ADVERTISEMENT

ಜಡೇಜ ಹೆಸರಿಗೆ ಮಾತ್ರ ಕಪ್ತಾನ? ಪಂದ್ಯ ನಿಯಂತ್ರಿಸಿದ್ದು ಧೋನಿ ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 13:12 IST
Last Updated 1 ಏಪ್ರಿಲ್ 2022, 13:12 IST
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ
ರವೀಂದ್ರ ಜಡೇಜ ಹಾಗೂ ಮಹೇಂದ್ರ ಸಿಂಗ್ ಧೋನಿ   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್ ಅಂತರದ ಸೋಲಿಗೆ ಶರಣಾಗಿತ್ತು.

ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಆರಂಭಿಕ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.

ಟೂರ್ನಿ ಆರಂಭಕ್ಕೂ ಮುನ್ನ ಸಿಎಸ್‌ಕೆ ನಾಯಕತ್ವವನ್ನು ಆಲ್‌ರೌಂಡರ್ ರವೀಂದ್ರ ಜಡೇಜ ಅವರಿಗೆ ಧೋನಿ ಹಸ್ತಾಂತರಿಸಿದ್ದರು. ಆದರೆ ಜಡೇಜ ಹೆಸರಿಗೆ ಮಾತ್ರ ನಾಯಕರಾಗಿದ್ದಾರೆ. ಪಂದ್ಯವನ್ನು ಧೋನಿ ನಿಯಂತ್ರಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

ಬೌಲಿಂಗ್ ಬದಲಾವಣೆ, ಕ್ಷೇತ್ರರಕ್ಷಣೆಯಲ್ಲಿ ಹೊಂದಾಣಿಕೆ ಹೀಗೆ ಚೆನ್ನೈ ತಂಡದ ಸಂಪೂರ್ಣ ನಿಯಂತ್ರಣ ಧೋನಿ ಕೈಯಲ್ಲಿತ್ತು. ಕ್ಯಾಮೆರಾ ಕಣ್ಣುಗಳು ಅವರನ್ನೇ ಕೇಂದ್ರಿಕರಿಸಿದ್ದವು. ಜಡೇಜ ಮಾತ್ರ ಎಂದಿನಂತೆ ಬೌಂಡರಿ ಗೆರೆ ಬಳಿ ಕ್ಷೇತ್ರರಕ್ಷಣೆ ಮಾಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಭಾರತದ ಮಾಜಿ ಕ್ರಿಕೆಟಿಗ ಅಜಯ್ ಜಡೇಜ, 'ಕ್ರಿಕ್‌ಬಜ್‌‌'ನಲ್ಲಿ ಪಂದ್ಯದ ಬಳಿಕ ನಡೆದ ವಿಶ್ಲೇಷಣೆ ಕಾರ್ಯಕ್ರಮದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

'ಇದು ತಪ್ಪು, ಇದರಲ್ಲಿ ಯಾವುದೇ ಸಂಶಯವಿಲ್ಲ. ನೋಡಿ, ಧೋನಿಗೆ ನನಿಗಂತ ದೊಡ್ಡ ಅಭಿಮಾನಿ ಬೇರೆ ಯಾರೂ ಇಲ್ಲ. ಅದಕ್ಕೆ ಅವರ ಶಾಂತಯುತ ಸ್ವಭಾವವೇ ಕಾರಣ. ಹಾಗೊಂದು ವೇಳೆ ಇದು ಕ್ವಾಲಿಫೈಯರ್‌ಗಿಂತಲೂ ಮೊದಲು ಕೊನೆಯ ಪಂದ್ಯವಾಗಿದ್ದರೆ, 'ಮಾಡು ಇಲ್ಲವೇ ಮಡಿ' ಸನ್ನಿವೇಶವಾಗಿದ್ದರೆ ಬಹುಶಃ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು. ಆದರೆ ಸೀಸನ್ ಆರಂಭದ ಎರಡನೇ ಪಂದ್ಯದಲ್ಲಿ ಹೀಗಾಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ನೋಡಿ, ನಾನು ಇದನ್ನು ರವೀಂದ್ರ ಜಡೇಜ ಆಗಿದ್ದರಿಂದ ಹೇಳುತ್ತಿಲ್ಲ. ಓರ್ವ ಕ್ರಿಕೆಟ್ ಅಭಿಮಾನಿಯಾಗಿ ಇದು ಸ್ವಲ್ಪ ವಿಚಿತ್ರವಾಗಿ ಕಾಣಿಸುತ್ತಿದೆ.ಸಂಪೂರ್ಣ ಆಟದಲ್ಲಿ ಜಡೇಜ ಅಲ್ಲೇ ಇದ್ದರು. ಧೋನಿ ಶ್ರೇಷ್ಠ ಆಟಗಾರ. ಹಾಗಾಗಿ ಇದನ್ನು ಜೋರಾಗಿ ಹೇಳಲು ಇಷ್ಟಪಡುವುದಿಲ್ಲ. ಆದರೆ ಅವರ ಈ ನಡೆ ನನಗೆ ಇಷ್ಟವಾಗಲಿಲ್ಲ' ಎಂದು ಹೇಳಿದರು.

'ಧೋನಿಯಂತಹ ನಾಯಕ ಯಾರೂ ಇಲ್ಲ, ಇರಲೂ ಸಾಧ್ಯವಿಲ್ಲ. ಸಿಎಸ್‌ಕೆ ನಾಯಕ ಸ್ಥಾನ ಬಿಟ್ಟುಕೊಡುವ ನಿರ್ಧಾರ ಅವರದ್ದಾಗಿತ್ತು. ಆದರೆ ಇಂದು ಜಡೇಜ ಅವರನ್ನು ಮುಂದಕ್ಕೆ ಹುರಿದುಂಬಿಸುವ ಬದಲು ಹಿಂದಕ್ಕೆ ತಳ್ಳಿದ್ದಾರೆ. ಅವರ ಆತ್ಮವಿಶ್ವಾಸ ಕುಗ್ಗಿದೆ. ಅವರ ಗಮನ ಆಟದಲ್ಲಿರಲಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.