ADVERTISEMENT

ರೈನಾ–ಧೋನಿ ಆಟ: ‘ಕಿಂಗ್ಸ್‌’ ಮೆರೆದಾಟ

ಇಮ್ರಾನ್‌ ತಾಹಿರ್‌ಗೆ ನಾಲ್ಕು, ರವೀಂದ್ರ ಜಡೇಜಗೆ ಮೂರು ವಿಕೆಟ್‌; ಶ್ರೇಯಸ್ ಅಯ್ಯರ್ ಏಕಾಂಗಿ ಹೋರಾಟ

ಪಿಟಿಐ
Published 1 ಮೇ 2019, 19:46 IST
Last Updated 1 ಮೇ 2019, 19:46 IST
   

ಚೆನ್ನೈ : ಎಡಗೈ ಬ್ಯಾಟ್ಸ್‌ಮನ್‌ ಸುರೇಶ್ ರೈನಾ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬ್ಯಾಟಿಂಗ್ ವೈಭವದ ಬೆನ್ನಲ್ಲೇ ಲೆಗ್ ಸ್ಪಿನ್ನರ್‌ ಇಮ್ರಾನ್‌ ತಾಹೀರ್‌ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮ್ಯಾಜಿಕ್ ಮಾಡಿದರು. ಇದರ ಪರಿಣಾಮ ಡೆಲ್ಲಿ ಕ್ಯಾಪಿಟಲ್ಸ್‌ ಸೋಲಿನ ಸುಳಿಯಲ್ಲಿ ಸಿಲುಕಿತು.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಆತಿಥೇಯ ಚೆನ್ನೈ ಸೂಪರ್ ಕಿಂಗ್ಸ್‌ ತಂಡ ಡೆಲ್ಲಿ ಕ್ಯಾಪಿಟಲ್ಸ್ ಎದುರು 80 ರನ್‌ಗಳ ಗೆಲುವು ತನ್ನದಾಗಿಸಿಕೊಂಡಿತು. ಈ ಮೂಲಕ ಚೆನ್ನೈ ಪಾಯಿಂಟ್ಸ್‌ ಪಟ್ಟಿಯಲ್ಲಿ ಮತ್ತೆ ಅಗ್ರ ಸ್ಥಾನಕ್ಕೇರಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಸೂಪರ್ ಕಿಂಗ್ಸ್‌ ರೈನಾ (59; 37 ಎಸೆತ, 1 ಸಿಕ್ಸರ್‌, 8 ಬೌಂಡರಿ) ಮತ್ತು ಧೋನಿ (44; 22 ಎ, 3 ಸಿ, 4 ಬೌಂ) ಅವರ ಅಮೋಘ ಜೊತೆಯಾಟದ ನೆರವಿನಿಂದ 179 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಡೆಲ್ಲಿ ಪರ ನಾಯಕ ಶ್ರೇಯಸ್ ಅಯ್ಯರ್ ಅವರೊಬ್ಬರೇ ಸ್ವಲ್ಪ ಪ್ರತಿರೋಧ ಒಡ್ಡಿದರು.

ADVERTISEMENT

ತಾಹೀರ್ ಮತ್ತು ಜಡೇಜ ಸತತವಾಗಿ ವಿಕೆಟ್ ಕಬಳಿಸಿ 17ನೇ ಓವರ್‌ನಲ್ಲೇ ಎದುರಾಳಿಗಳಿಗೆ ಸೋಲಿನ ಕಹಿ ಉಣಿಸಿದರು.

ನಡುಕ ಹುಟ್ಟಿಸಿದ ಧೋನಿ–ರೈನಾ: ಜ್ವರದಿಂದ ಚೇತರಿಸಿಕೊಂಡು ಕಣಕ್ಕಿಳಿದ ಮಹೇಂದ್ರಸಿಂಗ್ ಧೋನಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದರು. ಅಬ್ಬರದ ಆಟದ ಮೂಲಕ ಅವರಿಗೆ ರೈನಾ ಉತ್ತಮ ಬೆಂಬಲ ನೀಡಿದರು.

ಡೆಲ್ಲಿ ತಂಡದಲ್ಲಿರುವ ಮೈಸೂರು ಹುಡುಗ ಜಗದೀಶ ಸುಚಿತ್ (28ಕ್ಕೆ2) ಅವರು ಆರಂಭದಲ್ಲಿಯೇ ನೀಡಿದ ಪೆಟ್ಟಿನಿಂದಾಗಿ ಚೆನ್ನೈ ತಂಡವು ಒಂದು ಹಂತದಲ್ಲಿ ಸಾಧಾರಣ ಮೊತ್ತ ಗಳಿಸುವ ಆತಂಕ ಎದುರಿಸಿತ್ತು. ನಾಲ್ಕನೇ ಓವರ್‌ನಲ್ಲಿಯೇ ಸುಚಿತ್ ಶೇನ್ ವಾಟ್ಸನ್‌ ವಿಕೆಟ್ ಕಬಳಿಸಿದರು. ಫಾಫ್ ಡುಪ್ಲೆಸಿ ಮತ್ತು ಸುರೇಶ್ ರೈನಾ ಎರಡನೇ ವಿಕೆಟ್ ಜೊತೆಯಾಟದಲ್ಲಿ 83 ರನ್‌ಗಳನ್ನು ಸೇರಿಸಿದರು. ಇದರಿಂದಾಗಿ ತಂಡವು ಚೇತರಿಕೆ ಕಂಡಿತು.

14ನೇ ಓವರ್‌ನಲ್ಲಿ ಡುಪ್ಲೆಸಿ ಮತ್ತು 15ನೇ ಓವರ್‌ನಲ್ಲಿ ರೈನಾ ಔಟಾದರು. ತಂಡದ ಮೊತ್ತವು ಆಗ ಬರೀ 102 ರನ್‌ಗಳಾಗಿದ್ದವು.

ಈ ಹಂತದಲ್ಲಿ ಜೊತೆಗೂಡಿದ ಧೋನಿ ಮತ್ತು ರವೀಂದ್ರ ಜಡೇಜ ಬೌಲರ್‌ಗಳ ಬೆಂಡೆತ್ತಿದರು. ಕ್ರೀಡಾಂಗಣದಲ್ಲಿ ಸೇರಿದ್ದ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು. 200ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಗಳಿಸಿದ ಧೋನಿ ಆಟ ಕಳೆಗಟ್ಟಿತು. 19ನೇ ಓವರ್‌ನಲ್ಲಿ ಜಡೇಜ ಔಟಾದರು. ಆದರೆ ಧೋನಿ ಅಬ್ಬರ ನಿಲ್ಲಲಿಲ್ಲ. ಕೊನೆಯ ಒಂದು ಓವರ್‌ನಲ್ಲಿ 23 ರನ್‌ಗಳು ಸೇರಿದವು. ಅದರಲ್ಲಿ ಧೋನಿ ಮೂರು ಸಿಕ್ಸರ್ ಬಾರಿಸಿದ್ದರು. ಒಂದು ಬೌಂಡರಿಯನ್ನೂ ಹೊಡೆದಿದ್ದರು.

ಪ್ರೇಕ್ಷಕರಿಗೆ ಚೆಂಡು: ಪಂದ್ಯದ ನಂತರ ಅಂಗಣಕ್ಕೆ ಸುತ್ತು ಹಾಕಿದ ಧೋನಿ ಟೆನಿಸ್ ಪಂದ್ಯಗಳ ನಂತರ ಆಟಗಾರರು ಪ್ರೇಕ್ಷಕರತ್ತ ಚೆಂಡು ಎಸೆಯುವಂತೆ ‘ಟೆನಿಸ್‌ ಬಾಲ್‌’ಗಳನ್ನು ಎಸೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.