ADVERTISEMENT

ಆರ್‌ಸಿಬಿ ವಿರುದ್ಧದ ಸೋಲಿಗೆ ಕಾರಣ ಕೊಟ್ಟ ಸಿಎಸ್‌ಕೆ ನಾಯಕ ಧೋನಿ

​ಪ್ರಜಾವಾಣಿ ವಾರ್ತೆ
Published 5 ಮೇ 2022, 10:30 IST
Last Updated 5 ಮೇ 2022, 10:30 IST
ಮಹೇಂದ್ರ ಸಿಂಗ್ ಧೋನಿ
ಮಹೇಂದ್ರ ಸಿಂಗ್ ಧೋನಿ   

ಪುಣೆ: ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಎದುರಾದ ಸೋಲಿಗೆ ಕಳಪೆ ಬ್ಯಾಟಿಂಗ್ ಕಾರಣ ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.

ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ ಆರ್‌ಸಿಬಿ 13 ರನ್ ಅಂತರದ ಗೆಲುವು ದಾಖಲಿಸಿತ್ತು. ಈ ಮೂಲಕ ಸತತ ಮೂರು ಸೋಲಿನ ಬಳಿಕ ಗೆಲುವಿನ ಹಾದಿಗೆ ಮರಳಿತ್ತು.

174 ರನ್ ಗೆಲುವಿನ ಗುರಿ ಬೆನ್ನಟ್ಟಿದ್ದ ಚೆನ್ನೈ ಒಂದು ಹಂತದಲ್ಲಿ ಪವರ್ ಪ್ಲೇ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 51 ರನ್ ಗಳಿಸಿತ್ತು. ಬಳಿಕಪದೇ ಪದೇ ವಿಕೆಟ್ ಕಳೆದುಕೊಂಡು ಎಂಟು ವಿಕೆಟ್ ನಷ್ಟಕ್ಕೆ 160 ರನ್ ಗಳಿಸಲಷ್ಟೇ ಸಾಧ್ಯವಾಯಿತು.

'ಎದುರಾಳಿ ತಂಡವನ್ನು 170ರ ಅಸುಪಾಸಿನಲ್ಲಿ ನಿಯಂತ್ರಿಸುವಲ್ಲಿ ನಾವು ಯಶಸ್ವಿಯಾಗಿದ್ದೆವು. ಆದರೆ ಬ್ಯಾಟರ್‌ಗಳಿಂದಾಗಿ ಹಿನ್ನಡೆ ಅನುಭವಿಸಿದೆವು. ವಿಶೇಷವಾಗಿಯೂ ನಾವು ಚೇಸಿಂಗ್ ಮಾಡುವಾಗ ಏನು ಮಾಡಬೇಕು, ಬೌಲರ್‌ಗಳು ಏನು ರಣನೀತಿ ಹೊಂದಿರುತ್ತಾರೆ ಎಂಬುದರ ಬಗ್ಗೆ ತಿಳಿದಿರಬೇಕು' ಎಂದು ಹೇಳಿದರು.

ಕೊನೆಯ 30 ಎಸೆತಗಳಲ್ಲಿ ಚೆನ್ನೈಗೆ 56 ರನ್ ಬೇಕಾಗಿತ್ತು. 'ಕೆಲವೊಮ್ಮೆ ನೀವು ನಿಮ್ಮದೇ ಆಟ ಆಡುವ ಪ್ರವೃತ್ತಿಯ ಬದಲು ಪರಿಸ್ಥಿತಿ ಏನನ್ನು ಬಯಸುತ್ತದೆ ಎಂಬುದನ್ನು ಗ್ರಹಿಸಿ ಆಡಬೇಕು. ಉತ್ತಮವಾಗಿ ಆಡಿದ್ದರೆ ಕೊನೆಯ ಕೆಲವು ಓವರ್‌ಗಳಲ್ಲಿ ಹೆಚ್ಚಿನ ರನ್ ಗಳಿಸುವ ಒತ್ತಡ ಸೃಷ್ಟಿಯಾಗುತ್ತಿರಲಿಲ್ಲ' ಎಂದು ತಿಳಿಸಿದರು.

'ನಾವು ಉತ್ತಮ ಆರಂಭವನ್ನು ಪಡೆದೆವು. ಆದರೆ ಒಂದರ ನಂತರ ಒಂದರಂತೆವಿಕೆಟ್‌ಗಳನ್ನು ಕಳೆದುಕೊಂಡೆವು. ಈ ವಿಷಯಗಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಚೇಸಿಂಗ್ ವೇಳೆ ಲೆಕ್ಕಾಚಾರದೊಂದಿಗೆ ಬ್ಯಾಟಿಂಗ್ ಮಾಡಬೇಕಾಗುತ್ತದೆ' ಎಂದು ಹೇಳಿದರು.

'ಏನು ತಪ್ಪಾಗಿದೆ ಎಂಬುದನ್ನು ತಿಳಿದುಕೊಳ್ಳಬೇಕು. ನೀವು ಎಷ್ಟು ಅಂಕಗಳನ್ನು ಹೊಂದಿದ್ದೀರಿ ಎಂಬುದರಿಂದ ವಿಚಲಿತರಾಗುವುದು ಸುಲಭ. ಆದರೆ ಯಾವ ಸ್ಥಾನದಲ್ಲಿದ್ದೇವೆ ಎಂಬುದಕ್ಕಿಂತ ಪ್ರಕ್ರಿಯೆ ಮೇಲೆ ಗಮನ ಹರಿಸಬೇಕು. ಇದು ಪಾಯಿಂಟ್ ಟೇಬಲ್ ಮೇಲೂ ಪ್ರತಿಫಲಿಸಲಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.