ADVERTISEMENT

IPL-2020 | MI vs RR: ಹ್ಯಾಟ್ರಿಕ್ ಜಯದೊಂದಿಗೆ ಅಗ್ರಸ್ಥಾನಕ್ಕೇರಿದ ರೋಹಿತ್ ಪಡೆ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2020, 18:28 IST
Last Updated 6 ಅಕ್ಟೋಬರ್ 2020, 18:28 IST
   

ಅಬುಧಾಬಿ:ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ನೀಡಿದ ಸವಾಲಿನ ಗುರಿ ಎದುರು ದಿಟ್ಟ ಆಟವಾಡುವಲ್ಲಿ ವಿಫಲವಾದ ರಾಜಸ್ಥಾನ ರಾಯಲ್ಸ್‌ ತಂಡ ಕೇವಲ 136ರನ್‌ ಗಳಿಗೆ ಆಲೌಟ್‌ ಆಯಿತು. ಇದರೊಂದಿಗೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕನೇಗೆಲುವು ಸಾಧಿಸಿದಮುಂಬೈ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡದ ಪರಸೂರ್ಯಕುಮಾರ್ ಯಾದವ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. 47 ಎಸೆತಗಳನ್ನು ಎದುರಿಸಿದ ಅವರು 2 ಸಿಕ್ಸರ್‌ ಮತ್ತು 11 ಬೌಂಡರಿ ಸಹಿತ 79 ರನ್‌ ಗಳಿಸಿದರು. ನಾಯಕ ರೋಹಿತ್‌ ಶರ್ಮಾ (35), ಹಾರ್ದಿಕ್‌ ಪಾಂಡ್ಯ (ಅಜೇಯ 30) ಉತ್ತಮ ಕೊಡುಗೆ ನೀಡಿದರು. ಹೀಗಾಗಿ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ ಕೇವಲ 4 ವಿಕೆಟ್‌ ಕಳೆದುಕೊಂಡು 193 ರನ್‌ ಗಳಿಸಿತು.

ಮೊದಲ ಮೂರು ಓವರ್‌ಗಳಲ್ಲಿ 3 ವಿಕೆಟ್
194 ರನ್‌ಗಳ ಗುರಿ ಬೆನ್ನತ್ತಿದ ರಾಯಲ್ಸ್‌ ಮೊದಲ ಮೂರು ಓವರ್‌ಗಳಲ್ಲಿ ಕ್ರಮವಾಗಿ ಯಶಸ್ವಿ ಜೈಸ್ವಾಲ್‌ (0), ನಾಯಕ ಸ್ಟೀವ್‌ ಸ್ಮಿತ್‌ (6) ಹಾಗೂ ಸಂಜು ಸ್ಯಾಮ್ಸನ್‌ (0) ವಿಕೆಟ್‌ ಒಪ್ಪಿಸಿದರು. ರಾಯಲ್ಸ್‌ಗೆಈಆಘಾತದಿಂದ ಹೊರಬರಲು ಸಾಧ್ಯವಾಗಲಿಲ್ಲ. ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ರೋಹಿತ್ ಪಡೆಯ ಬೌಲರ್‌ಗಳು ಇನ್ನಿಲ್ಲದಂತೆ ಕಾಡಿದರು.

ಒಂದೆಡೆ ನಿರಂತರವಾಗಿ ವಿಕೆಟ್‌ ಬೀಳುತ್ತಿದ್ದರೂ ಧೃತಿಗೆಡದೆಹೋರಾಟ ನಡೆಸಿದ ಜಾಸ್‌ ಬಟ್ಲರ್‌, ಮುಂಬೈ ಪಾಳಯದಲ್ಲಿ ಭಯ ಮೂಡಿಸಿದ್ದರು. 44 ಎಸೆತಗಳನ್ನು ಎದುರಿಸಿದ ಅವರು 5 ಬೌಂಡರಿ 4 ಸಿಕ್ಸರ್‌ ಸಹಿತ 70 ರನ್‌ ಸಿಡಿಸಿದರು. ಆದರೆ, ಅವರು ಜೇಮ್ಸ್‌ ಪ್ಯಾಟಿನ್ಸನ್ ಎಸೆದ 14ನೇ ಓವರ್‌ನಲ್ಲಿ ಬಲವಾಗಿ ಬಾರಿಸಿದ ಚೆಂಡನ್ನು ಕೀರನ್‌ ಪೊಲಾರ್ಡ್ ಬೌಂಡರಿ ಗೆರೆ ಬಳಿ‌ ಅದ್ಭುತವಾಗಿ ಹಿಡಿದರು. ಇದರೊಂದಿಗೆ ಬಟ್ಲರ್ ಹೋರಾಟದ ಇನಿಂಗ್ಸ್‌ಗೆ ತೆರೆ ಬಿದ್ದಿತು.‌

ಕೊನೆಯಲ್ಲಿ ಜೋಫ್ರಾ ಆರ್ಚರ್‌ ಕೇವಲ 11 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 24 ರನ್ ‌ಗಳಿಸಿ ಅಬ್ಬರಿಸಿದರಾದರೂ ತಮ್ಮ ತಂಡಕ್ಕೆ ಗೆಲುವು ತಂದುಕೊಡಲು ಸಾಕಾಗಲಿಲ್ಲ. ಅಂತಿಮವಾಗಿ ರಾಯಲ್ಸ್ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 57 ರನ್‌ ಅಂತರದ ಸೋಲೊಪ್ಪಿಕೊಂಡಿತು.

ಮುಂಬೈ ಪರ ಅತ್ಯುತ್ತಮವಾಗಿ ಬೌಲಿಂಗ್‌ ಮಾಡಿದ ಜಸ್‌ಪ್ರೀತ್‌ ಬೂಮ್ರಾ 20 ರನ್ ನೀಡಿ 4 ವಿಕೆಟ್‌ ಪಡೆದರೆ, ಟ್ರೆಂಟ್‌ ಬೌಲ್ಟ್‌ ಮತ್ತು ಜೇಮ್ಸ್‌ ಪ್ಯಾಟಿನ್ಸನ್‌ ತಲಾ ಎರಡೆರಡು ವಿಕೆಟ್‌ ಉರುಳಿಸಿದರು. ರಾಹುಲ್‌ ಚಾಹರ್‌ ಹಾಗೂ ಕೀರನ್‌ ಪೊಲಾರ್ಡ್‌ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.

ಈ ಸೋಲಿನೊಂದಿಗೆ ರಾಯಲ್ಸ್‌ಪಾಯಿಂಟ್ಸ್‌ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದಿದೆ.

ಮುಂಬೈ ತಂಡ ಕಳೆದ ಎರಡುಪಂದ್ಯಗಳಲ್ಲಿ ಕಿಂಗ್ಸ್‌ ಇಲವೆನ್‌ ಪಂಜಾಬ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಗೆಲುವು ಸಾಧಿಸಿತ್ತು. ರಾಯಲ್ಸ್‌, ಕೋಲ್ಕತ್ತ ನೈಟ್‌ರೈಡರ್ಸ್‌ ಹಾಗೂ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಎದುರು ಪರಾಭವಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.