ಚಿತ್ರಕೃಪೆ: x/cricbuzz
ನವದೆಹಲಿ: ಆಲ್‌ರೌಂಡರ್ ಸುನಿಲ್ ನಾರಾಯಣ್ ಅವರ ಅಮೋಘ ಬೌಲಿಂಗ್ ಬಲದಿಂದ ಹಾಲಿ ಚಾಂಪಿಯನ್ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಇಲ್ಲಿ ನಡೆದ ಪಂದ್ಯದಲ್ಲಿ ಜಯಭೇರಿ ಬಾರಿಸಿತು.
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ತಂಡವು 14 ರನ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ದಿತು. 205 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ಅತಿಥೇಯ ತಂಡಕ್ಕೆ ಸುನಿಲ್ (29ಕ್ಕೆ3) ಅಡ್ಡಿಯಾದರು. ಅವರ ಶಿಸ್ತಿನ ದಾಳಿಯಿಂದಾಗಿ ಡೆಲ್ಲಿ ತಂಡಕ್ಕೆ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಫಾಫ್ ಡುಪ್ಲೆಸಿ (62; 45ಎ, 4X7, 6X2), ಅಕ್ಷರ್ ಪಟೇಲ್ (43; 23ಎ, 4X4, 6X3) ಮತ್ತು ವಿಪ್ರಜ್ ನಿಗಮ್ (38; 19ಎ, 4X5, 6X2) ಅವರು ಉತ್ತಮವಾಗಿ ಬ್ಯಾಟಿಂಗ್ ಮಾಡಿದರೂ ಡೆಲ್ಲಿ ತಂಡಕ್ಕೆ ಜಯ ಒಲಿಯಲಿಲ್ಲ.
ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡವು ಅಗ್ರಕ್ರಮಾಂಕದ ಬ್ಯಾಟರ್‌ಗಳ ಸಂಘಟಿತ ಆಟದ ಬಲದಿಂದ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 204 ರನ್ ಗಳಿಸಿತು. ತಂಡದ ಯುವ ಬ್ಯಾಟರ್ ಅಂಗಕ್ರಿಷ್ ರಘುವಂಶಿ (44; 32ಎ, 4X3, 6X2) ಅವರು ಕೋಲ್ಕತ್ತ ತಂಡದಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಆಟಗಾರನಾದರು. ಆರಂಭಿಕ ಬ್ಯಾಟರ್ ರೆಹಮಾನುಲ್ಲಾ ಗುರ್ಬಾಜ್ (26; 12ಎ, 4X5, 6X1) ಹಾಗೂ ಸುನಿಲ್ ನಾರಾಯಣ್ (27; 16ಎ, 4X2, 6X2) ಅವರು ಅಬ್ಬರದ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 48 ರನ್ ಸೇರಿಸಲು ಇವರಿಬ್ಬರೂ ಎದುರಿಸಿದ್ದು
18 ಎಸೆತಗಳನ್ನು ಮಾತ್ರ.
ವೇಗಿ ಮಿಚೆಲ್ ಸ್ಟಾರ್ಕ್ ಅವರು ಗುರ್ಬಾಜ್ ವಿಕೆಟ್ ಗಳಿಸುವ ಮೂಲಕ ಈ ಜೊತೆಯಾಟವನ್ನು ಮುರಿದರು. ಕ್ರೀಸ್‌ಗೆ ಬಂದ ನಾಯಕ ಅಜಿಂಕ್ಯ ರಹಾನೆ ಕೂಡ ಬೀಸಾಟವಾಡಿದರು. ಅವರು 14 ಎಸೆತಗಳಲ್ಲಿ 26 ರನ್ ಹೊಡೆದರು. ಇದರಿಂದಾಗಿ ತಂಡದ ಮೊತ್ತ ವೇಗವಾಗಿ ಏರಿತು. ಸ್ಪಿನ್ನರ್ ವಿಪ್ರಜ್ ನಿಗಮ್ ಅವರು ಬೀಸಿದ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದ ಸುನಿಲ್ ನಿರ್ಗಮಿಸಿದರು. ನಂತರದ ಓವರ್‌ನಲ್ಲಿ ಡೆಲ್ಲಿ ನಾಯಕ, ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್ ಹಾಕಿದ ಎಲ್‌ಬಿ ಬಲೆಗೆ ರಹಾನೆ ಬಿದ್ದರು.
ಈ ಹಂತದಲ್ಲಿ ಕ್ರೀಸ್‌ನಲ್ಲಿದ್ದ ರಘುವಂಶಿ ಇನಿಂಗ್ಸ್ ಬಲಪಡಿಸುವ ಹೊಣೆಯನ್ನು ತಮ್ಮ ಮೇಲೆಳೆದುಕೊಂಡರು. ಆದರೆ ಅವರಿಗೆ ಜೊತೆ ನೀಡುವ ಪ್ರಯತ್ನದಲ್ಲಿದ್ದ ವೆಂಕಟೇಶ್ ಅಯ್ಯರ್ (7 ರನ್) ಮತ್ತೆ ಎಡವಿದರು. ಅಕ್ಷರ್ ಎಸೆತದಲ್ಲಿ ದೊಡ್ಡ ಹೊಡೆತ ಆಡಿ ಫೀಲ್ಡರ್ ವಿಪ್ರಜ್‌ಗೆ ಕ್ಯಾಚ್ ಆದರು.
ರಘುವಂಶಿ ಜೊತೆಗೂಡಿದ ರಿಂಕು ಸಿಂಗ್ (36; 25ಎ, 4X3, 6X1) ತಂಡದ ಮೊತ್ತ ಹೆಚ್ಚಲು ಕಾರಣರಾದರು. ಐದನೇ ವಿಕೆಟ್ ಜೊತೆಯಾಟದಲ್ಲಿ 61 ರನ್ ಸೇರಿಸಿದರು.
ಸಂಕ್ಷಿಪ್ತ ಸ್ಕೋರು:
ಕೋಲ್ಕತ್ತ ನೈಟ್ ರೈಡರ್ಸ್: 20 ಓವರ್‌ಗಳಲ್ಲಿ 9ಕ್ಕೆ204 (ರೆಹಮಾನುಲ್ಲಾ ಗುರ್ಬಾಜ್ 26, ಸುನಿಲ್ ನಾರಾಯಣ್ 27, ಅಜಿಂಕ್ಯ ರಹಾನೆ 26, ಅಂಗಕ್ರಿಷ್ ರಘುವಂಶಿ 44, ರಿಂಕು ಸಿಂಗ್ 36, ಮಿಚೆಲ್ ಸ್ಟಾರ್ಕ್ 43ಕ್ಕೆ3, ವಿಪ್ರಜ್ ನಿಗಮ್ 41ಕ್ಕೆ2, ಅಕ್ಷರ್ ಪಟೇಲ್ 27ಕ್ಕೆ2) ಡೆಲ್ಲಿ ಕ್ಯಾಪಿಟಲ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 190 (ಫಾಫ್ ಡುಪ್ಲೆಸಿ 62, ಅಕ್ಷರ್ ಪಟೇಲ್ 43, ಸುನಿಲ್ ನಾರಾಯಣ್ 29ಕ್ಕೆ3) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 14 ರನ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.