ಸಿಡ್ನಿ: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಹಾಗೂ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ I ಇಬ್ಬರಿಗೂ ಐಪಿಎಲ್ ಫ್ರಾಂಚೈಸಿಯೊಂದು ವರ್ಷಪೂರ್ತಿ ತಮ್ಮ ತಂಡಗಳ ಪರ ಆಡಲು ತಲಾ 10 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್ (₹58.46 ಕೋಟಿ) ಮೌಲ್ಯದ ಬಹು ವರ್ಷಗಳ ಒಪ್ಪಂದದ ಆಫರ್ ನೀಡಿದೆ. ಆದರೆ, ಇಬ್ಬರೂ ಕೂಡ ಫ್ರಾಂಚೈಸಿ ಆಫರ್‌ನ್ನು ತಿರಸ್ಕರಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ವರದಿಯ ಪ್ರಕಾರ, ಐಪಿಎಲ್ ಬೆಂಬಲಿತ ಹೂಡಿಕೆದಾರರ ಸಂಸ್ಥೆಯೊಂದು ಆಸ್ಟ್ರೇಲಿಯಾ ತಂಡವನ್ನು ತೊರೆದು ಪೂರ್ಣಾವಧಿಗೆ ತಮ್ಮ ಫ್ರಾಂಚೈಸಿ ಪರ ಆಡಲು ಕಮ್ಮಿನ್ಸ್ ಹಾಗೂ ಟ್ರಾವಿಸ್ ಹೆಡ್ ಅವರಿಗೆ ತಲಾ ₹58 ಕೋಟಿ ನೀಡುವುದಾಗಿ ಆಫರ್ ನೀಡಿದೆ. ಈ ಮೊತ್ತ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನೀಡುವ ಮೊತ್ತಕ್ಕಿಂತ ಸುಮಾರು 6 ಪಟ್ಟು ಅಧಿಕವಾಗಿದೆ.
ವರದಿಯಲ್ಲಿ 'ಈ ವರ್ಷ ಐಪಿಎಲ್ ತಂಡದ ಫ್ರಾಂಚೈಸಿಯೊಂದು ನೀಡಿದ ದೊಡ್ದ ಪ್ರಮಾಣದ ಆಫರ್ ಅನ್ನು ಆಸ್ಟ್ರೇಲಿಯಾದ ಇಬ್ಬರು ಪ್ರಮುಖ ಆಟಗಾರರು ನಯವಾಗಿ ತಿರಸ್ಕರಿಸಿದ್ದಾರೆ. ಮತ್ತು ಅವರು ತಮ್ಮ ರಾಷ್ಟ್ರೀಯ ತಂಡಕ್ಕೆ ಆಡಲು ಬದ್ಧರಾಗಿದ್ದಾರೆ' ಎಂದು ವರದಿಯಲ್ಲಿ ತಿಳಿಸಿದೆ.
ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರು ಕ್ರಿಕೆಟ್ ಆಸ್ಟ್ರೇಲಿಯಾ (CA)ದ ಒಪ್ಪಂದದಿಂದ ವಾರ್ಷಿಕವಾಗಿ ಸುಮಾರು 1.5 ಮಿಲಿಯನ್ AUD (₹8.77 ಕೋಟಿ) ಆದಾಯ ಗಳಿಸುತ್ತಾರೆ. ಕಮ್ಮಿನ್ಸ್ ನಾಯಕರಾಗಿರುವುದರಿಂದ ಅವರ ಒಟ್ಟು ಆದಾಯ 3 ಮಿಲಿಯನ್ AUD (₹17.54 ಕೋಟಿ) ನಷ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.