ADVERTISEMENT

ಟೆಸ್ಟ್‌ ಕ್ರಿಕೆಟ್‌ಗೆ ಅಪಾಯವಾಗದಿರಲಿ: ಫಾರೂಕ್

ಪಿಟಿಐ
Published 7 ಜೂನ್ 2023, 15:50 IST
Last Updated 7 ಜೂನ್ 2023, 15:50 IST
ಫಾರೂಕ್
ಫಾರೂಕ್    

ಲಂಡನ್ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಶ್ರೀಮಂತಿಕೆಯನ್ನು ನೋಡಿ ಇಡೀ ಜಗತ್ತೇ ಹೊಟ್ಟೆಕಿಚ್ಚುಪಡುತ್ತಿದೆ.  ಆದರೆ  ಇದರಿಂದಾಗಿ ಟೆಸ್ಟ್‌ ಕ್ರಿಕೆಟ್‌ಗೆ ಅಪಾಯವಾಗಬಾರದು ಎಂದು ಭಾರತ ತಂಡದ ಮಾಜಿ ವಿಕೆಟ್‌ಕೀಪರ್ ಫಾರೂಕ್  ಇಂಜಿನಿಯರ್ ಹೇಳಿದರು.

ಆರ್ಥಿಕವಾಗಿ ಬಲಾಢ್ಯವಾಗಿರುವ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಕ್ರಿಕೆಟ್‌ಗೆ ಬದ್ಧವಾಗಿವೆ. ಆದರೆ ಸಣ್ಣ ರಾಷ್ಟ್ರಗಳ ತಂಡಗಳ ಆಟಗಾರರು ವಿಶ್ವದ ಬೇರೆ ಬೇರೆ ಭಾಗಗಳಲ್ಲಿ ನಡೆಯುವ ಫ್ರ್ಯಾಂಚೈಸಿ ಕ್ರಿಕೆಟ್‌ನತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಆ ದೇಶಗಳಲ್ಲಿ ಟೆಸ್ಟ್ ಕ್ರಿಕೆಟ್ ಕುಂಠಿತವಾಗಲು ಕಾರಣವಾಗುತ್ತಿದೆ ಎಂಬ ಆತಂಕ ಅವರದ್ದು.

‘ಟೆಸ್ಟ್ ಕ್ರಿಕೆಟ್‌ ಅಸ್ತಿತ್ವಕ್ಕೆ ಯಾವುದೇ ರೀತಿಯಿಂದಲೂ ಅಪಾಯವಾಗಬಾರದು. ಟಿ20 ಲೀಗ್‌ಗಳ ಮೂಲಕ ಕ್ರಿಕೆಟ್‌ ಎಲ್ಲೆಡೆಯೂ ಬೆಳೆಯುತ್ತಿರುವುದು  ಉತ್ತಮ ಸಂಗತಿ. ಆದರೆ ಟಿ20 ಮಾದರಿಗಾಗಿ ಟೆಸ್ಟ್ ಕ್ರಿಕೆಟ್‌ ನೇಪಥ್ಯಕ್ಕೆ ಸರಿಯುವಂತಾಗಬಾರದು’ ಎಂದು ಇಂಜಿನಿಯರ್ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

’ಈ ನಿಟ್ಟಿನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಪ್ರಮುಖವಾಗಿದೆ. ಸೀಮಿತ ಓವರ್‌ಗಳ ಪಂದ್ಯಗಳಷ್ಟೇ ಟೆಸ್ಟ್ ಕ್ರಿಕೆಟ್ ಕೂಡ ರೋಚಕವಾಗಿರುತ್ತದೆ ಎಂಬುದು ಡಬ್ಲ್ಯುಟಿಸಿ ಮೂಲಕ ಗೊತ್ತಾಗುತ್ತಿದೆ‘ ಎಂದು 85 ವರ್ಷದ ಇಂಜಿನಿಯರ್ ಹೇಳಿದ್ದಾರೆ.

ಸದ್ಯ ಮ್ಯಾಂಚೆಸ್ಟರ್‌ ನಿವಾಸಿಯಗಿರುವ ಅವರು ಲಂಡನ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಡಬ್ಲ್ಯುಟಿಸಿ ಫೈನಲ್‌ ವೀಕ್ಷಿಸಲು ಬಂದಿದ್ದಾರೆ.

‘ಟೆಸ್ಟ್ ಮತ್ತು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತವು ಮುಂಚೂಣಿಯಲ್ಲಿದೆ. ಐಪಿಎಲ್ ಮೂಲಕ ಆರ್ಥಿಕವಾಗಿ ಬಹಳಷ್ಟು ಬಲಾಢ್ಯವಾಗಿರುವುದು ಹೆಮ್ಮೆಯ ವಿಷಯ‘ ಎಂದರು.

’ಕ್ರಿಕೆಟ್‌ ನನಗೆ ರಕ್ತಗತವಾಗಿದೆ. ಎಲ್ಲ ಸಮಯದಲ್ಲಿಯೂ ಕ್ರಿಕೆಟ್‌ ನೋಡುವುದೇ ನನ್ನ ಕೆಲಸ. ಕ್ರಿಕೆಟ್‌ ಭಾರತೀಯ ಆಟ, ಆದರೆ ಬ್ರಿಟಿಷರು ಕಂಡುಹಿಡಿದಿದ್ದು ಆಕಸ್ಮಿಕವಷ್ಟೇ. ನಾವು ಆಡುವಾಗ ಐದು ದಿನಗಳ ಪಂದ್ಯಕ್ಕೆ ₹ 50 ಸಂಭಾವನೆ ಪಡೆಯುತ್ತಿದ್ದೆವು. ನನಗಿನ್ನೂ ನೆನಪಿದೆ. ಅದೊಂದು ಪಂದ್ಯದಲ್ಲಿ ನಾಲ್ಕನೇ ದಿನದಾಟದಲ್ಲಿ ಅರ್ಧ ಗಂಟೆ ಬಾಕಿಯುಳಿದಿತ್ತು. ಆ ಸಂದರ್ಭದಲ್ಲಿ ನಾನು ಸುನಿಲ್ ಗಾವಸ್ಕರ್ ಬ್ಯಾಟಿಂಗ್ ಮಾಡುತ್ತಿದ್ದೆವು. ನಮಗೆ ಕೇವಲ 15–20 ರನ್‌ಗಳು ಮಾತ್ರ ಗೆಲುವಿಗೆ ಬೇಕಾಗಿದ್ದವು. ಆದರೆ  ಇವತ್ತೇ ಪಂದ್ಯ ಮುಗಿಸಬೇಡಿ. ಐದನೇ ದಿನದ ಸಂಭಾವನೆ ಸಿಗುವುದಿಲ್ಲ. ನಾಳೆಯವರೆಗೂ ಆಟ ಮುಂದುವರಿಸಲು ನೋಡಿ ಎಂದು ಡ್ರೆಸ್ಸಿಂಗ್‌ ಕೋಣೆಯಿಂದ ಸಂದೇಶಗಳು ಬಂದಿದ್ದವು. ಆದರೆ ನಾವು ದುಡ್ಡಿಗಾಗಿ ಅಲ್ಲ, ಘನತೆಗಾಗಿ ಆಡುತ್ತಿದ್ದೆವು‘ ಎಂದು ಇಂಜಿನಿಯರ್ ನೆನಪಿಸಿಕೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.