ಬೆಂಗಳೂರು: ಮಳೆ, ಚಳಿಯನ್ನೂ ಲೆಕ್ಕಿಸದೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವು ಕಣ್ತುಂಬಿಕೊಳ್ಳುವ ಆಸೆ ಈಡೇರಲೇ ಇಲ್ಲ. ತಂಡಕ್ಕೆ ತವರಿನಂಗಳದಲ್ಲಿ ಸತತ ಮೂರನೇ ಸೋಲಿನ ಹತಾಶೆ ಕಾಡಿತು.
ಆರ್‌ಸಿಬಿ ಅಭಿಮಾನಿಗಳ ಪಾಲಿಗೆ ಟಿಮ್ ಡೇವಿಡ್ ಅವರ ಆಕರ್ಷಕ ಅರ್ಧಶತಕ (50; 26ಎ, 4X5, 6X3) ಮಾತ್ರ ನೆನಪಿನಲ್ಲಿ ಉಳಿಯಿತು. ಅಷ್ಟು ಬಿಟ್ಟರೆ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡದ್ದೇ ಪಾರಮ್ಯ. ಶ್ರೇಯಸ್ ಅಯ್ಯರ್ ನಾಯಕತ್ವದ ಕಿಂಗ್ಸ್ 5 ವಿಕೆಟ್‌ಗಳಿಂದ ಜಯಿಸಿತು.
ಮಳೆಯಿಂದಾಗಿ ಸುಮಾರು 2 ಗಂಟೆ 15 ನಿಮಿಷ ವಿಳಂಬವಾಗಿ ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇನಿಂಗ್ಸ್‌ಗೆ 14 ಓವರ್‌ಗಳ ಆಟವನ್ನು ನಿಗದಿಪಡಿಸಲಾಯಿತು. ಪಂಜಾಬ್ ಬೌಲರ್‌ಗಳ ದಾಳಿ ಮತ್ತು ಫೀಲ್ಡರ್‌ಗಳ ಚುರುಕಾದ ಆಟದ ಮುಂದೆ ಆರ್‌ಸಿಬಿಯು ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 95 ರನ್ ಪೇರಿಸಿತು.
ಗುರಿ ಬೆನ್ನಟ್ಟಿದ ಪಂಜಾಬ್ ತಂಡವು 12.1 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 98 ರನ್ ಗಳಿಸಿತು. ಈಚೆಗೆ ಮುಲ್ಲನಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ತಂಡವು ‘ಹಾಲಿ ಚಾಂಪಿಯನ್’ ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ 111 ರನ್‌ಗಳ ಅಲ್ಪಗುರಿ ನೀಡಿ ಜಯಿಸಿತ್ತು. ಕೆಕೆಆರ್ ತಂಡವನ್ನು ಕೇವಲ 95 ರನ್‌ಗಳಿಗೆ ಕಟ್ಟಿಹಾಕಿತ್ತು.
ಇಲ್ಲಿಯೂ ಆರ್‌ಸಿಬಿ ತಂಡವನ್ನು ಅಷ್ಟೇ ರನ್‌ಗಳಿಗೆ ನಿಯಂತ್ರಿಸಿತು. ಅದಕ್ಕೆ ಪ್ರಮುಖ ಕಾರಣವಾಗಿದ್ದು ಎಡಗೈ ವೇಗಿ ಅರ್ಷದೀಪ್ ಸಿಂಗ್. ತಮ್ಮ ಮೊದಲ ಸ್ಪೆಲ್‌ನಲ್ಲಿಯೇ ಅರ್ಷದೀಪ್ ಅವರು ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ವಿಕೆಟ್‌ಗಳನ್ನು ಕಬಳಿಸಿದರು. ನಾಯಕ ರಜತ್ ಪಾಟೀದಾರ್ (23; 18ಎ) ಬಿಟ್ಟರೆ ಉಳಿದ ಬ್ಯಾಟರ್‌ಗಳು ಹೆಚ್ಚು ಪ್ರತಿರೋಧ ತೋರಲಿಲ್ಲ. 9 ಬ್ಯಾಟರ್‌ಗಳು ಎರಡಂಕಿ ಮುಟ್ಟಲೇ ಇಲ್ಲ.
ಡೇವಿಡ್ ಅಬ್ಬರ
ಆರ್‌ಸಿಬಿ 6.1 ಓವರ್‌ಗಳಲ್ಲಿ 33 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಟಿಮ್ ಡೇವಿಡ್ ಇನಿಂಗ್ಸ್‌ಗೆ ಜೀವ ತುಂಬಿದರು. ಅವರ ಆಟದಿಂದಾಗಿ ಕೊನೆಯ ಐದು ಓವರ್‌ಗಳಲ್ಲಿ 52 ರನ್‌ಗಳು ಹರಿದುಬಂದವು. ಅದರಲ್ಲೂ ಸ್ಪಿನ್ನರ್ ಹರಪ್ರೀತ್ ಬ್ರಾರ್ ಹಾಕಿದ ಕೊನೆಯ ಓವರ್‌ನಲ್ಲಿ ‘ಸಿಕ್ಸರ್ ಹ್ಯಾಟ್ರಿಕ್’ ಸಾಧಿಸಿದರು. ಇದೊಂದೇ ಓವರ್‌ನಲ್ಲಿ ಒಟ್ಟು 21 ರನ್‌ಗಳು ಸೇರಿದವು.
ಆಸ್ಟ್ರೇಲಿಯಾದ ಆರೂವರೆ ಅಡಿ ಎತ್ತರದ ಅಜಾನುಬಾಹು ಡೇವಿಡ್ ಅವರಿಗೆ ಐಪಿಎಲ್‌ನಲ್ಲಿ ಇದು ಮೊದಲ ಅರ್ಧಶತಕ. ಆರ್‌ಸಿಬಿ ಪರವಾಗಿ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 50ಕ್ಕಿಂತ ಹೆಚ್ಚು ರನ್ ಗಳಿಸಿದ ಎರಡನೇ ಬ್ಯಾಟರ್ ಕೂಡ ಆದರು. 2022ರಲ್ಲಿ ದಿನೇಶ್ ಕಾರ್ತಿಕ್ ಇದೇ ಕ್ರಮಾಂಕದಲ್ಲಿ ಅಜೇಯ 66 ರನ್ ಗಳಿಸಿದ್ದರು.
ಡೇವಿಡ್ ಅವರು ಮುರಿಯದ 10ನೇ ವಿಕೆಟ್ ಜೊತೆಯಾಟದಲ್ಲಿ ಜೋಷ್ ಹ್ಯಾಜಲ್‌ವುಡ್ ಅವರೊಂದಿಗೆ 32 ರನ್ ಸೇರಿಸಿದರು.
ಆಸೆ ಚಿಗುರಿಸಿದ ಜೋಶ್
ಗುರಿ ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಆತಿಥೇಯ ಬಳಗದ ವೇಗಿ ಹ್ಯಾಜಲ್‌ವುಡ್ (14ಕ್ಕೆ3) ಮತ್ತು ಭುವನೇಶ್ವರ್ ಕುಮಾರ್ (26ಕ್ಕೆ2) ಸವಾಲೊಡ್ಡಿದರು. ಇನಿಂಗ್ಸ್ ಆರಂಭದಲ್ಲಿ ಭುವಿ ಪೆಟ್ಟುಕೊಟ್ಟರು. ಅದರಿಂದಾಗಿ ಪಂಜಾಬ್ 32ಕ್ಕೆ 2 ವಿಕೆಟ್ ಕಳೆದುಕೊಂಡಿತು. ಎಂಟನೇ ಓವರ್ ಹಾಕಿದ ಜೋಶ್ ಅವರು ಶ್ರೇಯಸ್ ಅಯ್ಯರ್ ಮತ್ತು ಇಂಗ್ಲಿಸ್ ಅವರ ವಿಕೆಟ್ ಗಳಿಸಿದರು. ಇದರಿಂದಾಗಿ ಆರ್‌ಸಿಬಿಗೆ ಜಯದ ಆಸೆ ಚಿಗುರಿತ್ತು.
ಆದರೆ, ನೆಹಲ್ ವಧೇರಾ (33; 19ಎ) ಅವರು ಅಬ್ಬರದ ಆಟದ ಮೂಲಕ ಪಂಜಾಬ್ ತಂಡವನ್ನು ಗೆಲುವಿನ ದಡ ಸೇರಿಸಿದರು.
- ಮಳೆಗೆ ಜಗ್ಗದ ಅಭಿಮಾನಿಗಳು
ಶುಕ್ರವಾರ ಸಂಜೆಯಿಂದಲೇ ಮಳೆಯ ಆಟ ಶುರುವಾಗಿತ್ತು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಭಿಮಾನಿಗಳ ಉತ್ಸಾಹಕ್ಕೆ ತಣ್ಣೀರು ಸುರಿಯಲು ಮಳೆಗೂ ಸಾಧ್ಯವಾಗಲಿಲ್ಲ. ಕೆಂಪು ಜೆರ್ಸಿ ತೊಟ್ಟು ಕೈಯಲ್ಲಿ ಕೆಂಪು ಧ್ವಜ ಹಿಡಿದವರ ದಂಡು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಗ್ಗೆ ಹಾಕುವುದನ್ನು ತಡೆಯಲೂ ವರುಣದೇವನಿಗೆ ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ. ಸಂಜೆ 6.30ರ ಸುಮಾರಿಗೆ ಕ್ರೀಡಾಂಗಣದೊಳಗೆ ಬಂದವರು ರಾತ್ರಿಯಾದರೂ ಮಿಸುಕಾಡಲೇ ಇಲ್ಲ. ‘ಆರ್‌ಸಿಬಿ..ಆರ್‌ಸಿಬಿ..’ ಎಂದು ಕೂಗುತ್ತ ಇಲ್ಲಿಯೇ ಉಳಿದರು. ಈ ನಡುವೆ ಮಳೆ ಸುರಿಯುವುದು ಒಂದಷ್ಟು ಹೊತ್ತು ನಿಲ್ಲುತ್ತಿತ್ತು. ಮತ್ತೆ ಹನಿಯುತ್ತಿತ್ತು. ಟಾಸ್ ಕೂಡ ಸಾಧ್ಯವಾಗಲಿಲ್ಲ. ಆದರೆ ಕ್ರೀಡಾಂಗಣದಲ್ಲಿದ್ದ 25 ಸಾವಿರಕ್ಕೂ ಹೆಚ್ಚು ಜನರ ಹುರುಪು ಮಾತ್ರ ತಣ್ಣಗಾಗಲಿಲ್ಲ. ಅವರೆಲ್ಲರೂ ಕಾಯುತ್ತಿದ್ದ ಕ್ಷಣ ಅಂತೂ ಇಂತೂ ರಾತ್ರಿ 8.55ಕ್ಕೆ ಬಂದೇ ಬಿಟ್ಟಿತು. ಅಂಪೈರ್ ಮತ್ತು ರೆಫರಿಗಳು ಮೈದಾನಕ್ಕಿಳಿದರು. ಮಳೆ ನಿಂತಿದ್ದ ಕಾರಣ ಪಿಚ್ ಮೇಲಿನ ಹೊದಿಕೆ ತೆಗೆಯಲು ಕ್ರೀಡಾಂಗಣ ಸಿಬ್ಬಂದಿಗೆ ಸೂಚಿಸಿದರು. ಜನರ ಹರ್ಷೋದ್ಗಾರಗಳು ಮುಗಿಲುಮುಟ್ಟಿದವು. 9.10ರ ಸುಮಾರಿಗೆ ಆರ್‌ಸಿಬಿ ಡಗ್‌ಔಟ್‌ನಿಂದ ಹೊರಬಂದ ವಿರಾಟ್ ಕೊಹ್ಲಿ ವಾರ್ಮ್ ಅಪ್ ಆರಂಭಿಸಿದರು. 9.30ಕ್ಕೆ ಟಾಸ್ ಹಾಕಲಾಯಿತು. 9.45ಕ್ಕೆ ಪಂದ್ಯ ಆರಂಭವಾಯತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.