ಜೈಪುರ: ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಈ ಹಿಂದಿನ ಪಂದ್ಯದಲ್ಲಿ ತೋರಿದ ಬ್ಯಾಟಿಂಗ್ ಪರಾಕ್ರಮವು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ನವೋಲ್ಲಾಸ ಮೂಡಿಸಿದೆ. ಗುರುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಈ ತಂಡಕ್ಕೆ, ಪ್ರಬಲವಾಗಿ ಪುಟಿದೆದ್ದಿರುವ ಮುಂಬೈ ಇಂಡಿಯನ್ಸ್ ತಂಡವನ್ನು ತಡೆದುನಿಲ್ಲಿಸುವ ಸವಾಲು ಇದೆ.
ರಾಯಲ್ಸ್ ತಂಡದ ಲೀಗ್ ಆಸೆ ಕಮರಿಹೋಯಿತು ಎನ್ನುವಷ್ಟರಲ್ಲಿ 14 ವರ್ಷ ವಯಸ್ಸಿನ ವೈಭವ್ ಸೋಮವಾರ ಗುಜರಾತ್ ಟೈಟನ್ಸ್‌ನ ಪ್ರಬಲ ದಾಳಿಯನ್ನು ಪುಡಿಗಟ್ಟಿ ಅವಿಸ್ಮರಣೀಯ ಇನಿಂಗ್ಸ್ ಆಡಿದ್ದರು. ಆದರೂ ರಾಯಲ್ಸ್‌ಗೆ ಪ್ಲೇಆಫ್ ಸಾಧ್ಯತೆ ಕ್ಷೀಣವಾಗಿಯೇ ಇದೆ.
ಸಂಜು ಸ್ಯಾಮ್ಸನ್ ಪಕ್ಕೆಲುಬಿನ ಗಾಯದಿಂದ ಹಿಂದೆಸರಿದ ಪರಿಣಾಮ ಅವಕಾಶ ಪಡೆದ ಎಡಗೈ ಬ್ಯಾಟರ್ ವೈಭವ್ ಮೂರೇ ಇನಿಂಗ್ಸ್ ಬಳಿಕ ಮನೆಮಾತಾಗಿದ್ದಾರೆ. ಸ್ಯಾಮ್ಸನ್ ತಂಡಕ್ಕೆ ಮರಳುವ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ. ಅವರು ಏಪ್ರಿಲ್ 16ರಂದು ಕೊನೆಯ ಪಂದ್ಯ ಆಡಿದ್ದರು.
ಜೈಪುರದಲ್ಲಿ ಜೈಸ್ವಾಲ್ ಜೊತೆ ಇನಿಂಗ್ಸ್ ಆರಂಭಿಸಿದ್ದ ಸೂರ್ಯವಂಶಿ ಮೊದಲ ವಿಕೆಟ್‌ಗೆ 166 ರನ್ ಸೇರಿಸಿ ‘ಕನಸಿನ ಆರಂಭ’ ಒದಗಿಸಿದ್ದರು. ಹೀಗಾಗಿ 210 ರನ್‌ಗಳ ಗೆಲುವಿನ ಗುರಿಯನ್ನು ರಾಯಲ್ಸ್ ಲೀಲಾಜಾಲವಾಗಿ ತಲುಪಿತು.
ಅಂತರರಾಷ್ಟ್ರೀಯ ಬೌಲರ್‌ಗಳಿಗೆ ಬೆವರಿಳಿಸಿದ ಸೂರ್ಯವಂಶಿ ಅವರು ಅಗ್ರ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಅವರನ್ನು ಹೇಗೆ ನಿಭಾಯಿಸುವರು ಎನ್ನುವ ಕುತೂಹಲ ಮೂಡಿದೆ.
ರಾಯಲ್ಸ್ ಕೆಳಕ್ರಮಾಂಕದಲ್ಲಿ ಶಿಮ್ರೋನ್ ಹೆಟ್ಮೆಯರ್ ಅವರ ಮೇಲೆ ಒತ್ತಡವಿದೆ. ವೆಸ್ಟ್ ಇಂಡೀಸ್‌ನ ಈ ಆಟಗಾರ ಈ ಋತುವಿನಲ್ಲಿ ಅಪಾಯಕಾರಿ ಆಟಗಾರನಂತೆ ಕಂಡಿಲ್ಲ.
ಆದರೆ ರಾಯಲ್ಸ್ ಈ ಬಾರಿ ತೀವ್ರ ಪೈಪೋಟಿಯ ಪಂದ್ಯಗಳಲ್ಲಿ ಮೇಲುಗೈಯನ್ನು ಗೆಲುವಾಗಿ ಪರಿವರ್ತಿಸಲು ವಿಫಲವಾದ ಕಾರಣ ಅದು ಅಂಕಪಟ್ಟಿಯಲ್ಲಿ ಕೆಳಭಾಗಕ್ಕೆ ಸರಿದಿದೆ. ಜೋಫ್ರಾ ಆರ್ಚರ್ ವಿಕೆಟ್‌ಗಳನ್ನು ಪಡೆದರೂ 10ಕ್ಕಿಂತ ಹೆಚ್ಚು ರನ್ ಕೊಟ್ಟು ಧಾರಾಳಿ ಎನಿಸಿದ್ದಾರೆ. ಸಂದೀಪ್ ಶರ್ಮಾ ಕೂಡ ಮಿತವ್ಯಯಿಯಾಗಿಲ್ಲ.
ಆರಂಭದಲ್ಲಿ ಕೆಲವು ಪಂದ್ಯಗಳನ್ನು ಸೋತರೂ ಮುಂಬೈ ಕೊನೆಯ ಐದು ಪಂದ್ಯಗಳನ್ನು ಗೆದ್ದು ಪ್ಲೇ ಆಫ್ ಸಾಧ್ಯತೆ ಉಜ್ವಲಗೊಳಿಸಿದೆ. ಹಾರ್ದಿಕ್ ಪಾಂಡ್ಯ ಪಡೆ ಈಗ ರಣೋತ್ಸಾಹದಲ್ಲಿದೆ.
ಮುಂಬೈ ಪರ ಪದಾರ್ಪಣೆ ಮಾಡಿದ್ದ ಕಾರ್ಬಿನ್ ಬಾಷ್ 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿರುವುದು ಆ ತಂಡಕ್ಕೆ ಸಕಾರಾತ್ಮಕ ಅಂಶ. ಸೂರ್ಯಕುಮಾರ್ ಯಾದವ್, ರೋಹಿತ್ ಶರ್ಮಾ ಅವರೂ ಸಕಾಲದಲ್ಲಿ ಲಯಕಂಡುಕೊಂಡಿದ್ದಾರೆ. ಎದುರಾಳಿಗಳಿಗೆ ಅಪಾಯದ ಸಂಕೇತ ರವಾನಿಸಿದ್ದಾರೆ.
ಪಂದ್ಯ ಆರಂಭ: ರಾತ್ರಿ 7.30.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.