ADVERTISEMENT

IPL 2022: ಎಬಿ ಡಿವಿಲಿಯರ್ಸ್‌ ಅವರಿಂದ ಕ್ರಿಕೆಟ್ ಪಾಠ ಕಲಿಯುತ್ತಿರುವ 'ಬೇಬಿ ಎಬಿ'

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2022, 12:38 IST
Last Updated 16 ಏಪ್ರಿಲ್ 2022, 12:38 IST
ಡೆವಾಲ್ಡ್ ಬ್ರೆವಿಸ್
ಡೆವಾಲ್ಡ್ ಬ್ರೆವಿಸ್   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾದ ಯುವ ಪ್ರತಿಭಾವಂತ ಆಟಗಾರ ಡೆವಾಲ್ಡ್ ಬ್ರೆವಿಸ್, ಈಗಾಗಲೇ ಅಮೋಘ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದಾರೆ.

ದಕ್ಷಿಣ ಆಫ್ರಿಕಾದವರೇ ಆದ 'ಮಿಸ್ಟರ್ 360 ಡಿಗ್ರಿ' ಖ್ಯಾತಿಯ ಎಬಿ ಡಿವಿಲಿಯರ್ಸ್ ಅವರಿಂದ ಕ್ರಿಕೆಟ್ ಪಾಠಗಳನ್ನು ಕಲಿಯುತ್ತಿದ್ದು, ಇದರಿಂದ ತಮ್ಮ ಬ್ಯಾಟಿಂಗ್‌ಗೆ ಅನುಕೂಲವಾಗುತ್ತಿದೆ ಎಂದು ಹೇಳಿದ್ದಾರೆ.

ಚೊಚ್ಚಲ ಐಪಿಎಲ್ ಪಂದ್ಯದಲ್ಲೇ 29 ರನ್ ಗಳಿಸಿದ್ದ ಬ್ರೆವಿಸ್ ಬಳಿಕ ಪಂಜಾಬ್ ಕಿಂಗ್ಸ್ ವಿರುದ್ದ ಕೇವಲ 25 ಎಸೆತಗಳಲ್ಲಿ 49 ರನ್ ಗಳಿಸಿ ಮೆಚ್ಚುಗೆ ಗಳಿಸಿದ್ದರು. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಚಾಹರ್ ಅವರ ಒಂದೇ ಓವರ್‌ನಲ್ಲಿ ಸತತ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ಅಬ್ಬರಿಸಿದ್ದರು. ಇದರಲ್ಲಿ 112 ಮೀಟರ್ ದೂರದ ಸಿಕ್ಸರ್ ಸೇರಿತ್ತು.

ಎಬಿಡಿ ವಿಲಿಯರ್ಸ್ ಬ್ಯಾಟಿಂಗ್ ಶೈಲಿಗೆ ಸಾಮ್ಯತೆ ಹೊಂದಿರುವ ಹಿನ್ನೆಲೆಯಲ್ಲಿ 18 ವರ್ಷದ ಬ್ರೆವಿಸ್ ಅವರನ್ನು 'ಬೇಬಿ ಎಬಿ' ಎಂದೇ ಕರೆಯಲಾಗುತ್ತಿದೆ. ಅಲ್ಲದೆ ಉಜ್ವಲ ಭವಿಷ್ಯದ ಭರವಸೆ ಮೂಡಿಸಿದ್ದಾರೆ.

ಅಂಡರ್-19 ವಿಶ್ವಕಪ್‌ನಲ್ಲಿ ಬ್ರೆವಿಸ್ ಆರು ಪಂದ್ಯಗಳಲ್ಲಿ 84.33ರ ಸರಾಸರಿಯಲ್ಲಿ ಒಟ್ಟು 506 ರನ್ ಗಳಿಸಿದ್ದರು. ಇದು ಎರಡು ಶತಕ ಹಾಗೂ ಮೂರು ಅರ್ಧಶಕಗಳನ್ನು ಒಳಗೊಂಡಿತ್ತು.

'ನನ್ನ ಕ್ರಿಕೆಟ್‌ನಲ್ಲಿ ಎಬಿ ಡಿವಿಲಿಯರ್ಸ್ ದೊಡ್ಡ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ವಿಶೇಷ ಬಾಂಧವ್ಯ. ಸಣ್ಣ ಸಣ್ಣ ವಿಚಾರಗಳನ್ನು ಅವರು ನನಗೆ ಹೇಳಿಕೂಡುತ್ತಾರೆ. ಇದರಿಂದ ಸಾಕಷ್ಟು ಅನುಕೂಲವಾಗಿದೆ. ನನ್ನ ಮನಸ್ಥಿತಿ, ಆಟವನ್ನು ಹೇಗೆ ಆಡಬೇಕೆಂದು ಹೇಳಿಕೊಡುತ್ತಾರೆ. ವಿಷಯಗಳನ್ನು ಸರಳವಾಗಿರಿಸಲು ಸೂಚಿಸುತ್ತಾರೆ. ಅಲ್ಲದೆ ಸಣ್ಣಪುಟ್ಟ ತಾಂತ್ರಿಕ ವಿಚಾರಗಳ ಸಲಹೆಗಳು ನೆರವು ಮಾಡುತ್ತಿವೆ. ಆಕ್ರಮಣಶೀಲತೆಯೊಂದಿಗೆ ಆಡುವುದು ಮುಖ್ಯ. ಆದರೆ ನಿರ್ದಿಷ್ಟ ಸಂದರ್ಭಗಳಲ್ಲಿ ಸಂಯಮಕಾಪಾಡಬೇಕಾಗುತ್ತದೆ' ಎಂದು ಬ್ರೆವಿಸ್ ಹೇಳಿದರು.

ಸಚಿನ್ ತೆಂಡೂಲ್ಕರ್ ಹಾಗೂ ಮಹೇಲಾ ಜಯವರ್ಧನೆ ಅವರೊಂದಿಗೆ ಡ್ರೆಸ್ಸಿಂಗ್ ಕೊಠಡಿ ಹಂಚಿಕೊಳ್ಳಲು ಸಾಧ್ಯವಾಗಿರುವುದು ಕನಸು ನನಸಾದ ಕ್ಷಣ ಎಂದು ಹೇಳಿದರು. ನಾನು ಎಲ್ಲರಿಂದಲೂ ಕಲಿಯುತ್ತಿದ್ದೇನೆ. ನಿರ್ಭೀತಿಯಿಂದ ಸ್ಮಾರ್ಟ್ ಕ್ರಿಕೆಟ್ ಆಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.