ADVERTISEMENT

IPL 2022: ಆರ್‌ಸಿಬಿ ವಿರುದ್ಧ ವಿಶಿಷ್ಟ ಶೈಲಿಯ ಸಂಭ್ರಮಕ್ಕೆ ಕಾರಣ ಕೊಟ್ಟ ಸೂರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಏಪ್ರಿಲ್ 2022, 14:31 IST
Last Updated 11 ಏಪ್ರಿಲ್ 2022, 14:31 IST
ಸೂರ್ಯಕುಮಾರ್ ಯಾದವ್ (ಚಿತ್ರ ಕೃಪೆ: ಮುಂಬೈ ಇಂಡಿಯನ್ಸ್, ಟ್ವಿಟರ್)
ಸೂರ್ಯಕುಮಾರ್ ಯಾದವ್ (ಚಿತ್ರ ಕೃಪೆ: ಮುಂಬೈ ಇಂಡಿಯನ್ಸ್, ಟ್ವಿಟರ್)   

ಮುಂಬೈ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಗಳಿಸಿದ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ವಿಶಿಷ್ಟ ಶೈಲಿಯಲ್ಲಿ ಸಂಭ್ರಮಿಸಿದ್ದರು.

ಬ್ಯಾಟ್ ಹಿಡಿದು ಕೈಮುಗಿಯುವ ರೀತಿಯಲ್ಲಿ ಸೂರ್ಯಕುಮಾರ್ ಅವರ ಸಂಭ್ರಮವು ಹೆಚ್ಚಿನ ಗಮನ ಸೆಳೆದಿತ್ತು.

ಈ ಕುರಿತು ವಿವರಣೆ ನೀಡಿರುವ ಸೂರ್ಯ, 'ಕುಟುಂಬದ ಮುಂದೆ ಆಡುವುದಕ್ಕಿಂತ ವಿಶೇಷವಾದದ್ದೇನೂ ಇಲ್ಲ' ಎಂದು ಹೇಳಿದ್ದಾರೆ. ಸೂರ್ಯ ಹೇಳಿಕೆಯನ್ನು ಮುಂಬೈ ಇಂಡಿಯನ್ಸ್ ಟ್ವೀಟ್ ಮಾಡಿದೆ.

ಪುಣೆಯಲ್ಲಿ ನಡೆದ ಆರ್‌ಸಿಬಿ ಹಾಗೂ ಮುಂಬೈ ನಡುವಣ ಪಂದ್ಯವನ್ನು ಸೂರ್ಯಕುಮಾರ್ ಅವರ ತಂದೆ ಅಶೋಕ್ ಕುಮಾರ್ ಯಾದವ್ ಹಾಗೂ ತಾಯಿ ಸ್ವಪ್ನಾ ಯಾದವ್ ವೀಕ್ಷಿಸಿದ್ದರು.

ಹೆತ್ತವರ ಸನ್ಮುಖದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯ, 37 ಎಸೆತಗಳಲ್ಲಿ 68 ರನ್ ಗಳಿಸಿದ್ದರು. ಆದರೂ ಮುಂಬೈ ತಂಡಕ್ಕೆ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ.

ಅನುಜ್ ರಾವತ್ (66 ರನ್) ಹಾಗೂ ವಿರಾಟ್ ಕೊಹ್ಲಿ (48 ರನ್) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ ಏಳು ವಿಕೆಟ್ ಅಂತರದ ಸುಲಭ ಗೆಲುವು ದಾಖಲಿಸಿತ್ತು. ಅತ್ತ ಮುಂಬೈ ಸತತ ನಾಲ್ಕನೇ ಸೋಲಿಗೆ ಶರಣಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.