ರಾಬಿನ್ ಉತ್ತಪ್ಪ
ಬೆಂಗಳೂರು: ಇಪ್ಪತ್ತು ಓವರ್‌ಗಳಲ್ಲಿ ಮುನ್ನೂರಕ್ಕೂ ಹೆಚ್ಚು ರನ್‌ಗಳ ಮೊತ್ತ..ಒಂದು ಸಾವಿರಕ್ಕೂ ಹೆಚ್ಚು ಸಿಕ್ಸರ್‌ಗಳು..ಡಬಲ್ ಹ್ಯಾಟ್ರಿಕ್..275 ರನ್‌ಗಳ ಮೊತ್ತದ ಯಶಸ್ವಿ ಚೇಸಿಂಗ್..
ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಈ ಎಲ್ಲ ಅಪರೂಪದ ದಾಖಲೆಗಳು ಆಗಬಹುದೇ?
ಹೀಗೊಂದು ಊಹೆ ಮಾಡಿದವರು ಕ್ರಿಕೆಟ್ ವೀಕ್ಷಕ ವಿವರಣೆಗಾರ ರಾಬಿನ್ ಉತ್ತಪ್ಪ. ಬುಧವಾರ ಜಿಯೋಸ್ಟಾರ್ ಆಯೋಜಿಸಿದ್ದ ಆನ್‌ಲೈನ್ ಮಾಧ್ಯಮಗೋಷ್ಠಿಯಲ್ಲಿ ಅವರು ಪ್ರಶ್ನೆಯೊಂದಕ್ಕೆ ಈ ರೀತಿ ಉತ್ತರಿಸಿದರು.
‘ಟಿ20 ಕ್ರಿಕೆಟ್‌ನಲ್ಲಿ ಏನು ಬೇಕಾದರೂ ಆಗಬಹುದು. ಯಾರಿಗೆ ಗೊತ್ತು. ಪ್ರತಿವರ್ಷವೂ ಹೊಸ ಹೊಸ ದಾಖಲೆಗಳಾಗುತ್ತವೆ. ಇಂತಹ ಆಸಕ್ತಿಕರ ಅಂಶಗಳಿಂದಾಗಿಯೇ ಐಪಿಎಲ್ ಇವತ್ತು ಎಲ್ಲ ಟಿ20 ಕ್ರಿಕೆಟ್ ಲೀಗ್ ಟೂರ್ನಿಗಳ ಅಪ್ಪನಾಗಿ (ಡ್ಯಾಡಿ) ಬೆಳೆದಿದೆ’ ಎಂದು ರಾಬಿನ್ ಹೇಳಿದರು.
ಕೊಡಗಿನ ರಾಬಿನ್ ಅವರು 2007ರ ಚೊಚ್ಚಲ ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿ ಆಡಿದ್ದರು. 2008ರಲ್ಲಿ ಆರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಆಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದಂತೆ ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸಿದ್ದರು.
ಆರ್‌ಸಿಬಿ ತಂಡದ ಕುರಿತು ಮಾತನಾಡಿದ ಅವರು, ‘ಈ ಬಾರಿ ಉತ್ತಮ ಆಟಗಾರರು ಸ್ಥಾನ ಪಡೆದಿದ್ದಾರೆ. ಸಮತೋಲನವೂ ಇದೆ. ಬಲಿಷ್ಠ ಬ್ಯಾಟಿಂಗ್ ಪಡೆ ಇದೆ. ಟಿ20 ಮಾದರಿಯಲ್ಲಿ ಡೆತ್ ಓವರ್‌ಗಳು ಮುಖ್ಯ. ಈ ಹಿಂದೆ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿ ಈ ಹಂತದಲ್ಲಿ ಸಮಸ್ಯೆ ಎದುರಿಸಿತ್ತು. ಆದರೆ ಈ ಬಾರಿ ಅನುಭವಿ ವೇಗಿಗಳನ್ನು ಸೇರ್ಪಡೆ ಮಾಡಿಕೊಂಡಿದೆ. ಸ್ಪಿನ್ ವಿಭಾಗವೂ ಚೆನ್ನಾಗಿದೆ. ಕೃಣಾಲ್ ಪಾಂಡ್ಯ ಇರುವುದು ಹೆಚ್ಚಿನ ಬಲ ಬಂದಂತಾಗಿದೆ’ ಎಂದರು.
‘ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರಸಿಂಗ್ ಧೋನಿ ಅವರು 7 ಅಥವಾ 8ನೇ ಕ್ರಮಾಂಕದಲ್ಲಿ ಆಡಬಹುದು. ಹೋದ ವರ್ಷದಂತೆಯೇ ಅವರು ಇನಿಂಗ್ಸ್‌ನಲ್ಲಿ 12 ರಿಂದ 20 ಎಸೆತಗಳು ಬಾಕಿಯಿದ್ದಾಗ ಕ್ರೀಸ್‌ಗೆ ಬಂದು ಸಂಚಲನ ಮೂಡಿಸುವ ಸಾಧ್ಯತೆಗಳು ಹೆಚ್ಚಿವೆ. 43 ವರ್ಷ ವಯಸ್ಸಿನಲ್ಲಿಯೂ ಧೋನಿ ಕ್ರಿಕೆಟ್ ಆಟವನ್ನು ಅಪಾರವಾಗಿ ಪ್ರೀತಿಸುತ್ತಾರೆ. ಅದೇ ಅವರಿಗೆ ಶಕ್ತಿ. ಆದ್ದರಿಂದ ಅವರು ಈಗಲೂ ಆಡುವ ಸಾಮರ್ಥ್ಯ ಹೊಂದಿದ್ದಾರೆ’ ಎಂದರು.
ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಉತ್ತಮ ಲಯದಲ್ಲಿದ್ದಾರೆ. ಅವರು ಬೌಲರ್‌ಗಳಿಗೆ ಕಠಿಣ ಸವಾಲು ಒಡ್ಡುವ ಸಮರ್ಥರು’ ಎಂದು ಹೇಳಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ
ಕೋಲ್ಕತ್ತ : ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಿಂಚಿದ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರೊಂದಿಗೆ ಈ ಬಾರಿಯೂ ಬೌಲಿಂಗ್ ಜೊತೆಯಾಟ ನಿರ್ವ ಹಿಸುವುದಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಆಲ್‌ರೌಂಡರ್ ಸುನಿಲ್ ನಾರಾಯಣ್ ಹೇಳಿದ್ದಾರೆ.
‘ಅವರೊಂದಿಗೆ ಬೌಲಿಂಗ್ ಮಾಡುವುದು ಯಾವಾಗಲೂ ಫಲಪ್ರದವಾಗಿದೆ. ಒಂದು ಬದಿಯಿಂದ ಅವರು ಬ್ಯಾಟರ್‌ಗಳ ಮೇಲೆ ಒತ್ತಡವನ್ನು ನಿರಂತರವಾಗಿ ಹಾಕುತ್ತಾರೆ. ಅದರ ಲಾಭ ಇನ್ನೊಂದು ಬದಿಯಿಂದ ಬೌಲಿಂಗ್ ಮಾಡುವವರಿಗೆ ದಕ್ಕುವ ಸಾಧ್ಯತೆ ಹೆಚ್ಚು. ಭಾರತದ ಪಿಚ್‌ಗಳಲ್ಲಿ ಸ್ಪಿನ್ನರ್‌ಗಳು ಎರಡೂ ಬದಿಗಳಿಂದ ಯಶಸ್ವಿ ಯಾಗುವುದು ಹೆಚ್ಚು’ ಎಂದು ‘ಪೆರಿಮ್ಯಾಚ್’ ಕಾರ್ಯಕ್ರಮದಲ್ಲಿ ಮಾಧ್ಯಮದವರಿಗೆ ಹೇಳಿದರು.
ಈಚೆಗೆ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಚಕ್ರವರ್ತಿ ಅವರು 3 ಪಂದ್ಯಗಳಿಂದ 9 ವಿಕೆಟ್ ಗಳಿಸಿದ್ದರು. ವರುಣ್ ಅವರನ್ನು ಕೆಕೆಆರ್ ತಂಡವು ಈ ವರ್ಷ ರಿಟೇನ್ ಮಾಡಿಕೊಂಡಿತ್ತು. ಹೋದ ವರ್ಷ ಕೋಲ್ಕತ್ತ ತಂಡವು ಪ್ರಶಸ್ತಿ ಜಯಿಸುವಲ್ಲಿ ವರುಣ್ ಬೌಲಿಂಗ್ ಮತ್ತು ನಾರಾಯಣ್ ಅವರು ಅಗ್ರಕ್ರಮಾಂಕದಲ್ಲಿ ಮಾಡಿದ ಅಬ್ಬರದ ಬ್ಯಾಟಿಂಗ್ ಕಾರಣವಾಗಿತ್ತು.
‘ಕೆಕೆಆರ್ ನನಗೆ ಕುಟುಂಬವಿದ್ದಂತೆ. ಮತ್ತೆ ಐಪಿಎಲ್ ಆಡಲು ಮರಳಿ ಬಂದಿರುವುದು ನನಗೆ ಅಪಾರ ಸಂತಸ ತಂದಿದೆ. ಐಪಿಎಲ್‌ನಲ್ಲಿ ಆಡುವುದು ಸುಲಭವಲ್ಲ. ಇಲ್ಲಿ ಪೈಪೋಟಿಯು ಬಹಳ ಕಠಿಣವಾಗಿದೆ’ ಎಂದು ವೆಸ್ಟ್ ಇಂಡೀಸ್ ಆಟಗಾರ ಸುನಿಲ್ ಹೇಳಿದರು.
ಮುಂಬೈ: ಹಾರ್ದಿಕ್ ಪಾಂಡ್ಯ ಅವರು ಒಂದು ಪಂದ್ಯದ ಅಮಾನತಿಗೆ ಒಳಗಾಗಿರುವುದರಿಂದ ಇದೇ ಭಾನುವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಆಡಲಿರುವ ಮುಂಬೈ ಇಂಡಿಯನ್ಸ್ ತಂಡವನ್ನು ಬ್ಯಾಟರ್ ಸೂರ್ಯಕುಮಾರ್ ಯಾದವ್ ಮುನ್ನಡೆಸುವರು.
ಹೋದ ವರ್ಷದ ಟೂರ್ನಿಯ ಪಂದ್ಯದಲ್ಲಿ ತಂಡವು ನಿಗದಿತ ವೇಳೆಯೊಳಗೆ ಓವರ್‌ಗಳನ್ನು ಪೂರೈಸದ ನಿಯಮವನ್ನು ಮೂರು ಬಾರಿ ಉಲ್ಲಂಘಿಸಿತ್ತು. ಅದರಿಂದಾಗಿ ನಾಯಕ ಹಾರ್ದಿಕ್ ಅವರಿಗೆ ಒಂದು ಪಂದ್ಯದ ಅಮಾನತು ವಿಧಿಸಲಾಗಿತ್ತು. ಆದರೆ ತಂಡವು ಲೀಗ್ ಹಂತದಲ್ಲಿಯೇ ಹೊರಬಿದ್ದಿತ್ತು. ನಂತರದ ಪಂದ್ಯಗಳಲ್ಲಿ ತಂಡವು ಆಡಿರಲಿಲ್ಲ. ಆದ್ದರಿಂದ ಆ ಶಿಕ್ಷೆಯನ್ನು ಈಗ ಜಾರಿ ಮಾಡಲಾಗಿದೆ ಎಂದು ತಂಡದ ಮೂಲಗಳು ತಿಳಿಸಿವೆ.
‘ನಾನು ಭಾರತ ಟಿ20 ತಂಡದಲ್ಲಿ ಇಲ್ಲದಿರುವಾಗ ಸೂರ್ಯ ಅವರೇ ನಾಯಕತ್ವ ವಹಿಸುತ್ತಾರೆ. ಅವರನ್ನು ಈಗ ನಾಯಕರನ್ನಾಗಿ ಮಾಡಿರುವುದು ಸೂಕ್ತವಾಗಿದೆ’ ಎಂದು ಹಾರ್ದಿಕ್ ಹೇಳಿದ್ದಾರೆ.
ಈಡನ್ ಗಾರ್ಡನ್‌ನಲ್ಲಿ ಏ.6ರಂದು ಆಯೋಜಿಸಲಾಗಿ ರುವ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಣ ಪಂದ್ಯದ ದಿನಾಂಕವನ್ನು ಭದ್ರತಾ ಕಾರಣಕ್ಕಾಗಿ ಬದಲಾವಣೆ ಮಾಡುವ ಸಾಧ್ಯತೆ ಇದೆ.
ನಗರದಲ್ಲಿ ಆ ದಿನ ರಾಮನವಮಿ ಆಚರಿಸಲಾಗು ತ್ತದೆ. ಆಗ ಬಂಗಾಳದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಮೆರವಣಿಗೆಗಳು ನಡೆಯುತ್ತವೆ. ಆದ್ದರಿಂದ ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ತನ್ನ ಸಂಪೂರ್ಣ ಸಿಬ್ಬಂದಿಯನ್ನು ನಿಯೋಜಿಸುತ್ತದೆ. ಆದ್ದರಿಂದ ಪಂದ್ಯಕ್ಕೆ ಭದ್ರತೆ ನೀಡಲು ಕಷ್ಟದಾಯಕ ಎಂದು ಪೊಲೀಸರು ತಿಳಿಸಿದ್ದಾರೆ.
‘ಪೊಲೀಸರು ಪಂದ್ಯಕ್ಕೆ ಭದ್ರತೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈ ವಿಷಯವನ್ನು ನಾವು ಬಿಸಿಸಿಐಗೆ ಹೇಳಿದ್ದೇವೆ. ಅವರು ನಿರ್ಧಾರ ಕೈಗೊಳ್ಳುವರು’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ಹೇಳಿದ್ದಾರೆ.
ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರಸಿಂಗ್ ಧೋನಿ ಅವರ ಬ್ಯಾಟಿಂಗ್ ಬಗ್ಗೆ ಹೇಳುವಾಗ ಹೆಲಿಕಾಪ್ಟರ್ ಹೊಡೆತ ನೆನಪಾಗಲೇಬೇಕಲ್ಲವೇ?
ಧೋನಿ ಈಗಲೂ ಈ ಕ್ಲಿಷ್ಟಕರ ಹೊಡೆತವನ್ನು ಲೀಲಾಜಾಲವಾಗಿ ಪ್ರಯೋಗಿಸಬಲ್ಲರು. ಬುಧವಾರ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಧೋನಿ ವೇಗಿ ಮಥಿಷ ಪಥಿರಾಣ ಹಾಕಿದ ಯಾರ್ಕರ್ ಎಸೆತವನ್ನು ಹೆಲಿಕಾಪ್ಟರ್ ಹೊಡೆತದ ಮೂಲಕ ನೇರ ಸಿಕ್ಸರ್‌ಗೆತ್ತಿದರು. ಚುರುಕಾಗಿ ವಿಕೆಟ್‌ಕೀಪಿಂಗ್ ಅಭ್ಯಾಸವನ್ನೂ ಮಾಡಿದ ಧೋನಿ ಗಮನ ಸೆಳೆದರು. ಸಿಎಸ್‌ಕೆ ತಂಡವು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಆಟದ ವಿಡಿಯೊ ಹಾಕಿದೆ.
ಇಡೀ ವರ್ಷ ಕ್ರಿಕೆಟ್‌ನಿಂದ ದೂರ ಉಳಿಯುವ ಧೋನಿ ಐಪಿಎಲ್ ನಲ್ಲಿ ಮಾತ್ರ ಆಡುತ್ತಾರೆ. ಈ ಸಲದ ಐಪಿಎಲ್ ಅವರಿಗೆ ಕೊನೆಯ ಟೂರ್ನಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.