ಬ್ಯಾಟಿಂಗ್ ಅಭ್ಯಾಸ ಮಾಡಿದ ದೇವದತ್ತ ಪಡಿಕ್ಕಲ್
–ಆರ್‌ಸಿಬಿ ಟ್ವೀಟ್ಸ್
ಬೆಂಗಳೂರು: ಉದ್ಯಾನನಗರಿಯಲ್ಲಿ ಹೋಳಿ ಹಬ್ಬದ ಜೊತೆಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ರಂಗೇರಲು ಆರಂಭವಾಗಿದೆ. ಟೂರ್ನಿ ಆರಂಭವಾಗಲು ಇನ್ನೂ ಎಂಟು ದಿನ ಬಾಕಿ ಇದೆ. ಆದರೂ ಬೆಂಗಳೂರಿನಲ್ಲಿ ಅಭಿಮಾನಿಗಳ ಚಿತ್ತ ತಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದತ್ತ ನೆಟ್ಟಿದೆ.
ಈ ಬಾರಿ ಹೊಸ ನಾಯಕ ರಜತ್ ಪಾಟೀದಾರ್ ಮುಂದಾಳತ್ವದಲ್ಲಿ ಕಣಕ್ಕಿಳಿಯಲು ಆರ್‌ಸಿಬಿ ಸಿದ್ಧವಾಗಿದೆ. 2008ರಿಂದ ಇಲ್ಲಿಯವರೆಗೂ ತಂಡವು ಪ್ರಶಸ್ತಿ ಜಯಿಸಲು ಸಾಧ್ಯವಾಗಿಲ್ಲ. ಈ ಬಾರಿ ಕೆಲವು ಹೊಸ ಆಟಗಾರರೊಂದಿಗೆ ಆಡಲು ಸಿದ್ಧತೆ ಆರಂಭಿಸಿದೆ. ಅದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದೆ.
‘ಸ್ವಿಂಗ್ ಸ್ಟಾರ್’ ಭುವನೇಶ್ವರ್ ಕುಮಾರ್, ಸ್ಪಿನ್ ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರು ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಮತ್ತು , ಸ್ವಪ್ನಿಲ್ ಸಿಂಗ್, ವೇಗಿ ಯಶ್ ದಯಾಳ್ ಮತ್ತಿತರರು ಅಭ್ಯಾಸ ನಡೆಸಿದರು.
ಹೋದ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದ ವಿಕೆಟ್‌ಕೀಪರ್–ಬ್ಯಾಟರ್ ಆಗಿದ್ದ ದಿನೇಶ್ ಕಾರ್ತಿಕ್ ಈಗ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಬೀಸಾಟವಾಡಿ ಅಭಿಮಾನಿಗಳ ಮನ ಗೆದ್ದಿದ್ದ್ದ ದಿನೇಶ್ ಈಗ ಹೊಸ ಪಾತ್ರ ನಿರ್ವಹಿಸುವರು. ಆಟಗಾರರ ಅಭ್ಯಾಸ ಸಂದರ್ಭದಲ್ಲಿ ಮುಖ್ಯ ಕೋಚ್ ಆ್ಯಂಡಿ ಫ್ಲವರ್ ಅವರೊಂದಿಗೆ ಸೇರಿ ಕಾರ್ಯನಿರ್ವಹಿಸುತ್ತಿದ್ದಾರೆ.
ಆಟಗಾರರು ಗುರುವಾರ ನೆಟ್ಸ್‌ನಲ್ಲಿ ನಾಲ್ಕು ಗಂಟೆಗಳಿಗೂ ಹೆಚ್ಚು ಕಾಲ ಅಭ್ಯಾಸ ನಡೆಸಿದರು.
ಭಾರತ ತಂಡವು ಚಾಂಪಿಯನ್ಸ್ ಟ್ರೋಫಿ ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿರಾಟ್ ಕೊಹ್ಲಿಯ ಆಗಮನಕ್ಕಾಗಿ ತಂಡವು ಕಾದಿದೆ. ವಿದೇಶಿ ಆಟಗಾರರಾದ ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಅವರಿನ್ನೂ ತಂಡ ಸೇರಿಕೊಳ್ಳಬೇಕಿದೆ. ಸೋಮವಾರ ಇಲ್ಲಿನಡೆಯಲಿರುವ ತಂಡದ ಅನ್‌ಬಾಕ್ಸ್ ಸಮಯಕ್ಕೆ ಪೂರ್ಣ ತಂಡವು ಹಾಜರಾಗುವ ನಿರೀಕ್ಷೆ ಇದೆ.
ಇಂಗ್ಲೆಂಡ್ ಬ್ಯಾಟರ್ ಹೆನ್ರಿ ಬ್ರೂಕ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಎರಡು ಆವೃತ್ತಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ. ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ. ಆದರೆ ಅವರುಪ್ರಸಕ್ತ ವರ್ಷದ ಟೂರ್ನಿಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದರು. ಹೋದ ವರ್ಷವೂ ಅವರು ಅಲಭ್ಯರಾಗಿದ್ದರು. ‘ಐಪಿಎಲ್‌ನಿಂದ ಹಿಂದೆ ಸರಿಯುವ ನಿರ್ಧಾರವನ್ನು ತೆಗೆದುಕೊಳ್ಳಲು ನನಗೆ ಬಹಳ ಕಠಿಣವೆನಿಸಿತು. ‘ವಿದೇಶದ ಆಟಗಾರರು ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಳ್ಳುತ್ತಾರೆ. ತಂಡಕ್ಕೆ ಆಯ್ಕೆಯಾಗುತ್ತಾರೆ. ಆದರೆ ಟೂರ್ನಿ ಆರಂಭವಾಗುವ ಮುಂಚೆ ತಾವು ಅಲಭ್ಯ ಎಂದು ಘೋಷಿಸಿಕೊಳ್ಳುತ್ತಾರೆ. ಇಂತಹ ನಡವಳಿಕೆ ನಿಯಂತ್ರಿಸಲು ಐಪಿಎಲ್ ನಲ್ಲಿ ನಿಯಮ ಇದೆ’ ಎಂದು ಬಿಸಿಸಿಐ ದಾಖಲೆಗಳಲ್ಲಿ ತಿಳಿಸಲಾಗಿದೆ. ಈ ನಿಯಮದ ಪ್ರಕಾರ ಬ್ರೂಕ್ ಅವರನ್ನು 2025 ಮತ್ತು 2026ರ ಆವೃತ್ತಿಗಳಿಗೆ ನಿಷೇಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.