ವೈಭವ ಸೂರ್ಯವಂಶಿ
ಬೆಂಗಳೂರು: 101 ರನ್..38ಎಸೆತ.. 11 ಸಿಕ್ಸರ್..7 ಬೌಂಡರಿ ಮತ್ತು 14 ವರ್ಷ ವಯಸ್ಸು..
ಕಳೆದ ಒಂದೂವರೆ ತಿಂಗಳಿಂದ ಗಾಲಿಕುರ್ಚಿ ಅಥವಾ ಊರುಗೋಲಿನ ಸಹಾಯದಿಂದ ಓಡಾಡುತ್ತಿರುವ ರಾಹುಲ್ ದ್ರಾವಿಡ್ ಅವರೂ ತಮ್ಮ ಗಾಯ, ನೋವು ಮರೆತು ಕುರ್ಚಿಯಿಂದ ಜಿಗಿದೆದ್ದು ಸಂಭ್ರಮಿಸುವಂತೆ ಮಾಡಿದ ಅಂಕಿ ಸಂಖ್ಯೆಗಳು ಇವು. ಮುಖದ ಮೇಲೆ ಇನ್ನೂ ಮೀಸೆ ಚಿಗುರದ ಪೋರ ವೈಭವ ಸಂಜೀವ್ ಸೂರ್ಯವಂಶಿ ಸೋಮವಾರ ರಾತ್ರಿ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಮಾಡಿದ ದಾಖಲೆಯ ಶತಕಕ್ಕೆ ಎದುರಾಳಿ ತಂಡದವರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು. ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ ದಿಗ್ಗಜರೆಲ್ಲ ಮೆಚ್ಚುಗೆಯ ಮಹಾಪೂರ ಹರಿಸಿದರು.
ಆದರೆ ಬೇರೆಲ್ಲರಿಗಿಂತಲೂ ರಾಹುಲ್ ದ್ರಾವಿಡ್ ಅವರು ಹೆಚ್ಚು ಖುಷಿಪಟ್ಟಿದ್ದು ಸುಳ್ಳಲ್ಲ. ಏಕೆಂದರೆ; ರಾಜಸ್ಥಾನ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿರುವ ರಾಹುಲ್ ಅವರ ಅನುಭವದ ದೃಷ್ಟಿಯು ಹುಡುಕಿದ ಪ್ರತಿಭೆ ವೈಭವ್. ಮೆಗಾ ಹರಾಜಿನಲ್ಲಿ ರಾಯಲ್ಸ್ ತಂಡವು ₹ 1.1 ಕೋಟಿಗೆ ವೈಭವ್ ಅವರನ್ನು ಖರೀದಿಸಲು ಬಹಳಷ್ಟು ಜನರು ಅಚ್ಚರಿಪಟ್ಟಿದ್ದರು. ರಾಹುಲ್ ಅವರ ಅಪಾರ ಆಸಕ್ತಿಯ ಫಲವಾಗಿ ತಂಡ ಸೇರಿಕೊಂಡಿದ್ದ ಈ ಬಾಲಕನ ಆಟ ನೋಡುವ ಕುತೂಹಲ ಎಲ್ಲರಿಗೂ ಇತ್ತು. ತನ್ನ ಪದಾರ್ಪಣೆ ಪಂದ್ಯದಲ್ಲಿಯೇ ಗಮನ ಸೆಳೆದ ಹುಡುಗ ಮೂರನೇ ಪಂದ್ಯದಲ್ಲಿಯೇ ತನ್ನ ಭುಜಬಲ ಪರಾಕ್ರಮ ಮೆರೆದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾದಾಗಿನಿಂದಲೂ ಕ್ರಿಕೆಟ್ ಪ್ರಿಯರು ಕ್ರಿಸ್ ಗೇಲ್, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಮಹೇಂದ್ರಸಿಂಗ್ ಧೋನಿ ಅವರ ಹುರಿಗಟ್ಟಿದ ಸಿಕ್ಸರ್‌ಗಳನ್ನು ಆನಂದಿಸಿದ್ದಾರೆ. ಅದೇ ಅಭಿಮಾನಿಗಳಲ್ಲಿ ವೈಭವ್ ಹೊಡೆಯುವ ಸಿಕ್ಸರ್‌ಗಳು ರೋಮಾಂಚನ ಮೂಡಿಸಲು ಕಾರಣ ಇದೆ.
ಈ ಪೋರನ ಪುಲ್, ಕಟ್, ಡ್ರೈವ್, ಫ್ಲಿಕ್ ಮತ್ತು ಸ್ಕೂಪ್‌ಗಳ ಕೌಶಲಗಳು ಈಗಲೇ ಉತ್ಕೃಷ್ಟ ಮಟ್ಟದಲ್ಲಿವೆ. ಕವರ್ಸ್ ಫೀಲ್ಡರ್ ತಲೆ ಮೇಲಿಂದ ಸಿಕ್ಸರ್ ಹೊಡೆಯುವ ಸಾಹಸ ಮಾಡಿ ಸೈ ಎನಿಸಿಕೊಂಡರು. ಗುಜರಾತ್ ಟೈಟನ್ಸ್ ತಂಡದ ಅಂತರರಾಷ್ಟ್ರೀಯ ಮಟ್ಟದ ಬೌಲರ್‌ಗಳನ್ನು ಲೆಕ್ಕಕ್ಕೇ ಇಲ್ಲದಂತೆ ದಂಡಿಸಿದರು. ಮೊಹಮ್ಮದ್ ಸಿರಾಜ್, ಪ್ರಸಿದ್ಧ ಕೃಷ್ಣ, ರಶೀದ್ ಖಾನ್, ಇಶಾಂತ್ ಶರ್ಮಾ, ಕರೀಂ ಜನತ್, ಇಶಾಂತ್ ಶರ್ಮಾ ಮತ್ತು ವಾಷಿಂಗ್ಟನ್ ಸುಂದರ್ ಅವರ ಎಸೆತಗಳನ್ನು ಲೀಲಾಜಾಲವಾಗಿ ಆಡಿದರು. ಅದರಲ್ಲೂ ಕರೀಂ ಅವರ ಒಂದೇ ಓವರ್‌ನಲ್ಲಿ 30 ರನ್‌ಗಳನ್ನು ಸೂರೆ ಮಾಡಿಬಿಟ್ಟರು.
ಈಚೆಗೆ ಅವರು ತಮ್ಮ ಪದಾರ್ಪಣೆ ಪಂದ್ಯದಲ್ಲಿ ಎದುರಿಸಿದ್ದ ಮೊದಲ ಎಸೆತವನ್ನೇ ಸಿಕ್ಸರ್‌ಗೆತ್ತುವ ಮೂಲಕ ತಮ್ಮ ಆಗಮನವನ್ನು ಸಾರಿದ್ದರು. ಇದೀಗ ತಮ್ಮ ವೃತ್ತಿಜೀವನದ ಮೂರನೇ ಪಂದ್ಯದಲ್ಲಿ ಈಗ ಶತಕ ಹೊಡೆದ ಕಿರಿವಯಸ್ಸಿನ ಆಟಗಾರನೆಂಬ ದಾಖಲೆಗೂ ಭಾಜನರಾಗಿದ್ದಾರೆ. ಅಷ್ಟೇ ಅಲ್ಲ; ಯೂಸುಫ್ ಪಠಾಣ್ ಅವರ ಹೆಸರಲ್ಲಿದ್ದ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ.
‘ನಾನು ಬ್ಯಾಟಿಂಗ್ ಮಾಡುವಾಗ ಬೌಲರ್‌ಗಳು ಯಾರು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಎಸೆತಗಳಿಗೆ ತಕ್ಕ ಹೊಡೆತಗಳನ್ನು ಪ್ರಯೋಗಿಸುವತ್ತ ಮಾತ್ರ ಗಮನ ನೀಡುತ್ತೇನೆ. ನನಗೆ ಭಯವೇ ಇಲ್ಲ. ಹೆಚ್ಚು ಚಿಂತೆಯನ್ನೂ ಮಾಡಲ್ಲ. ಆಡುವುದಷ್ಟೇ ನನ್ನ ಕೆಲಸ. ಪ್ರಾಕ್ಟಿಸ್ ಅವಧಿಗಳಲ್ಲಿ ವಹಿಸಿದ ಶ್ರಮ ಮತ್ತು ಕೋಚ್, ಸಹ ಆಟಗಾರರ ಮಾರ್ಗದರ್ಶನ ಸಹಕಾರಿಯಾಗಿದೆ. ಅದರಲ್ಲೂ ಯಶಸ್ವಿ ಜೈಸ್ವಾಲ್ ಜೊತೆ ಬ್ಯಾಟಿಂಗ್ ಮಾಡುವುದು ಬಹಳ ಉಪಯುಕ್ತವಾಗಿದೆ. ಅವರು ಪಿಚ್‌ನಲ್ಲಿ ನೀಡುವ ಮಾರ್ಗದರ್ಶನ ಬಹಳ ಅಮೂಲ್ಯವಾದದ್ದು. ಈ ಶತಕ ಹೊಡೆದಿದ್ದು ಸಂತಸ ತಂದಿದೆ’ ಎಂದು ವೈಭವ್ ಅವರು ಪಂದ್ಯದ ನಂತರ ಹೇಳಿದರು.
ವೈಭವ್ ಈ ಹಂತಕ್ಕೆ ಬರಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಅವರ ಭವಿಷ್ಯ ರೂಪಿಸಲು ತಂದೆ ಸಂಜೀವ್ ಸೂರ್ಯವಂಶಿ ಅವರ ತ್ಯಾಗ ಕೂಡ ದೊಡ್ಡದು.
ಸದಾ ವಿವಾದ, ಗೊಂದಲ ಮತ್ತು ಅವ್ಯವಸ್ಥೆಗಳಿಂದಲೇ ಸುದ್ದಿಯಾಗುವ ಬಿಹಾರದ ಕ್ರಿಕೆಟ್ ಆಡಳಿತದಲ್ಲಿ ಆಟಗಾರರು ಬೆಳೆಯುವುದು ಸುಲಭವಲ್ಲ. ಅಲ್ಲೊಬ್ಬರು, ಇಲ್ಲೊಬ್ಬರು ಬೆಳೆದು ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ರಣಜಿ ಟ್ರೋಫಿ ಸೇರಿದಂತೆ ದೇಶಿ ಕ್ರಿಕೆಟ್‌ನಲ್ಲಿಯೂ ಬಿಹಾರ ತಂಡದ ಸಾಧನೆ ಹೇಳಿಕೊಳ್ಳುವಂತಿಲ್ಲ.
ಅಂತಹ ವ್ಯವಸ್ಥೆಯಲ್ಲಿ ವೈಭವ್ ಈ ಮಟ್ಟಕ್ಕೆ ಬೆಳೆಯಲು ತಂದೆ ಸಂಜೀವ್ ಅವರೇ ಕಾರಣ. ಎಂಟನೇ ವಯಸ್ಸಿಗೆ ಕ್ರಿಕೆಟ್ ಆಡಲು ಶುರು ಮಾಡಿದ ವೈಭವ್ ಪ್ರತಿಭೆಯನ್ನು ಗುರುತಿಸಿದವರೂ ಅವರೇ. ಎಸೆತದ ವೇಗ. ಓಘವನ್ನು ಗುರುತಿಸುವ ವೈಭವ್ ಅವರ ಚುರುಕಿನ ದೃಷ್ಟಿ, ಅದರ ಜೊತೆಗೆ ವೇಗವಾಗಿ ಚಲಿಸುತ್ತಿದ್ದ ಕೈಗಳು, ಬ್ಯಾಟ್ ಗ್ರಿಪ್ ಎಲ್ಲವೂ ವಿಶೇಷವೇ ಆಗಿದ್ದವು. ಸಂಜೀವ್ ತಡ ಮಾಡಲಿಲ್ಲ. ಸಮಸ್ತಿಪುರದಲ್ಲಿದ್ದ ಕೋಚ್ ಬ್ರಜೇಶ್ ಝಾ ಅವರ ಅಕಾಡೆಮಿಗೆ ಸೇರಿಸಿದರು. ಅದರ ಪಾಟ್ನಾದ ಮನೀಷ್ ಝಾ ಅವರ ಅಕಾಡೆಮಿಗೆ ಸೇರಿಸಲಾಯಿತು. ಅದು ವೈಭವ್ ಜೀವನಕ್ಕೆ ಸಿಕ್ಕ ಮಹತ್ವದ ತಿರುವು.
‘ಹಾಲುಗಲ್ಲದ ಮುದ್ದುಮುದ್ದಾಗಿದ್ದ ವೈಭವ್ ಅವರಿಗೆ ಆಟವಷ್ಟೇ ಅಲ್ಲ. ಆಹಾರ, ವಿಹಾರಗಳ ತರಬೇತಿ ಕೂಡ ನೀಡಲಾಗಿದೆ. ಮಟನ್ ಖಾದ್ಯ, ಪಿಜ್ಜಾ ತಿನ್ನುವುದರಿಂದ ದೂರ ಉಳಿಸಲಾಗಿದೆ. ಪ್ರೊಟೀನ್, ಕ್ಯಾಲ್ಸಿಯಂ ಮತ್ತಿತರ ಪೌಷ್ಟಿಕಾಂಶಗಳ ಆಹಾರಕ್ಕೆ ಹೆಚ್ಚು ಆದ್ಯತೆ ನೀಡಲಾಗಿದೆ’ ಎಂದು ಮನೀಷ್ ಝಾ ಹೇಳಿದ್ದಾರೆ.
ವೈಭವ್ 10ನೇ ವಯಸ್ಸಿನವರಾಗಿದ್ದ ಸಂದರ್ಭದಲ್ಲಿ ಕ್ರಿಕೆಟ್ ತರಬೇತಿಯ ಖರ್ಚು ನಿಭಾಯಿಸುವುದು ತಂದೆಗೆ ಕಷ್ಟವಾಗಿತ್ತು. ತಮ್ಮ ಹಳ್ಳಿಯಲ್ಲಿದ್ದ ಕೃಷಿ ಭೂಮಿಯನ್ನು ಹಿಂದೆಮುಂದೆ ಯೋಚಿಸದೇ ಮಾರಿಬಿಟ್ಟರು. ಅದರಿಂದ ಬಂದ ದುಡ್ಡನ್ನು ಮಗನ ಕ್ರಿಕೆಟ್ ಕಲಿಕೆಗೆ ಹಾಕಿದರು.
ಬಾಲ್ಯದಿಂದಲೂ ಕ್ರಿಕೆಟ್‌ಪ್ರೇಮಿಯಾಗಿದ್ದ ಸಂಜೀವ್ ಬಡತನದ ಕಾರಣಕ್ಕೆ ಆಟಗಾರನಾಗಿ ಬೆಳೆಯಲಿಲ್ಲ. ತಮ್ಮ ಕನಸನ್ನು ಮಗ ಈಡೇರಿಸುವ ಭರವಸೆಯೊಂದಿಗೆ ಬಹಳಷ್ಟು ಕಷ್ಟ ಅನುಭವಿಸಿದರು. ರೆಸ್ಟೊರೆಂಟ್ ಸೇರಿದಂತೆ ಹಲವೆಡೆ ಕೆಲಸ ಮಾಡಿ ಕುಟುಂಬವನ್ನು ಸಲಹಿದರು.
ಅಪ್ಪನ ಶ್ರಮ ವ್ಯರ್ಥವಾಗಲು ಮಗ ಬಿಡಲಿಲ್ಲ. 13 ವರ್ಷವಾದಾಗಲೇ ಬಿಹಾರ ರಾಜ್ಯ ತಂಡ, 19 ವರ್ಷದೊಳಗಿನವರ ತಂಡಗಳಲ್ಲಿ ಆಡಿದರು. ಅವರ ಬ್ಯಾಟಿಂಗ್‌ಗೆ ಆಯ್ಕೆ ದಾರರೂ ಮನಸೋತರು. ಅಷ್ಟೇ ಅಲ್ಲ; ಕಳೆದ ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ಗಜ ಕ್ರಿಕೆಟಿಗ, ರಾಜಸ್ಥಾನ ರಾಯಲ್ಸ್ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನೂ ಸೆಳೆದ ಬಾಲಕನಿಗೆ ಬಂಪರ್ ಒಲಿಯಿತು. ₹ 30 ಲಕ್ಷ ಮೂಲಬೆಲೆ ಹೊಂದಿದ್ದ ವೈಭವ್ ಅವರನ್ನು ರಾಜಸ್ಥಾನ ತಂಡವು ₹ 1.1 ಕೋಟಿ ಕೊಟ್ಟು ಖರೀದಿಸಿತು.
ಕೆಲವು ವರ್ಷಗಳ ಹಿಂದೆ ಅವರ ವಯಸ್ಸು ಕುರಿತ ವಿವಾದವೂ ನಡೆದುಹೋಯಿತು. ವೈಭವ್ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆಯು ಇದಕ್ಕೆ ಕಾರಣ.
‘ಎಂಟನೇ ವಯಸ್ಸಿಗೇ ಅವರ ಬೋನ್ ಟೆಸ್ಟ್ (ಎಲುಬು ಸಾಂದ್ರತೆ ಪರೀಕ್ಷೆ) ಆಗಿದೆ. ವಯಸ್ಸು ಸರಿಯಾಗಿದೆ. ಯಾವುದೇ ಮೋಸ ಮಾಡಿಲ್ಲ. ಎಲ್ಲ ದಾಖಲೆಗಳೂ ಇವೆ’ ಎಂದು ತಂದೆ ಸಂಜೀವ್ ಸ್ಪಷ್ಟಪಡಿಸಿದ್ದರು. ಅಲ್ಲಿಗೆ ವಿವಾದ ತಣ್ಣಗಾಗಿತ್ತು.
ಈಗ ವೈಭವ್ ಅವರ ಕ್ರಿಕೆಟ್ ಜೀವನದ ಪ್ರಮುಖ ಘಟ್ಟದ ಆರಂಭವಾಗಿದೆ. ತಮಗೆ ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಭರವಸೆ ಮೂಡಿಸಿದ್ದಾರೆ. ಈಗಾಗಲೇ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಮಹೇಂದ್ರ ಧೋನಿ ಅವರೊಂದಿಗೆ ಹೋಲಿಕೆ ಮಾಡಲಾಗುತ್ತಿದೆ. ವೈಭವ್‌ಗೆ ಆ ಎಲ್ಲ ದಿಗ್ಗಜರ ಸಾಲಿನಲ್ಲಿ ನಿಲ್ಲುವ ಪ್ರತಿಭೆ, ಸಮಯ ಮತ್ತು ಅವಕಾಶಗಳು ಖಂಡಿತವಾಗಿಯೂ ಇವೆ. ಈ ಶತಕ ಅವರ ವೃತ್ತಿಜೀವನದ ಆರಂಭವಷ್ಟೇ. ಆಧುನಿಕ ಕ್ರಿಕೆಟ್ ಜಗತ್ತಿನ ಥಳಕು ಬಳಕು ಮೀರಿ ನಿಂತು ಮತ್ತಷ್ಟು, ಮಗದಷ್ಟು ದೂರ ಸಾಗಿ, ಸಾಧಿಸುವುದು ಕೂಡ ಅವರ ಮುಂದಿರುವ ಪ್ರಮುಖ ಸವಾಲು. ಅದರಲ್ಲಿ ಗೆಲ್ಲುವರೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.