ADVERTISEMENT

IPL-2020 | RCB vs SRH: ಪ್ಲೇ ಆಫ್‌ನತ್ತ ಸನ್‌ರೈಸರ್ಸ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 19:13 IST
Last Updated 31 ಅಕ್ಟೋಬರ್ 2020, 19:13 IST
   
""

ಶಾರ್ಜಾ : ನಿರ್ಣಾಯಕ ಪಂದ್ಯ ದಲ್ಲಿ ಆಲ್‌ರೌಂಡ್ ಆಟದ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕಂಗೆಡಿಸಿದ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ ಆಫ್ ಕನಸನ್ನು ಜೀವಂತವಾಗಿ ಉಳಿಸಿಕೊಂಡಿತು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್‌ ಐದು ವಿಕೆಟ್‌ಗಳಿಂದ ಕೊಹ್ಲಿ ಪಡೆಯನ್ನು ಮಣಿಸಿತು.

ಮಧ್ಯಮವೇಗಿ ಸಂದೀಪ್ ಶರ್ಮಾ ಮತ್ತು ಜೇಸನ್ ಹೋಲ್ಡರ್ ಶಿಸ್ತಿನ ದಾಳಿ ಮೂಲಕ ಬೆಂಗಳೂರು ತಂಡದ ಬ್ಯಾಟಿಂಗ್ ಪಡೆಯನ್ನು ಕೇವಲ 120 ರನ್‌ಗಳಿಗೆ ನಿಯಂತ್ರಿಸಿದರು.

ADVERTISEMENT

ಸುಲಭ ಗುರಿ ಬೆನ್ನತ್ತಿದ ಹೈದರಾಬಾದ್ 10 ರನ್ ಗಳಿಸುವಷ್ಟರಲ್ಲಿ ನಾಯಕನ ವಿಕೆಟ್ ಕಳೆದುಕೊಂಡರೂ ವೃದ್ಧಿಮಾನ್ ಸಹಾ ಮತ್ತು ಮನೀಷ್ ಪಾಂಡೆ ಎರಡನೇ ವಿಕೆಟ್‌ಗೆ 50 ರನ್ ಸೇರಿಸಿ ಭರವಸೆ ಮೂಡಿಸಿದರು. 10 ಎಸೆತಗಳಲ್ಲಿ ಮೂರು ಸಿಕ್ಸರ್ ಮತ್ತು ಒಂದು ಬೌಂಡರಿ ಒಳಗೊಂಡಂತೆ 26 ರನ್ ಗಳಿಸಿದ ಜೇಸನ್ ಹೋಲ್ಡರ್ ಜಯವನ್ನು ಸುಲಭಗೊಳಿಸಿದರು.

ಇದು ರಾಯಲ್ ಚಾಲೆಂಜರ್ಸ್‌ಗೆ ಸತತ ಮೂರನೇ ಸೋಲು. ಹೀಗಿದ್ದೂ ಪಾಯಿಂಟ್ ಪಟ್ಟಿಯಲ್ಲಿ ತಂಡ ಎರಡನೇ ಸ್ಥಾನದಲ್ಲೇ ಉಳಿಯಿತು. ಆದರೆ ಪ್ಲೇಆಫ್‌ ಪ್ರವೇಶಿಸಬೇಕಾದರೆ ಮುಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಗೆಲುವು ಅನಿವಾರ್ಯ. ಸನ್‌ರೈಸರ್ಸ್ ತನ್ನ ಕೊನೆಯ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈಯನ್ನು ಎದುರಿ ಸಲಿದ್ದು ಗೆದ್ದರೆ ಮಾತ್ರ ಪ್ಲೇಆಫ್‌ಗೆ ತಲುಪಲಿದೆ.

ಆರ್‌ಸಿಬಿ ನೀರಸ ಬ್ಯಾಟಿಂಗ್: ಟಾಸ್ ಗೆದ್ದ ಹೈದರಾಬಾದ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಸಂದೀಪ್ ಶರ್ಮಾ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಮತ್ತು ನಾಯಕ ವಿರಾಟ್ ಕೊಹ್ಲಿ ವಿಕೆಟ್‌ ಕಬಳಿಸಿದರು. ಜೋಶ್ ಫಿಲಿಪ್ (32; 31 ಎಸೆತ, 4 ಬೌಂಡರಿ) ಅವ ರೊಂದಿಗೆ ’ಸೂಪರ್ ಮ್ಯಾನ್‘ ಎಬಿ ಡಿವಿಲಿಯರ್ಸ್‌ ಸೇರಿಕೊಂಡಾಗ ಭರವಸೆ ಮೂಡಿತ್ತು.

ಎಬಿಡಿ ಒಂದು ಸಿಕ್ಸರ್ ಮತ್ತು ಬೌಂಡರಿಯೊಂದಿಗೆ 24 ಎಸೆತಗಳಲ್ಲಿ 24 ರನ್ ಸೇರಿಸಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ 43 ರನ್‌ ಗಳನ್ನು ಸೇರಿಸಿದರು. ಆದರೆ ಯುವ ಸ್ಪಿನ್ನರ್ ಶಾಬಾಜ್ ನದೀಬ್ ಈ ಜೊತೆಯಾಟವನ್ನು ಮುರಿದರು. ಎಬಿ ಡಿವಿಲಿಯರ್ಸ್ ವಿಕೆಟ್‌ ಗಳಿಸಿದ ಅವರು ಕುಣಿದಾಡಿದರು. ವಾಷಿಂಗ್ಟನ್ ಸುಂದರ್ (21; 18ಎ, 2 ಬೌಂ) ಆಟಕ್ಕೆ ಕುದುರಿಕೊಳ್ಳುವ ಮುನ್ನವೇ ಇನ್ನೊಂದು ಬದಿಯಲ್ಲಿದ್ದ ಜೋಶ್‌ಗೆ ಸ್ಪಿನ್ನರ್ ರಶೀದ್ ಖಾನ್ ಪೆವಿಲಿಯನ್ ದಾರಿ ತೋರಿಸಿದರು. ಮನೀಷ್ ಪಾಂಡೆ ಪಡೆದ ಕ್ಯಾಚ್‌ಗೆ ಜೋಶ್ ಆಟ ಮುಗಿಯಿತು. ‌

ಸುಂದರ್ ಜೊತೆಗೂಡಿದ ಗುರು ಕೀರತ್ ಸಿಂಗ್ ಮಾನ್ ಇನಿಂಗ್ಸ್ ಕಟ್ಟುವ ಪ್ರಯತ್ನ ಮಾಡಿದರು. ಆದರೆ ತಂಗರಸು ನಟರಾಜನ್ ಅದಕ್ಕೆ ಆಸ್ಪದ ಕೊಡಲಿಲ್ಲ.ಅವರು ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಕೇವಲ 11 ರನ್‌ ಕೊಟ್ಟು ಬ್ಯಾಟ್ಸ್‌ಮನ್‌ಗಳಿಗೆ ತಲೆನೋವಾದರು.

ಇಸುರು ಉಡಾನ ಮತ್ತು ಕ್ರಿಸ್ ಮೊರಿಸ್ ಅವರ ವಿಕೆಟ್‌ಗಳನ್ನು ಕಬಳಿಸಿದ ಹೋಲ್ಡರ್ ಆರ್‌ಸಿಬಿ’ಬಾಲ‘ ಕತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.