ADVERTISEMENT

IPL 2022: ರೋಹಿತ್, ಕೊಹ್ಲಿ ಕಳಪೆ ಬ್ಯಾಟಿಂಗ್ ಬಗ್ಗೆ ಚಿಂತೆಯಿಲ್ಲ: ಗಂಗೂಲಿ

ಪಿಟಿಐ
Published 25 ಮೇ 2022, 11:19 IST
Last Updated 25 ಮೇ 2022, 11:19 IST
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ (ಸಂಗ್ರಹ ಚಿತ್ರ)   

ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಚಿಂತೆಯಿಲ್ಲ. ಶೀಘ್ರದಲ್ಲೇ ಬ್ಯಾಟಿಂಗ್ ಲಯಕ್ಕೆ ಮರಳಲಿದ್ದಾರೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ಐಪಿಎಲ್ 2022ನೇ ಸಾಲಿನ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿರುವ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ, 14 ಪಂದ್ಯಗಳಲ್ಲಿ 19.14ರ ಸರಾಸರಿಯಲ್ಲಿ 268 ರನ್ ಮಾತ್ರ ಗಳಿಸಿದ್ದು, 120.17ರ ಸ್ಟ್ರೈಕ್‌ರೇಟ್ ಹೊಂದಿದ್ದಾರೆ.

ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ನಾಲ್ಕು ಪಂದ್ಯದಲ್ಲಷ್ಟೇ ಗೆಲುವು ದಾಖಲಿಸಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

'ಎಲ್ಲರೂ ಮನುಷ್ಯರು ಆಗಿರುವುದರಿಂದ ತಪ್ಪುಗಳು ಸಂಭವಿಸುತ್ತವೆ. ಆದರೆ ನಾಯಕರಾಗಿ ರೋಹಿತ್ ದಾಖಲೆ ಅತ್ಯುತ್ತಮವಾಗಿದೆ. ಐದು ಐಪಿಎಲ್ ಟ್ರೋಫಿ, ಏಷ್ಯಾ ಕಪ್ ಗೆದ್ದಿದ್ದಾರೆ' ಎಂದು ಗಂಗೂಲಿ ಹೇಳಿದ್ದಾರೆ.

ಅತ್ತ ವಿರಾಟ್ ಕೊಹ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಮೂರು ಬಾರಿ ಗೋಲ್ಡನ್ ಡಕ್ ಔಟ್ ಆಗಿದ್ದರು. ಬಳಿಕ ಕೆಕೆಆರ್ ವಿರುದ್ಧ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಅರ್ಧಶತಕ ಗಳಿಸಿ ಮಿಂಚಿದ್ದರು.

'ಅವರು ಬ್ಯಾಟಿಂಗ್ ಲಯಕ್ಕೆ ಮರಳುವ ನಂಬಿಕೆ ನನಗಿದೆ. ಬಿಡುವಿಲ್ಲದ ಕ್ರಿಕೆಟ್ ಆಡುವಾಗ ಕೆಲವೊಮ್ಮೆ ಹೀಗಾಗುತ್ತದೆ. ಆರ್‌ಸಿಬಿಗೆ ಅಗತ್ಯವಿದ್ದಾಗ ಕೊಹ್ಲಿ ಚೆನ್ನಾಗಿ ಆಡಿದ್ದರು. ಅದಕ್ಕಾಗಿಯೇ ಆರ್‌ಸಿಬಿ ಪ್ಲೇ-ಆಫ್‌ಗೆ ಪ್ರವೇಶಿಸಿದ್ದಕ್ಕಾಗಿ ವಿರಾಟ್ ತುಂಬಾ ಖುಷಿಪಟ್ಟಿದ್ದಾರೆ. ಅವರೆಲ್ಲರು ಶ್ರೇಷ್ಠ ಆಟಗಾರರು' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.