ಮೈಸೂರು: ‘ಐಪಿಎಲ್‌ನಲ್ಲಿ ಆಡುತ್ತಿರುವ ಆರ್‌ಸಿಬಿ ತಂಡದಲ್ಲಿ ಕನ್ನಡಿಗರು ಎಷ್ಟು ಮಂದಿ ಇದ್ದಾರೆ? ಕಾಸು ಕೊಟ್ಟರೆ ಯಾರು ಯಾವ ತಂಡದಲ್ಲಿ ಬೇಕಾದರೂ ಆಡುತ್ತಾರೆ. ಆದರೆ, ನಮ್ಮ ಸೈನಿಕರಿಗೆ ಇಷ್ಟು ಪ್ರಚಾರ ಮತ್ತು ಅಭಿಮಾನಿಗಳು ಇರುವುದಿಲ್ಲ’ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಐಪಿಎಲ್‌ನಲ್ಲಿ ಆಟಗಾರರನ್ನು ಹಣದ ಮೇಲೆ ಖರೀದಿಸಲಾಗುತ್ತದೆ. ರಣಜಿಯಲ್ಲಿ ರಾಜ್ಯಗಳ ನಡುವೆ ಪಂದ್ಯಗಳು ನಡೆಯುತ್ತಿದ್ದವು. ಆಟಗಾರರು ರಾಜ್ಯ ಪ್ರತಿನಿಧಿಸುತ್ತಿದ್ದರು. ಟೆಸ್ಟ್ ಹಾಗೂ ಏಕದಿನ ಪಂದ್ಯಗಳೂ ದೇಶ–ದೇಶಗಳ ವಿರುದ್ಧ ಇರುತ್ತವೆ. ಐಪಿಎಲ್ ಒಂದು ರೀತಿಯಲ್ಲಿ ಕಾಕ್‌ಟೇಲ್ ಇದ್ದಂತೆ. ಹೀಗಾಗಿ, ಆರ್‌ಸಿಬಿ ನಮ್ಮ ರಾಜ್ಯದ್ದು ಎನಿಸುವುದಿಲ್ಲ. ಏಕೆಂದರೆ, ಬೇರೆ ಕಡೆಯವರೂ ಅದರಲ್ಲಿದ್ದಾರೆ’ ಎಂದರು.
‘ಐಪಿಎಲ್‌ನಲ್ಲಿ ಇರುವುದು ಹಣ ಮಾತ್ರ. ಮುಕ್ತವಾಗಿ ಹರಾಜು ನಡೆಸಿ ಆಟಗಾರರನ್ನು ಖರೀದಿಸುತ್ತಾರೆ. ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ಮಾಡಲು ಸಾಕಷ್ಟು ಕೆಲಸ ಇವೆ. ಅಲ್ಲಿ ಯಾವ ರಾಷ್ಟ್ರೀಯವಾದವೂ ಇಲ್ಲ’ ಪ್ರತಿಪಾದಿಸಿದರು.
‘ಇವತ್ತು ಆರ್‌ಸಿಬಿ ಆಟಗಾರ ನಾಳೆ ಕಾಸು ಕೊಟ್ಟರೆ ಜೆಸಿಬಿಗೆ ಹೋಗಿರುತ್ತಾನೆ. ನಾವು ಪ್ರಾಣ ಕೊಡುವ ಸೈನಿಕರಿಗೆ ಆದ್ಯತೆ ನೀಡಬೇಕು. ಅನ್ನ ಬೆಳೆಯುವ ರೈತರ ಬಗ್ಗೆ ತಲೆಕೆಡಿಸಿಕೊಳ್ಳಬೇಕು. ಹೆಚ್ಚು ಬೆಲೆ ಸಿಗಬೇಕಿರುವುದು ಅವರಿಗೇ. ಕ್ರಿಕೆಟ್ ಅನ್ನು ಕ್ರೀಡೆಯಾಗಷ್ಟೆ ನೋಡೋಣ’ ಎಂದರು.
ಸರ್ಕಾರ ಸತ್ತು ಹೋಗಿದೆ: ‘ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಇನ್ನೂ ಮೂರು ವರ್ಷ ಇರುವಾಗಲೇ ದಿನಗಳನ್ನು ಎಣಿಸುತ್ತಿದೆ. ಮಂಗಳೂರು ಗಲಭೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರಣ ಎಂದು ಸಿದ್ಧ ಆರೋಪ ಮಾಡಲಾಗುತ್ತಿದೆ. ಸುಹಾಸ್ ಶೆಟ್ಟಿ, ಪ್ರವೀಣ್ ನೆಟ್ಟಾರ್ ಹತ್ಯೆಗೆ ಆರ್‌ಎಸ್‌ಎಸ್ ಕಾರಣವಾ? ಹಿಂದೂಗಳು ಇರುವಲ್ಲಿ ಕೋಮು ಗಲಭೆ ಆಗುತ್ತಿದೆಯೇ?’ ಎಂದು ಕೇಳಿದರು.
‘ದಕ್ಷಿಣದ ಮಂಗಳೂರನ್ನು ಕಾಶ್ಮೀರ ಮಾಡಲು ಹೊರಟಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಕೋಮು ಗಲಭೆಗೆಲ್ಲಾ ಆರ್‌ರಸ್ಎಸ್ ಕಾರಣವಾ? ಬಿನ್‌ಲಾಡೆನ್, ಮುಜಾಯಿದ್ದೀನ್ ಆರ್‌ಎಸ್‌ಎಸ್‌ನವರಾ? ಮಂಗಳೂರು ಗಲಾಟೆ ಹಿಂದೆ ಯಾರಿದ್ದಾರೆ, ಅವರ ಹಿನ್ನೆಲೆ ಏನು ಎಂಬುದನ್ನು ವಸ್ತುನಿಷ್ಠವಾಗಿ ನೋಡಬೇಕು’ ಎಂದು ಹೇಳಿದರು.
‘ರಾಜ್ಯ ಸರ್ಕಾರ ಹಗರಣಗಳನ್ನು ಪ್ರಶಸ್ತಿ ಎಂದುಕೊಂಡಿದೆ. ನಮ್ಮ ಮೇಲೆ 40% ಕಮಿಷನ್ ಸರ್ಕಾರ ಎಂದು ಆರೋಪಿಸಿದ್ದರು. ಈ ಸರ್ಕಾರ 69% ಕಮಿಷನ್ ಬಾಚುತ್ತಿದೆ. ಮುಂದೆ ಇದು 100%ಗೆ ಹೋಗಲಿದೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.