ADVERTISEMENT

IPL 2025 Playoffs | ಅಗ್ರ ಎರಡು ಸ್ಥಾನ ಗುರಿ; ಆರ್‌ಸಿಬಿ ಸೇರಿದ ಹ್ಯಾಜಲ್‌ವುಡ್

ಪಿಟಿಐ
Published 25 ಮೇ 2025, 5:36 IST
Last Updated 25 ಮೇ 2025, 5:36 IST
<div class="paragraphs"><p>ಜೋಶ್ ಹ್ಯಾಜಲ್‌ವುಡ್ ಸಂಭ್ರಮ</p></div>

ಜೋಶ್ ಹ್ಯಾಜಲ್‌ವುಡ್ ಸಂಭ್ರಮ

   

(ಪ್ರಜಾವಾಣಿ ಚಿತ್ರ)

ಲಖನೌ: 2025ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಈಗಾಗಲೇ ಪ್ಲೇ-ಆಫ್‌ಗೆ ಲಗ್ಗೆ ಇಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಶುಭ ಸುದ್ದಿಯೊಂದು ಬಂದಿದೆ.

ADVERTISEMENT

ಗಾಯಮುಕ್ತಗೊಂಡಿರುವ ಆಸ್ಟ್ರೇಲಿಯಾದ ಪ್ರಮುಖ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ತಂಡವನ್ನು ಸೇರಿಕೊಂಡಿದ್ದಾರೆ.

ಈ ಸಂಬಂಧ ಆರ್‌ಸಿಬಿ ತನ್ನ ಅಧಿಕೃತ ಖಾತೆಯಲ್ಲಿ 'ಬಂದ್ಬಿಟ್ಟ' ಎಂಬ ಅಡಿಬರಹದೊಂದಿಗೆ ಜೋಶ್ ಅವರಿಗೆ ಸ್ವಾಗತ ಕೋರಿದ್ದಾರೆ.

ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಆರ್‌ಸಿಬಿ ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸುವಲ್ಲಿ ಹ್ಯಾಜಲ್‌ವುಡ್ ಪ್ರಮುಖ ಪಾತ್ರ ವಹಿಸಿದ್ದರು. ಈವರೆಗೆ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಗಳಿಸಿದ್ದಾರೆ.

ಹ್ಯಾಜಲ್‌ವುಡ್ ಏಪ್ರಿಲ್ 27ರಂದು ಕೊನೆಯದಾಗಿ ಆಡಿದ್ದರು. ಬಳಿಕ ಭುಜ ನೋವಿನಿಂದಾಗಿ ವಿಶ್ರಾಂತಿಯಲ್ಲಿದ್ದರು. ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಘರ್ಷ ಉಂಟಾದ ಹಿನ್ನೆಲೆಯಲ್ಲಿ ತವರಿಗೆ ಮರಳಿದ್ದರು.

34 ವರ್ಷದ ಹ್ಯಾಜಲ್‌ವುಡ್ ಈಗ ಸಂಪೂರ್ಣ ದೈಹಿಕ ಸಾಮರ್ಥ್ಯ ಮರಳಿ ಪಡೆದಿದ್ದು, ಬ್ರಿಸ್ಬೇನ್‌ನಲ್ಲಿ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ನಲ್ಲಿ ಭಾಗವಹಿಸುವ ಆಸ್ಟ್ರೇಲಿಯಾದ ತಂಡದೊಂದಿಗೆ ಅಭ್ಯಾಸವನ್ನು ಪುನರಾರಂಭಿಸಿದ್ದರು.

ಹ್ಯಾಜಲ್‌ವುಡ್ ಚೇತರಿಕೆಯ ಕುರಿತು ಆರ್‌ಸಿಬಿ ಮ್ಯಾನೇಜ್‌ಮೆಂಟ್ ನಿಗಾ ವಹಿಸಿತ್ತಲ್ಲದೆ ನಿರಂತರ ಸಂಪರ್ಕದಲ್ಲಿತ್ತು.

ಆರ್‌ಸಿಬಿಯ ಕೊನೆಯ ಲೀಗ್ ಪಂದ್ಯದಲ್ಲಿ ಹ್ಯಾಜಲ್‌ವುಡ್ ಆಡುವ ಸಾಧ್ಯತೆಯಿದೆ. ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿಗೆ ಹ್ಯಾಜಲ್‌ವುಡ್ ಆಗಮನದಿಂದ ಹೆಚ್ಚಿನ ಬಲ ಸಿಕ್ಕಂತಾಗಿದೆ.

'ಆರ್‌ಸಿಬಿಗೆ ಮರಳಲು ಖುಷಿಯಾಗುತ್ತಿದೆ. ತವರಿನಲ್ಲಿ ಎರಡು ವಾರ ಕಳೆದಿದ್ದೇನೆ. ಬ್ರಿಸ್ಬೇನ್‌ಗೆ ಹೋಗಿ ಬೌಲಿಂಗ್ ಅಭ್ಯಾಸ ನಡೆಸಿದ್ದೇನೆ. ಎಲ್ಲವೂ ಉತ್ತಮವಾಗಿದೆ. ನಾಳೆಯಿಂದಲೇ ಅಭ್ಯಾಸ ನಡೆಸುವ ಇರಾದೆಯಲ್ಲಿದ್ದೇನೆ' ಎಂದು ಹ್ಯಾಜಲ್‌ವುಡ್ ಪ್ರತಿಕ್ರಿಯಿಸಿದ್ದಾರೆ.

ಮಂಗಳವಾರ ಲಖನೌದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‌ಸಿಬಿ ತಂಡವು ಲಖನೌ ಸೂಪರ್ ಜೈಂಟ್ಸ್ ಸವಾಲನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.