ADVERTISEMENT

IPL 2022: ಮುಂಬೈ ತಂಡಕ್ಕೆ ಬೆಂಬಲ ಸೂಚಿಸಿದ ಕೊಹ್ಲಿ, ಡುಪ್ಲೆಸಿ

​ಪ್ರಜಾವಾಣಿ ವಾರ್ತೆ
Published 20 ಮೇ 2022, 12:32 IST
Last Updated 20 ಮೇ 2022, 12:32 IST
   

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2022ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಎಂಟು ವಿಕೆಟ್ ಅಂತರದ ಗೆಲುವು ದಾಖಲಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿದೆ.

ಆದರೂ ಆರ್‌ಸಿಬಿ ಪ್ಲೇ-ಆಫ್ ಪ್ರವೇಶವು ಇತರೆ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆಲುವು ದಾಖಲಿಸಬೇಕಿದೆ.

ಇದರಿಂದಾಗಿ ಕೊನೆಯ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಬೆಂಬಲಿಸುವುದಾಗಿ ವಿರಾಟ್ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ ನುಡಿದಿದ್ದಾರೆ.

ಪಂದ್ಯದ ಬಳಿಕ ಈ ಕುರಿತು ಕೊಹ್ಲಿ ಹಾಗೂ ಡುಪ್ಲೆಸಿ ಪ್ರತಿಕ್ರಿಯಿಸಿದ್ದಾರೆ.

'ಎರಡು ದಿನ ಆರಾಮವಾಗಿದ್ದುಕೊಂಡು ಮಂಬೈ ತಂಡವನ್ನು ಬೆಂಬಲಿಸಲಿದ್ದೇವೆ. ಮುಂಬೈಗೆ ಇನ್ನೂ ಎರಡು ಬೆಂಬಲಿಗರ ಸೇರ್ಪಡೆಯಾಗಲಿದೆ. ಎರಡಲ್ಲ, 25 ಬೆಂಬಲಿಗರನ್ನು ಹೊಂದಲಿದೆ' ಎಂದು ನಗುಮುಖದಿಂದಲೇ ಹೇಳಿದ್ದಾರೆ.

ಫಫ್ ಡುಪ್ಲೆಸಿ 'ಮುಂಬೈ...ಮುಂಬೈ' ಎಂದು ಜೈಕಾರಕೂಗಿದಾಗ, 'ನೀವು ನಮ್ಮನ್ನು ಕ್ರೀಡಾಂಗಣದಲ್ಲೂ ನೋಡಬಹುದು' ಎಂದು ವಿರಾಟ್ ಹೇಳಿದ್ದಾರೆ.

14 ಪಂದ್ಯಗಳಲ್ಲಿ ಎಂಟು ಗೆಲುವು ದಾಖಲಿಸಿರುವ ಆರ್‌ಸಿಬಿ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಅತ್ತ ಡೆಲ್ಲಿಗೆ ಇನ್ನೊಂದು ಪಂದ್ಯ ಬಾಕಿ ಉಳಿದಿದೆ.

ಡೆಲ್ಲಿ, 13 ಪಂದ್ಯಗಳಲ್ಲಿ ಏಳು ಪಂದ್ಯದಲ್ಲಿ ಗೆದ್ದು 14 ಅಂಕ ಹೊಂದಿದ್ದು, ಐದನೇ ಸ್ಥಾನದಲ್ಲಿದೆ. ಕೊನೆಯ ಪಂದ್ಯದಲ್ಲಿ ಮುಂಬೈ ವಿರುದ್ಧ ಡೆಲ್ಲಿ ಗೆದ್ದರೆ ಆರ್‌ಸಿಬಿಗಿಂತಲೂ ಉತ್ತಮ ರನ್‌ರೇಟ್ ಕಾಯ್ದುಕೊಂಡಿರುವ ಹಿನ್ನೆಲೆಯಲ್ಲಿ ಪ್ಲೇ-ಆಫ್‌ಗೆ ಪ್ರವೇಶಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.