ADVERTISEMENT

ಪಂಜಾಬ್ ಮಣಿಸಿ 4ನೇ ಸ್ಥಾನಕ್ಕೇರಿದ ಡೆಲ್ಲಿ; ಆರ್‌ಸಿಬಿ 5ನೇ ಸ್ಥಾನಕ್ಕೆ ಕುಸಿತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಮೇ 2022, 19:08 IST
Last Updated 16 ಮೇ 2022, 19:08 IST
ಶಾರ್ದೂಲ್ ಠಾಕೂರ್
ಶಾರ್ದೂಲ್ ಠಾಕೂರ್   

ಮುಂಬೈ: ಸಾಧಾರಣ ಮೊತ್ತದ ಗುರಿ ಬೆನ್ನತ್ತಿದರೂ ದಡ ಸೇರದ ಪಂಜಾಬ್ ಕಿಂಗ್ಸ್ ನಿರಾಸೆಗೆ ಒಳಗಾಯಿತು. ಮಿಚೆಲ್ ಮಾರ್ಷ್‌ ಅವರ ಹೋರಾಟದ ಅರ್ಧಶಕತ ಮತ್ತು ಐಪಿಎಲ್‌ನಲ್ಲಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ಅವರ ಪರಿಣಾಮಕಾರಿ ಬೌಲಿಂಗ್‌ನಿಂದಾಗಿ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ಜಯ ಸಾಧಿಸಿತು.

ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ 17 ರನ್‌ಗಳಿಂದ ಗೆದ್ದು ಪ್ಲೇ ಆಫ್‌ ಆಸೆ ಜೀವಂತವಾಗಿರಿಸಿಕೊಂಡಿತು. ಪಂಜಾಬ್‌ ಹಾದಿ ಕಠಿಣವಾಯಿತು.

160 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಪಂಜಾಬ್ ತಂಡ ಶಾರ್ದೂಲ್ ಠಾಕೂರ್ ಅವರ ವೇಗ ಮತ್ತು ಅಕ್ಷರ್ ಪಟೇಲ್‌, ಕುಲದೀಪ್ ಯಾದವ್ ಜೋಡಿಯ ಸ್ಪಿನ್ ದಾಳಿಗೆ ನಲುಗಿತು. ಆರಂಭಿಕ ಬ್ಯಾಟರ್ ಜಾನಿ ಬೆಸ್ಟೊ, ವಿಕೆಟ್ ಕೀಪರ್ ಜಿತೇಶ್ ಶರ್ಮಾ ಮತ್ತು 9ನೇ ಕ್ರಮಾಂಕದ ರಾಹುಲ್ ಚಾಹರ್ ಮಾತ್ರ ಸ್ವಲ್ಪ ಪ್ರತಿರೋಧ ಒಡ್ಡಿದರು. ಶೂನ್ಯಕ್ಕೆ ಔಟಾದ ನಾಯಕ ಮಯಂಕ್ ಅಗರವಾಲ್ ಸೇರಿದಂತೆ 7 ಮಂದಿಗೆ ಎರಡಂಕಿ ಮೊತ್ತ ದಾಟಲು ಆಗಲಿಲ್ಲ.

ADVERTISEMENT

ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಡೆಲ್ಲಿ ಬೌಲರ್‌ಗಳ ನಿಖರ ದಾಳಿಗೆ ತತ್ತರಿಸಿದ ಪಂಜಾಬ್ ಒಂಬತ್ತು ವಿಕೆಟ್ ನಷ್ಟಕ್ಕೆ 142 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಡೆಲ್ಲಿ ಆಡಿರುವ 13 ಪಂದ್ಯಗಳಲ್ಲಿ ಏಳನೇ ಗೆಲುವಿನೊಂದಿಗೆ ಒಟ್ಟು 14 ಅಂಕ ಗಳಿಸಿದೆ. ಅತ್ತ ಪಂಜಾಬ್ 13 ಪಂದ್ಯಗಳಲ್ಲಿ ಏಳನೇ ಸೋಲಿಗೆ ಶರಣಾಗಿದೆ. ಆದರೂ ಏಳನೇ ಸ್ಥಾನದಲ್ಲೇ ಉಳಿದುಕೊಂಡಿದ್ದು, ಪ್ಲೇ-ಆಫ್ ಹಾದಿ ಕಠಿಣವೆನಿಸಿದೆ.

ಇದರೊಂದಿಗೆ ಲಿಯಾಮ್ ಲಿವಿಂಗ್‌ಸ್ಟೋನ್ (37ಕ್ಕೆ 3) ಹಾಗೂ ಜಿತೇಶ್ ಶರ್ಮಾ (44) ಹೋರಾಟವು ವ್ಯರ್ಥವೆನಿಸಿದೆ.

ಪಂಜಾಬ್ ತಂಡಕ್ಕೆ ಜಾನಿ ಬೆಸ್ಟೊ (28 ರನ್, 15 ಎಸೆತ) ಬಿರುಸಿನ ಆರಂಭವೊದಗಿಸಿದರು. ಶಿಖರ್ ಧವನ್ 19 ರನ್ ಗಳಿಸಿದರು. ಆದರೆ ಈ ಜೋಡಿಯ ವಿಕೆಟ್ ಪತನದೊಂದಿಗೆ ಹಿನ್ನಡೆ ಅನುಭವಿಸಿತು.

ಇನ್ನಿಂಗ್ಸ್‌ನ 6ನೇ ಓವರ್‌ನಲ್ಲಿ ಶಾರ್ದೂಲ್ ಠಾಕೂರ್ ಡಬಲ್ ಆಘಾತ ನೀಡಿದರು. ಬಳಿಕ ಅಕ್ಷರ್ ಹಾಗೂ ಕುಲ್‌ದೀಪ್ ಮೋಡಿ ಮಾಡಿದರು.

ಈ ನಡುವೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ದಿಟ್ಟ ಹೋರಾಟ ತೋರಿದರೂ ಯಾವುದೇ ಪ್ರಯೋಜನ ಉಂಟಾಗಲಿಲ್ಲ. 34 ಎಸೆತಗಳನ್ನು ಎದುರಿಸಿದ ಜಿತೇಶ್ ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 44 ರನ್ ಗಳಿಸಿದರು.

ಇನ್ನುಳಿದಂತೆ ರಾಹುಲ್ ಚಾಹರ್ 25 ರನ್ ಗಳಿಸಿ ಔಟಾಗದೆ ಉಳಿದರು. ಭಾನುಕ ರಾಜಪಕ್ಸ (4), ಲಿಯಾಮ್ ಲಿವಿಂಗ್‌ಸ್ಟೋನ್ (3), ನಾಯಕ ಮಯಂಕ್ ಅಗರವಾಲ್ (0), ಹರಪ್ರೀತ್ ಬ್ರಾರ್ (1), ರಿಷಿ ಧವನ್ (4) ನಿರಾಸೆ ಮೂಡಿಸಿದರು.

ಡೆಲ್ಲಿ ಪರ ಶಾರ್ದೂಲ್ ನಾಲ್ಕು ಮತ್ತು ಅಕ್ಷರ್ ಹಾಗೂ ಕುಲದೀಪ್ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಮಧ್ಯಮ ಕ್ರಮಾಂಕದ ಕುಸಿತ; ಮಾರ್ಷ್ ಆಸರೆ

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮ ಕ್ರಮಾಂಕದ ದಿಢೀರ್ ಕುಸಿತದ ನಡುವೆಯೂ ಮೋಹಕ ಬ್ಯಾಟಿಂಗ್ ಪ್ರದರ್ಶಿಸಿದ ಮಿಚೆಲ್ ಮಾರ್ಷ್, ಡೆಲ್ಲಿ ಕ್ಯಾಪಿಟಲ್ಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 159 ರನ್ ಕಲೆಹಾಕಲು ನೆರವಾದರು.

ಇನಿಂಗ್ಸ್‌ನ ಮೊದಲ ಎಸೆತದಲ್ಲೇ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿದ್ದ ರಾಹುಲ್ ಚಾಹರ್ ಅವರ ಮುಷ್ಠಿಯೊಳಗೆ ತಲುಪಿಸಿ ಲಿಯಾಮ್ ಲಿವಿಂಗ್‌ಸ್ಟೋನ್‌ ಸಂಭ್ರಮಿಸಿದರು. ಸರ್ಫರಾಜ್ ಖಾನ್ ಮತ್ತು ಮಿಚೆಲ್ ಮಾರ್ಷ್ ಎರಡನೇ ವಿಕೆಟ್‌ಗೆ 51 ರನ್‌ ಸೇರಿಸಿದರು. ಸರ್ಫರಾಜ್ ಖಾನ್ ವಿಕೆಟ್ ಕಬಳಿಸಿ ಆರ್ಷದೀಪ್ ಸಿಂಗ್ ಪೆಟ್ಟು ನೀಡಿದರು.

ಮಿಚೆಲ್ ಮಾರ್ಷ್ ಮತ್ತು ಲಲಿತ್ ಯಾದವ್ ಕೂಡ ಉತ್ತಮ ಆಟವಾಡಿದರು. ಇವರಿಬ್ಬರ ಜೊತೆಯಾಟದಲ್ಲಿ 47 ರನ್‌ಗಳು ಹರಿದುಬಂದವು. ಲಲಿತ್ ಔಟಾದ ನಂತರ ತಂಡ ದಿಢೀರ್ ಪತನ ಕಂಡಿತು. 19ನೇ ಓವರ್‌ನಲ್ಲಿ ಮಿಚೆಲ್ ಕೂಡ ಔಟಾದರು. ಅಂತಿಮ ಓವರ್‌ಗಳಲ್ಲಿ ನಿರೀಕ್ಷಿತ ರನ್‌ಗಳು ಬರಲಿಲ್ಲ.

ಮರಳಿ ಬಂದ ಹೆಟ್ಮೆಯರ್

ಮೊದಲ ಮಗುವಿನ ಜನನದ ಸಂಭ್ರಮದಲ್ಲಿ ಪಾಲ್ಗೊಳ್ಳಲು ತಾಯ್ನಾಡಿಗೆ ಮರಳಿದ್ದ ರಾಜಸ್ಥಾನ ರಾಯಲ್ಸ್ ಬ್ಯಾಟರ್ವೆಸ್ಟ್ ಇಂಡೀಸ್‌ನ ಶಿಮ್ರೊನ್ ಹೆಟ್ಮೆಯರ್ ಮರಳಿ ಬಂದಿದ್ದು ತಂಡವನ್ನು ಸೇರಿಕೊಂಡಿದ್ದಾರೆ. ಇದೇ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ನಡೆಯಲಿರುವ ಲೀಗ್‌ ಹಂತದ ತನ್ನ ಕೊನೆಯ ಪಂದ್ಯಕ್ಕೆ ಅವರು ಲಭ್ಯ ಇರುವರು.

ಸ್ಫೋಟಕ ಹೊಡೆತಗಳ ಆಟಗಾರ ಶಿಮ್ರೊನ್ ಮೇ ಎಂಟರಂದು ಗಯಾನಗೆ ಮರಳಿದ್ದರು. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ಎದುರಿನ ಪಂದ್ಯದಲ್ಲಿ ಆಡಿರಲಿಲ್ಲ. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ 24 ರನ್‌ಗಳಿಂದ ಲಖನೌ ಸೂಪರ್ ಜೈಂಟ್ಸ್ ತಂಡವನ್ನು ಮಣಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತ್ತು.

25 ವರ್ಷದ ಹೆಟ್ಮೆಯರ್‌ ಅವರನ್ನು ಫ್ರಾಂಚೈಸ್ ₹ 8.5 ಕೋಟಿ ಮೊತ್ತ ನೀಡಿ ಸೇರಿಸಿಕೊಂಡಿತ್ತು. 11 ಪಂದ್ಯಗಳಲ್ಲಿ ಈ ವರೆಗೆ 291 ರನ್ ಕಲೆ ಹಾಕಿದ್ದಾರೆ.

ಮಗದೊಮ್ಮೆ ದಾಳಿಗಿಳಿದ ಲಿವಿಂಗ್‌ಸ್ಟೋನ್, ನಾಯಕ ರಿಷಭ್ ಪಂತ್ (7) ಹಾಗೂ ರೋವ್‌ಮ್ಯಾನ್ ಪೊವೆಲ್ (2) ವಿಕೆಟ್ ಗಳಿಸುವ ಮೂಲಕ ಮೋಡಿ ಮಾಡಿದರು. ಇದರಿಂದಾಗಿ ಡೆಲ್ಲಿ 13.3 ಓವರ್‌ಗಳಲ್ಲಿ 112ಕ್ಕೆ ಐದು ವಿಕೆಟ್ ಕಳೆದುಕೊಂಡಿತು.

ವಿಕೆಟ್‌ನ ಇನ್ನೊಂದು ತುದಿಯಿಂದ ಆಕರ್ಷಕ ಇನ್ನಿಂಗ್ಸ್ ಕಟ್ಟಿದ ಮಾರ್ಷ್ ಅರ್ಧಶತಕದ ಸಾಧನೆ ಮಾಡಿದರು. ಈ ಮೂಲಕ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

19ನೇ ಓವರ್‌ನಲ್ಲಿ ಔಟ್ ಆದ ಮಾರ್ಷ್, 63 ರನ್‌ಗಳ ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. 48 ಎಸೆತಗಳನ್ನು ಎದುರಿಸಿದ ಮಾರ್ಷ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್‌ ಸೇರಿದ್ದವು.

ಅಂತಿಮವಾಗಿ ಡೆಲ್ಲಿ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಇನ್ನುಳಿದಂತೆ ಅಕ್ಷರ್ ಪಟೇಲ್ 17 ರನ್ ಗಳಿಸಿ ಔಟಾಗದೆ ಉಳಿದರು.

ಪಂಜಾಬ್ ಪರ ಲಿವಿಂಗ್‌ಸ್ಟೋನ್ 27 ರನ್ ತೆತ್ತು ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್...

ಈ ಮೊದಲುಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ನಾಯಕ ಮಯಂಕ್ ಅಗರವಾಲ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ಪ್ಲೇ-ಆಫ್ ಪ್ರವೇಶದ ಕನಸನ್ನು ಜೀವಂತವಾಗಿರಿಸಲು ಇತ್ತಂಡಗಳಿಗೂ ಗೆಲುವು ಅನಿವಾರ್ಯವೆನಿಸಿದೆ. ಡೆಲ್ಲಿ ಹಾಗೂ ಪಂಜಾಬ್, ಐಪಿಎಲ್‌ನಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿದೆ.

ಡೆಲ್ಲಿ 12 ಪಂದ್ಯಗಳಲ್ಲಿ ತಲಾ ಆರು ಗೆಲುವು ಹಾಗೂ ಸೋಲಿನೊಂದಿಗೆ ಒಟ್ಟು 12 ಅಂಕ ಗಳಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಅತ್ತ ಪಂಜಾಬ್ ಕೂಡಾ ಅಷ್ಟೇ ಪಂದ್ಯಗಳಲ್ಲಿ 12 ಅಂಕಗಳೊಂದಿಗೆ ಏಳನೇ ಸ್ಥಾನದಲ್ಲಿದೆ. ಮಯಂಕ್ ಅಗರವಾಲ್ ಪಡೆ ರನ್ ರೇಟ್ ಲೆಕ್ಕಾಚಾರದಲ್ಲಿ ಹಿಂದೆ ಬಿದ್ದಿದೆ.

ಹಾಗಾಗಿ ಈ ಪಂದ್ಯದಲ್ಲಿ ಸೋತರೆ ಪ್ಲೇ-ಆಫ್ ಕನಸು ಬಹುತೇಕ ಅಸ್ತಮಿಸಲಿದೆ.

ಹನ್ನೊಂದರ ಬಳಗ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.