ADVERTISEMENT

IPL 2024 MI vs CSK | ಮುಂಬೈ ಇಂಡಿಯನ್ಸ್‌ಗೆ ‘ಸೂಪರ್‌‘ ಸವಾಲು

ಧೋನಿ ಮೇಲೆ ಗಮನ; ಹಾರ್ದಿಕ್ ಪಾಂಡ್ಯ–ಋತುರಾಜ್ ಗಾಯಕವಾಡ ಮುಖಾಮುಖಿ

ಪಿಟಿಐ
Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಶಿವಂ ದುಬೆ
ಶಿವಂ ದುಬೆ   

ಮುಂಬೈ: ಹಾಲಿ ಚಾಂಪಿಯನ್ಸ್‌ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ಭಾನುವಾರ ನಡೆಯುವ ಐಪಿಎಲ್‌ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದ್ದು, ಎಲ್ಲರ ಕಣ್ಣುಗಳು ಭಾರತದ ಕ್ರಿಕೆಟ್‌ ದಿಗ್ಗಜ ಮಹೇಂದ್ರ ಸಿಂಗ್‌ ಧೋನಿ ಅವರ ಮೇಲಿದೆ. ವಿಶ್ವಕಪ್‌ ಎತ್ತಿಹಿಡಿದಿದ್ದ ವಾಂಖೆಡೆ ಕ್ರೀಡಾಂಗಣದಲ್ಲಿ ಧೋನಿ ಬಹುಶಃ ಕೊನೆಯ ಬಾರಿ ಆಡಲು ಇಳಿಯಲಿದ್ದಾರೆ.

ಇದು 42 ವರ್ಷದ ಆಟಗಾರನ ಕೊನೆಯ ಐಪಿಎಲ್‌ ಆಗುವುದು ಬಹುತೇಕ ಖಚಿತ. ಧೋನಿ ವಿಕೆಟ್‌ ಹಿಂದುಗಡೆ ಚುರುಕುತನ ಉಳಿಸಿಕೊಂಡಿದ್ದಾರೆ, ಮಾತ್ರವಲ್ಲ ಆಟವನ್ನು ‘ಓದುವ’ ಕಲೆ ಅವರಿಗೆ ಕರಗತ. ಹೀಗಾಗಿ ಚೆನ್ನೈ ತಂಡ ಅವರ ಮೇಲೆ ನಿರೀಕ್ಷೆಯಿಟ್ಟುಕೊಂಡಿದೆ. ಈ ಆವೃತ್ತಿಯಲ್ಲಿ ಸಿಎಸ್‌ಕೆ ಐದು ಪಂದ್ಯಗಳಲ್ಲಿ ಮೂರು ಗೆದ್ದು, ಎರಡು ಸೋತಿದೆ. ಇವೆರಡೂ ತವರಿನಿಂದಾಚೆ ಆಡಿದ ಪಂದ್ಯಗಳು.

ಚೆನ್ನೈ ತಂಡದ ಯುವನಾಯಕ ಋತುರಾಜ್ ಗಾಯಕವಾಡ್‌ ಮತ್ತು  ಹಾರ್ದಿಕ್ ನಡುವಣ ಮೊದಲ ಪೈಪೋಟಿಗೂ ಈ ಪಂದ್ಯ ವೇದಿಕೆಯಾಗಲಿದೆ.

ADVERTISEMENT

ಆರಂಭದ ಮೂರು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿದ್ದ ಮುಂಬೈ ಈಗ ಗೆಲುವಿನ ಹಾದಿಗೆ ಮರಳಿದೆ. ಬ್ಯಾಟರ್‌ಗಳು ಲಯಕ್ಕೆ ಮರಳುತ್ತಿದ್ದಾರೆ. ವಿರಾಮದ ನಂತರ ಕ್ರಿಕೆಟ್‌ಗೆ ಮರಳಿರುವ ಸೂರ್ಯಕುಮಾರ್ ಯಾದವ್ ಅಬ್ಬರಿಸಲು ಆರಂಭಿಸಿದ್ದಾರೆ. ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು  ಸೂರ್ಯ 19 ಎಸೆತಗಳಲ್ಲಿ 52 ರನ್ ಗಳಿಸಿದ್ದರು. ಇಶಾನ್ ಕಿಶನ್‌ ಈ ಬಾರಿ ಒಟ್ಟು 161 ರನ್‌ ಗಳಿಸಿದ್ದಾರೆ. ಈ ಬೆಳವಣಿಗೆ ಚೆನ್ನೈ ಬೌಲರ್‌ಗಳಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಋತುರಾಜ್ ಗಾಯಕವಾಡ್ ಅವರು ಅಬ್ಬರದ ಆಟವಾಡದಿದ್ದರೂ, ಚೆನ್ನೈ ತಂಡದ ಬ್ಯಾಟಿಂಗ್‌ ಶಕ್ತಿಯಾಗಿದ್ದಾರೆ. ಬಿರುಸಿನ ಹೊಡೆತಗಳ ಆಟಗಾರ ಶಿವಂ ದುಬೆ (176 ರನ್‌) ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ರಚಿನ್ ರವೀಂದ್ರ, ಡೇರಿಲ್‌ ಮಿಚೆಲ್‌, ಅಜಿಂಕ್ಯ ರಹಾನೆ ಮತ್ತು ಶಾರ್ದೂಲ್  ಮಿಂಚಿದರೆ ದೊಡ್ಡ ಮೊತ್ತ ಕಲೆಹಾಕುವುದು ಸುಲಭವಾಗಲಿದೆ.

ಮುಂಬೈ ತಂಡದ ಪರ ಪ್ರಮುಖ ಬೌಲರ್‌ ಜಸ್‌ಪ್ರೀತ್ ಬೂಮ್ರಾ ಮಾತ್ರ ಪರಿಣಾಮಕಾರಿಯಾಗಿದ್ದಾರೆ. ಬ್ಯಾಟಿಂಗ್‌ ಪಿಚ್‌ನಲ್ಲಿ ಉಳಿದವರು ಪರದಾಡುತ್ತಿದ್ದು ಧಾರಾಳಿ ಎನಿಸಿದ್ದಾರೆ. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲೇ ಬೂಮ್ರಾ ಬಿಗುದಾಳಿ ನಡೆಸಿದರೂ ಉಳಿದವರು ಸಪ್ಪೆಯಾಗಿದ್ದ ಕಾರಣ ತಂಡ 196 ರನ್‌ಗಳ ದೊಡ್ಡ ಮೊತ್ತ ಗಳಿಸಿತ್ತು.

ಚೆನ್ನೈ ಪರ ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್, ರವೀಂದ್ರ ಜಡೇಜ ಹಾಗೂ ರಚಿನ್ ರವೀಂದ್ರ ಅವರು ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್, ಜಿಯೊ ಸಿನಿಮಾ ಆ್ಯಪ್

ಸೂರ್ಯಕುಮಾರ್ ಯಾದವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.