ADVERTISEMENT

ಐಪಿಎಲ್‌ ಕ್ರಿಕೆಟ್‌ ಟೂರ್ನಿಯಲ್ಲಿ ಹತ್ತು ತಂಡಗಳ ಆಟಕ್ಕೆ ಫ್ರಾಂಚೈಸ್‌ಗಳ ಒಲವು

ಪಿಟಿಐ
Published 14 ಜುಲೈ 2019, 19:08 IST
Last Updated 14 ಜುಲೈ 2019, 19:08 IST
ಚಿಯರ್ ಲೀಡರ್ಸ್‌
ಚಿಯರ್ ಲೀಡರ್ಸ್‌   

ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿರುವ ತಂಡಗಳ ಸಂಖ್ಯೆಯನ್ನು ಹತ್ತಕ್ಕೆ ಏರಿಸಬೇಕು ಎಂದು ಸದ್ಯ ಇರುವ ಫ್ರಾಂಚೈಸಿಗಳ ಮಾಲೀಕರು ಸಲಹೆ ನೀಡಿದ್ದಾರೆ.

ಲಂಡನ್‌ನಲ್ಲಿ ಹೋದ ವಾರ ನಡೆದ ಸಭೆಯಲ್ಲಿ ಸೇರಿದ್ದ ಫ್ರಾಂಚೈಸಿಗಳ ಮಾಲೀಕರು ಈ ಕುರಿತು ಚರ್ಚಿಸಿದರು.

‘ಐಪಿಎಲ್ ಫ್ರ್ಯಾಂಚೈಸ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಕುರಿತು ನಾವು ಚರ್ಚಿಸಿದೆವು. ಆದರೆ ಈ ಕುರಿತು ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಮಗಿಲ್ಲ. ನಾವು ಸಲಹೆ ಕೊಟ್ಟಿದ್ದೇವೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ನಾವು ಮಾತ್ರ ನಮ್ಮ ನಿಲುವಿಗೆ ಬದ್ಧರಾಗಿದ್ದೇವೆ’ ಎಂದು ಸಭೆಯಲ್ಲಿ ಹಾಜರಿದ್ದ ತಂಡದ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಹೌದು. ಚರ್ಚಿಸಿದ್ದು ನಿಜ. ಆದರೆ ಅದು ಸಭೆಯ ಅಜೆಂಡಾ ಆಗಿರಲಿಲ್ಲ. ಇನ್ನೂ ಸಮಗ್ರ ಯೋಜನೆ ಇಲ್ಲ. ಮುಂದಿನ ಹಂತದಲ್ಲಿ ಬಿಸಿಸಿಐ ಒಪ್ಪಿಗೆ ನೀಡಿದರೆ ಚಿಂತನೆ ನಡೆಸಬಹುದು’ ಎಂದು ಹೇಳಿದರು.

ಐಪಿಎಲ್‌ನಲ್ಲಿ ಹತ್ತು ತಂಡಗಳನ್ನು ಆಡಿಸುವ ಯೋಚನೆ ಹೊಸದೇನಲ್ಲ. 2011ರ ಆವೃತ್ತಿಯಲ್ಲಿ ಹತ್ತು ತಂಡಗಳು ಆಡಿದ್ದವು. ಸಹಾರ ಸಂಸ್ಥೆಯ ಮಾಲೀಕತ್ವದ ಪುಣೆ ವಾರಿಯರ್ಸ್ ಮತ್ತು ಕೊಚ್ಚಿ ಟಸ್ಕರ್ಸ್‌ ತಂಡಗಳು ಇದ್ದವು. ಆದರೆ ಬಿಸಿಸಿಐನೊಂದಿಗಿನ ಒಪ್ಪಂದದಲ್ಲಿ ತಲೆದೋರಿದ ಭಿನ್ನಾಭಿಪ್ರಾಯದಿಂದಾಗಿ 2013ರಲ್ಲಿ ಈ ತಂಡಗಳನ್ನು ನಿರ್ಬಂಧಿಸಲಾಯಿತು. 2014ರಲ್ಲಿ ಮತ್ತೆ ಎಂಟು ತಂಡಗಳು ಮಾತ್ರ ಕಣಕ್ಕಿಳಿದವು.ಇಲ್ಲಿಯವರೆಗೂ ಅದೇ ರೀತಿ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.