ADVERTISEMENT

IPL 2022: ಐಪಿಎಲ್‌ನಲ್ಲಿ ಸ್ಮರಣೀಯ ದಾಖಲೆ ಬರೆದ ಡೇವಿಡ್ ವಾರ್ನರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 10:04 IST
Last Updated 21 ಏಪ್ರಿಲ್ 2022, 10:04 IST
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ದಾಖಲೆಯ 53ನೇ ಅರ್ಧಶತಕ ಗಳಿಸಿದ್ದಾರೆ.

ಐಪಿಎಲ್ 2022ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿರುವ ವಾರ್ನರ್, ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಿರುಸಿನ ಅರ್ಧಶತಕ ಬಾರಿಸಿದರು. ಈ ಮೂಲಕ ಸತತ ಮೂರನೇ ಅರ್ಧಶತಕ ಸಾಧನೆ ಮಾಡಿದರು.

ಪಂಜಾಬ್ ವಿರುದ್ಧ ಸಹಸ್ರ ರನ್ ಸಾಧನೆ...
ಪಂಜಾಬ್ ಕಿಂಗ್ಸ್ ವಿರುದ್ಧ 1,000ಕ್ಕೂ ಹೆಚ್ಚು ರನ್ ಗಳಿಸಿದ ಹೆಗ್ಗಳಿಕೆಗೂ ವಾರ್ನರ್ ಪಾತ್ರರಾದರು. ಈ ಮೂಲಕ ಐಪಿಎಲ್‌ನಲ್ಲಿ ನಿರ್ದಿಷ್ಟ ತಂಡವೊಂದರ ವಿರುದ್ಧ 1,000ಕ್ಕೂ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಎನಿಸಿದರು.

ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ರೋಹಿತ್ ಶರ್ಮಾ 1,018 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಪಂಜಾಬ್ ವಿರುದ್ಧ ವಾರ್ನರ್ 1,005 ರನ್ ಪೇರಿಸಿದ್ದಾರೆ.

ಕೆಕೆಆರ್ ವಿರುದ್ಧವೂ ವಾರ್ನರ್ 976 ರನ್ ಗಳಿಸಿದ್ದಾರೆ. ಇನ್ನು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ವಿರಾಟ್ ಕೊಹ್ಲಿ 949 ರನ್ ಗಳಿಸಿದ್ದಾರೆ.

ಬಟ್ಲರ್ ತರಹನೇ ಶತಕ ಏಕೆ ಗಳಿಸುತ್ತಿಲ್ಲ?
ಜೋಸ್ ಬಟ್ಲರ್ ತರಹನೇ ಶತಕ ಏಕೆ ಗಳಿಸುತ್ತಿಲ್ಲ ಎಂದು ಪುತ್ರಿಯರು ತನ್ನನ್ನು ಕೇಳುತ್ತಿರುವುದಾಗಿ ವಾರ್ನರ್ ವಿವರಿಸಿದ್ದಾರೆ.

'60 ರನ್ ಸಾಕಾಗುವುದಿಲ್ಲ. ನನ್ನ ಮಕ್ಕಳು ಜೋಸ್ ಬಟ್ಲರ್ ಬ್ಯಾಟಿಂಗ್ ಮಾಡುವುದನ್ನು ನೋಡುತ್ತಾರೆ. ನಾನು ಕೂಡ ಅವರಂತೆ ಚೆಂಡನ್ನು ಏಕೆ ಹೊಡೆಯಲು ಸಾಧ್ಯವಿಲ್ಲ ಎಂದು ಕೇಳುತ್ತಾರೆ. ವಿಶ್ವದಾದ್ಯಂತ ಮಕ್ಕಳು ಈ ಆಟವನ್ನು ನೋಡುತ್ತಿರುವುದು ತುಂಬಾ ಸಂತೋಷದಾಯಕ ವಿಚಾರ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.