ADVERTISEMENT

IPL 2023: ಕೊನೆಯ ಎಸೆತ ನೋಬಾಲ್‌, ರಾಜಸ್ಥಾನಕ್ಕೆ ಆಘಾತ -ಸನ್‌ರೈಸರ್ಸ್‌ಗೆ ರೋಚಕ ಜಯ

ಪಿಟಿಐ
Published 7 ಮೇ 2023, 20:56 IST
Last Updated 7 ಮೇ 2023, 20:56 IST
ರಾಹುಲ್ ತ್ರಿಪಾಠಿ ಹಾಗೂ ಅಭಿಷೇಕ್ ಶರ್ಮಾ– ಪಿಟಿಐ ಚಿತ್ರ
ರಾಹುಲ್ ತ್ರಿಪಾಠಿ ಹಾಗೂ ಅಭಿಷೇಕ್ ಶರ್ಮಾ– ಪಿಟಿಐ ಚಿತ್ರ   

ಜೈಪುರ: ನಾಟಕೀಯ ತಿರುವು ಕಂಡ ಪಂದ್ಯದ ಕೊನೆಯ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ರೋಚಕ ಗೆಲುವು ಒಲಿಯಿತು.

ಜೈಪುರದ ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್‌ ಪಂದ್ಯದ ಕೊನೆಯ ಎಸೆತ ನೋಬಾಲ್ ಆಗಿತ್ತು. ಮರು ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆತ್ತಿದ ಅಬ್ದುಲ್ ಸಮದ್‌ ಹೈದರಾಬಾದ್‌ ತಂಡವು 4 ವಿಕೆಟ್‌ಗಳಿಂದ ರಾಜಸ್ಥಾನ ರಾಯಲ್ಸ್‌ಗೆ ಸೋಲುಣಿಸಲು ಕಾರಣರಾದರು.

ಮೊದಲು ಬ್ಯಾಟ್‌ ಮಾಡಿದ ರಾಯಲ್ಸ್‌, ನಿಗದಿತ ಓವರ್‌ಗಳಲ್ಲಿ 2 ವಿಕೆಟ್‌ಗೆ 214 ರನ್‌ ಗಳಿಸಿತು. ಹೈದರಾ ಬಾದ್ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು.

ADVERTISEMENT

ರೋಚಕ ತಿರುವು: ಪಂದ್ಯದ ಕೊನೆಯ ಎರಡು ಓವರ್‌ಗಳಲ್ಲಿ ಹೈದರಾಬಾದ್ ತಂಡದ ಗೆಲುವಿಗೆ 41 ರನ್‌ ಬೇಕಿತ್ತು. ಕುಲದೀಪ್‌ ಯಾದವ್ ಎಸೆದ 19ನೇ ಓವರ್‌ನಲ್ಲಿ ಬ್ಯಾಟರ್‌ ಗ್ಲೆನ್ ಫಿಲಿಪ್ಸ್ (7 ಎಸೆತಗಳಲ್ಲಿ 25) ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ 22 ರನ್‌ ಗಳಿಸಿ 5ನೇ ಎಸೆತ ದಲ್ಲಿ ಔಟಾದರು. ಕೊನೆಯ ಎಸೆತದಲ್ಲಿ ಮಾರ್ಕೊ ಜೆನ್ಸೆನ್‌ 2 ರನ್ ಗಳಿಸಿದರು.

ಕೊನೆಯ ಓವರ್ ಎಸೆಯಲು ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್‌ ಅವರು ಸಂದೀಪ್ ಶರ್ಮಾ ಕೈಗೆ ಚೆಂಡು ನೀಡಿದರು. ಹೈದರಾಬಾದ್‌ ಗೆಲುವಿಗೆ 17 ರನ್‌ ಬೇಕಿತ್ತು. ಮೊದಲ ಎಸೆತ ಆಡಿದ ಅಬ್ದುಲ್ ಸಮದ್‌ ಥರ್ಡ್‌ಮ್ಯಾನ್‌ನತ್ತ ಬಾರಿಸಿದ ಚೆಂಡನ್ನು ಹಿಡಿತಕ್ಕೆ ಪಡೆಯುವಲ್ಲಿ ಒಬೆದ್‌ ಮೆಕಾಯ್ ವಿಫಲರಾದರು. ಸಮದ್‌ ಎರಡು ರನ್ ಕಲೆಹಾಕಿದರು. ಎರಡನೇ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದರು. ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಕ್ರಮವಾಗಿ ಎರಡು ಮತ್ತು ಒಂದು ರನ್ ಬಂದವು. ಐದನೇ ಎಸೆತದಲ್ಲಿ ಜೆನ್ಸೆನ್ ಒಂದು ರನ್ ಗಳಿಸಿದರು. ಆರನೇ ಎಸೆತದಲ್ಲಿ ಸಂದೀಪ್‌, ಅಬ್ದುಲ್‌ ಅವರನ್ನು ಜೋಸ್‌ ಬಟ್ಲರ್‌ ಅವರಿಗೆ ಕ್ಯಾಚ್‌ ನೀಡುವಂತೆ ಮಾಡಿದ್ದರು. ಆದರೆ ಈ ಎಸೆತ ನೋಬಾಲ್ ಆಗಿತ್ತು. ಆಗ ತಂಡದ ಗೆಲುವಿಗೆ ನಾಲ್ಕು ರನ್‌ ಬೇಕಿತ್ತು. ಮರು ಎಸೆತದಲ್ಲಿ ಚೆಂಡನ್ನು ಸಿಕ್ಸರ್‌ಗೆತ್ತಿದ ಸಮದ್‌ ಹೈದರಾಬಾದ್‌ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣರಾದರು.

ಇದಕ್ಕೂ ಮೊದಲು ಹೈದರಾಬಾದ್ ತಂಡಕ್ಕೆ ಅನ್ಮೋಲ್‌ಪ್ರೀತ್ ಸಿಂಗ್‌ (33), ಅಭಿಷೇಕ್ ಶರ್ಮಾ (55), ರಾಹುಲ್ ತ್ರಿಪಾಠಿ (47) ಬಿರುಸಿನ ಆಟದ ಮೂಲಕ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ರಾಜಸ್ಥಾನದ ಯಜುವೇಂದ್ರ ಚಾಹಲ್ 4 ವಿಕೆಟ್‌ ಗಳಿಸಿದರು.

ಬಟ್ಲರ್‌– ಸಂಜು ಸವಾರಿ: ಟಾಸ್‌ ಗೆದ್ದ ಸಂಜು ಬ್ಯಾಟಿಂಗ್‌ ಆಯ್ದು ಕೊಂಡರು. ಹೈದರಾಬಾದ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದ ಬಟ್ಲರ್‌ (95 ರನ್‌, 59 ಎ., 4X10, 6X4) ಮತ್ತು ಸಂಜು (ಔಟಾಗದೆ 66, 38 ಎ., 4X4, 5X6) ಅವರು ರಾಯಲ್ಸ್‌ ಮೊತ್ತವನ್ನು ದ್ವಿಶತಕದ ಗಡಿ ದಾಟಿಸಿದ್ದರು. ಯಶಸ್ವಿ ಜೈಸ್ವಾಲ್‌ (35, 18 ಎ., 4X5, 6X2) ಕೂಡ ಬೃಹತ್‌ ಮೊತ್ತಕ್ಕೆ ಕಾಣಿಕೆ ನೀಡಿದ್ದರು. ಈ ಪಂದ್ಯದ ಮೂಲಕ ಜೈಸ್ವಾಲ್‌ ಐಪಿಎಲ್‌ನಲ್ಲಿ 1000 ರನ್‌ ಪೂರೈಸಿದರು.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 214 (ಯಶಸ್ವಿ ಜೈಸ್ವಾಲ್‌ 35, ಜೋಸ್‌ ಬಟ್ಲರ್‌ 95, ಸಂಜು ಸ್ಯಾಮ್ಸನ್‌ ಔಟಾ ಗದೆ 66; ಭುವನೇಶ್ವರ್‌ ಕುಮಾರ್‌ 44ಕ್ಕೆ 1, ಮಾರ್ಕೊ ಜೆನ್ಸೆನ್‌ 44ಕ್ಕೆ 1). ಸನ್‌ರೈಸರ್ಸ್ ಹೈದರಾಬಾದ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 217 (ಅನ್ಮೋಲ್‌ಪ್ರೀತ್ ಸಿಂಗ್‌ 33, ಅಭಿ ಷೇಕ್ ಶರ್ಮಾ 55, ರಾಹುಲ್ ತ್ರಿಪಾಠಿ 47, ಹೆನ್ರಿಚ್ ಕ್ಲಾಸೆನ್‌ 26, ಗ್ಲೆನ್ ಫಿಲಿಪ್ಸ್ 25, ಅಬ್ದುಲ್ ಸಮದ್‌ ಔಟಾಗದೆ 17; ಕುಲದೀಪ್ ಯಾದವ್‌ 50ಕ್ಕೆ1, ಆರ್‌.ಅಶ್ವಿನ್‌ 35ಕ್ಕೆ1, ಯಜು ವೇಂದ್ರ ಚಾಹಲ್‌ 29ಕ್ಕೆ 4). ಫಲಿತಾಂಶ: ಸನ್‌ರೈಸರ್ಸ್‌ ಹೈದರಾಬಾದ್‌ಗೆ 4 ವಿಕೆಟ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.