್ಞಾನವಿಲ್ಲದೆ ನೇರವಾಗಿ ಬದಿಗೆ ಸರಿಯುತ್ತಾರೆ. ಅತ್ತ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಏನು ಮಾಡಬೇಕೆಂದು ತೋಚದೇ ಗೊಂದಲಕ್ಕೊಳಗಾಗುತ್ತಾರೆ.

ಇನ್ನೊಂದೆಡೆ ವೀಕ್ಷಕ ವಿವರಣೆಗಾರ ಇಯಾನ್ ಬಿಷಪ್ ನೀವೇನು ಆಯ್ಕೆ ಮಾಡುತ್ತೀರಾ ಎಂದು ಸಂಜು ಅವರನ್ನು ಪ್ರಶ್ನಿಸುತ್ತಾರೆ. ಈ ಸಂದರ್ಭದಲ್ಲಿ ತಕ್ಷಣ ಎಚ್ಚೆತ್ತುಕೊಂಡ ವಿರಾಟ್, 'ಓ ನಾನು ಟಾಸ್ ಗೆದ್ದಿದ್ದೇನೆ. ಕ್ಷಮೆಯಿರಲಿ, ಕ್ಷಮೆಯಿರಲಿ, ನಾನು ಟಾಸ್ ಗೆಲ್ಲುವ ಅಭ್ಯಾಸವನ್ನು ರೂಢಿಸಿಕೊಂಡಿಲ್ಲ' ಎಂದು ನಗುಮುಖದಿಂದಲೇ ಹೇಳುತ್ತಾರೆ.

ಈ ಸಂದರ್ಭದಲ್ಲಿ ಎಲ್ಲರ ಮುಖದಲ್ಲೂ ಮಂದಹಾಸ ಮೂಡುತ್ತದೆ. ಅಂತಿಮವಾಗಿ ವಿರಾಟ್ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.