ADVERTISEMENT

IPL 2024 | ಸೂಪರ್‌ ಕಿಂಗ್ಸ್‌ಗೆ ‘ರಾಯಲ್ ಚಾಲೆಂಜ್‌’

ಪಿಟಿಐ
Published 22 ಮಾರ್ಚ್ 2024, 0:19 IST
Last Updated 22 ಮಾರ್ಚ್ 2024, 0:19 IST
   

ಚೆನ್ನೈ : ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಐಪಿಎಲ್‌ನಲ್ಲಿ ಆಡಿರುವ 250 ಪಂದ್ಯಗಳ ಪೈಕಿ 235 ಪಂದ್ಯಗಳಿಗೆ ಮಹೇಂದ್ರ ಸಿಂಗ್‌ ಧೋನಿ ನಾಯಕರಾಗಿದ್ದರು. ಈ ಬಾರಿ ಈ ದಿಗ್ಗಜ ಆಟಗಾರ, ಋತುರಾಜ್ ಗಾಯಕವಾಡ ನಾಯಕತ್ವದಲ್ಲಿ ಆಡಲಿದ್ದಾರೆ. ಈ ತಂಡ ಶುಕ್ರವಾರ ಆರಂಭವಾಗುವ 17ನೇ ಆವೃತ್ತಿಯ ಐಪಿಎಲ್‌ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದಿಂದ ತೀವ್ರ ಪೈಪೋಟಿ ಎದುರಿಸುವ ನಿರೀಕ್ಷೆಯಿದೆ.

ಪಂದ್ಯದ ಮುನ್ನಾದಿನ ಈ ಮಹತ್ವದ ‘ಪರಿವರ್ತನೆ’ ನಡೆದಿದೆ. ಹೀಗಾಗಿ ಧೋನಿ ಈ ಐಪಿಎಲ್‌ನ ಕೊನೆಯಲ್ಲಿ ನಿವೃತ್ತಿ ಘೋಷಿಸುವ ನಿರೀಕ್ಷೆ ಬಲವಾಗಿದೆ.

ಈ ಭಾವನಾತ್ಮಕ ಅಂಶ ಬಿಟ್ಟರೆ ಉಳಿದಂತೆ ಎರಡು ತಂಡಗಳ ನಡುವೆ ಜಿದ್ದಾಜಿದ್ದಿ ಈ ಪಂದ್ಯಕ್ಕೂ ಮುಂದುವರಿಯಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಸಿಎಸ್‌ಕೆ ಈ ಆವೃತ್ತಿಯಲ್ಲಿ ಟ್ರೋಫಿ ಗೆದ್ದರೆ ಅದು ದಾಖಲೆಯಾಗಲಿದೆ. ಮುಂಬೈ ಇಂಡಿಯನ್ಸ್ ಸಹ ಐದು ಸಲ ಕಿರೀಟ ಧರಿಸಿದೆ.

ADVERTISEMENT

ಇತ್ತೀಚೆಗೆ ಮಹಿಳಾ ತಂಡದ ಚೊಚ್ಚಲ ಯಶಸ್ಸಿನಿಂದ ಉತ್ತೇಜಿತಗೊಂಡಿರುವ ಆರ್‌ಸಿಬಿ, ಜರ್ಸಿ ಜೊತೆಗೆ ಹೆಸರಿನಲ್ಲಿ (ಬೆಂಗಳೂರ್ ಬದಲು ಬೆಂಗಳೂರು) ಅಲ್ಪ ಬದಲಾವಣೆಯೊಡನೆ ಕಣಕ್ಕಿಳಿದಿದೆ. ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ.

ವಯಸ್ಸಿನ ಪ್ರಭಾವದಿಂದ ಧೋನಿ ಮೊದಲಿನಂತೆ ಸ್ಫೋಟಕ ಆಟವಾಡುತ್ತಿಲ್ಲ. ಆದರೆ ಅವರ ‘ಕ್ರಿಕೆಟ್‌ ಮಿದುಳು’ ತಂಡದ ನೆರವಿಗೆ ಇದ್ದೇ ಇದೆ. ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿರುವ ನ್ಯೂಜಿಲೆಂಡ್‌ ತಾರೆ ರಚಿನ್ ರವೀಂದ್ರ ಮೇಲೆ ತಂಡ ಅಪಾರ ಭರವಸೆ ಇಟ್ಟಿದೆ. ಇದೇ ದೇಶದ ಡೆವಾನ್‌ ಕಾನ್ವೆ ಹೆಬ್ಬೆರಳ ಗಾಯದಿಂದ ಆರಂಭದ ಕೆಲವು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮತ್ತೊಬ್ಬ ಕಿವೀಸ್‌ ಆಲ್‌ರೌಂಡರ್ ಡೇರಿಲ್ ಮಿಚೆಲ್‌ ಕೂಡ ಭರವಸೆಯಿಡಬಲ್ಲ ಆಟಗಾರ.

ನಾಯಕ ಗಾಯಕವಾಡ್‌, ಸೈಯದ್‌ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಹಾರಾಷ್ಟ್ರ ಪರ ಅತ್ಯಧಿಕ ರನ್‌ ಗಳಿಸಿ ಈ ದೀರ್ಘ ಲೀಗ್‌ಗೆ ಸಜ್ಜಾಗಿದ್ದಾರೆ. ಅವರು ಮೊದಲ ಬಾರಿ ತಮಗೊಲಿದ ನಾಯಕತ್ವವನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕೌತುಕ ಇದೆ.

ಪಿಚ್‌ ಸಂಪ್ರದಾಯ ದಂತೆ ಸ್ಪಿನ್ನರ್‌ಗಳಿಗೆ ನೆರವಾಗುವ ನಿರೀಕ್ಷೆಯಿದೆ. ಈ ವಿಭಾಗದಲ್ಲಿ ರವೀಂದ್ರ ಜಡೇಜ, ಮಿಚೆಲ್‌ ಸ್ಯಾಂಟ್ನರ್, ಮೊಯಿನ್ ಅಲಿ, ಮಹೀಷ ತೀಕ್ಷಣ ಅವರ ನೆರವು ತಂಡಕ್ಕಿದೆ. ತೀಕ್ಷಣ ಪಾದದ ನೋವಿನಿಂದ ಮೊದಲ ಕೆಲವು ಪಂದ್ಯಗಳಿಗೆ ಲಭ್ಯರಿಲ್ಲ.

ಸುಲಭವಲ್ಲ: ಆದರೆ ಈ ಕ್ರೀಡಾಂಗಣ ದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸುವಲ್ಲಿ ಆರ್‌ಸಿಬಿಗೆ 2009 ರಿಂದ ಒಮ್ಮೆಯೂ ಸಾಧ್ಯವಾಗಿಲ್ಲ.

ನಾಯಕ ಫಫ್ ಡುಪ್ಲೆಸಿ, ಎರಡು ತಿಂಗಳ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಇಳಿದಿರುವ ಸ್ಟಾರ್‌ ಬ್ಯಾಟರ್ ವಿರಾಟ್‌ ಕೊಹ್ಲಿ, ಮ್ಯಾಕ್ಸ್‌ವೆಲ್‌ ತಂಡದ ಪ್ರಮುಖ ಬ್ಯಾಟರ್‌ಗಳು. ಈ ಬಾರಿ ತಂಡಕ್ಕೆ ಸೇರ್ಪಡೆಯಾಗಿರುವ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಕ್ಯಾಮರಾನ್ ಗ್ರೀನ್ ಕೂಡ ಬಿರುಸಿನ ಆಟಗಾರ.

ವೇಗದ ಬೌಲಿಂಗ್‌ ವಿಭಾಗದ ಮೊಹಮ್ಮದ್ ಸಿರಾಜ್, ಲಾಕಿ ಫರ್ಗ್ಯೂಸನ್, ಅಲ್ಜಾರಿ ಜೋಸೆಫ್, ಆಕಾಶ್ ದೀಪ್, ಟೋಪ್ಲಿ ಅವರಿಂದ ಪ್ರಬಲವಾಗಿದೆ. ಆದರೆ ಹಸರಂಗ ಅವರನ್ನು ಕಳೆದುಕೊಂಡ ನಂತರ ಸ್ಪಿನ್ ವಿಭಾಗ ದುರ್ಬಲವಾಗಿದೆ. ಮ್ಯಾಕ್ಸ್‌ವೆಲ್‌, ಕರ್ಣ ಶರ್ಮಾ, ಮಯಂಕ್ ದಾಗರ್, ಹಿಮಾಂಶು ಶರ್ಮ ಮೊದಲಾದವರ ಮೇಲೆ ಭರವಸೆ ಇಡುವುದು ಅನಿವಾರ್ಯವಾಗಿದೆ.

ತಂಡಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಫಫ್‌ ಡು ಪ್ಲೆಸಿ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರರ್, ಕರಣ್‌ ಶರ್ಮಾ, ಮನೋಜ್ ಭಾಂಡಗೆ, ಮಯಂಕ್ ಡಾಗರ್, ವೈಶಾಖ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರನ್, ಲಾಕಿ ಫರ್ಗ್ಯುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾನ್.

ಚೆನ್ನೈ ಸೂಪರ್ ಕಿಂಗ್ಸ್

ಋತುರಾಜ್ ಗಾಯಕವಾಡ (ನಾಯಕ), ಮಹೇಂದ್ರ ಸಿಂಗ್‌ ಧೋನಿ, ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ರವೀಂದ್ರ ಜಡೇಜ, ಅಜಯ್ ಮಂಡಲ್, ಮುಕೇಶ್ ಚೌಧರಿ, ಅಜಿಂಕ್ಯ ರಹಾನೆ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ಸಿಮರ್ಜೀತ್ ಸಿಂಗ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಣ, ರಚಿನ್ ರವೀಂದ್ರ, ಶಾರ್ದೂಲ್ ಠಾಕೂರ್, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ಮುಸ್ತಫಿಜುರ್ ರೆಹಮಾನ್, ಅವನೀಶ್ ರಾವ್ ಅರವಲ್ಲಿ.

ಪಂದ್ಯ ಆರಂಭ ರಾತ್ರಿ: 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ಮತ್ತು ಜಿಯೊ ಸಿನಿಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.