ADVERTISEMENT

IPL 2025 | MI vs SRH: ಜಯದ ಲಯಕ್ಕೆ ಮರಳುವತ್ತ ಸನ್‌ ಚಿತ್ತ

ಮುಂಬೈ ಇಂಡಿಯನ್ಸ್ ಎದುರು ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿ ಹೈದರಾಬಾದ್: ಕಮಿನ್ಸ್–ಹಾರ್ದಿಕ್ ಮುಖಾಮುಖಿ ಇಂದು

ಪಿಟಿಐ
Published 23 ಏಪ್ರಿಲ್ 2025, 0:10 IST
Last Updated 23 ಏಪ್ರಿಲ್ 2025, 0:10 IST
<div class="paragraphs"><p>ಹಾರ್ದಿಕ್ ಪಾಂಡ್ಯ </p></div>

ಹಾರ್ದಿಕ್ ಪಾಂಡ್ಯ

   

ಪಿಟಿಐ ಚಿತ್ರ

ಹೈದರಾಬಾದ್: ತವರಿನಂಗಳದಲ್ಲಿ ಗೆಲುವಿನ ಲಯ ಕಂಡುಕೊಳ್ಳುವತ್ತ ಸನ್‌ರೈಸರ್ಸ್ ಹೈದರಾಬಾದ್ ತಂಡವು ಕಣ್ಣಿಟ್ಟಿದೆ. ಬುಧವಾರ ನಡೆಯಲಿರುವ ಪಂದ್ಯದಲ್ಲಿ ಪ್ಯಾಟ್‌ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಮುಂಬೈ ಇಂಡಿಯನ್ಸ್ ಎದುರು ಕಣಕ್ಕಿಳಿಯಲಿದೆ. 

ADVERTISEMENT

ಆರು ದಿನಗಳ ಹಿಂದಷ್ಟೇ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ತಂಡವು ಸನ್‌ರೈಸರ್ಸ್‌ ಎದುರು ಜಯಿಸಿತ್ತು. ಈಗ ಕಮಿನ್ಸ್ ಬಳಗವು ಮುಯ್ಯಿ ತೀರಿಸಿಕೊಳ್ಳುವ ಛಲದಲ್ಲಿದೆ. ಸ್ಫೋಟಕ ಶೈಲಿಯ ಬ್ಯಾಟರ್‌ಗಳು ತುಂಬಿರುವ ಹೈದರಾಬಾದ್ ತಂಡವನ್ನು ಕಟ್ಟಿ ಹಾಕುವ ತಂತ್ರವನ್ನು ಈ ಟೂರ್ನಿಯಲ್ಲಿ ಕೆಲವು ಎದುರಾಳಿ ಬೌಲರ್‌ಗಳು ಕಂಡುಕೊಂಡಿದ್ದಾರೆ. ಆದ್ದರಿಂದ ಸನ್‌ರೈಸರ್ಸ್‌ ತಂಡವು ಟೂರ್ನಿಯುದ್ದಕ್ಕೂ ಏಳು, ಬೀಳುಗಳನ್ನು ಕಾಣುತ್ತಿದೆ. ಸನ್‌ರೈಸರ್ಸ್ ತಂಡವು ಮೊದಲ ಸುತ್ತಿನಲ್ಲಿ ಐದು ಸೋತು, ಎರಡರಲ್ಲಿ ಜಯಿಸಿದೆ. ಇನ್ನುಳಿದಿರುವ ಟೂರ್ನಿಯ ಅರ್ಧಭಾಗದಲ್ಲಿ ಹೆಚ್ಚು ಗೆಲುವು ಸಾಧಿಸಿ ಪ್ಲೇಆಫ್‌ಗೆ ಸಾಗಬೇಕಾದ ಒತ್ತಡದಲ್ಲಿದೆ.  

ಮುಂಬೈ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ವಿಲ್ ಜ್ಯಾಕ್ಸ್‌ ತಮ್ಮ ಆಫ್‌ಬ್ರೆಕ್ ಬೌಲಿಂಗ್ ಮೂಲಕ ಹೈದರಾಬಾದ್ ಬ್ಯಾಟರ್‌ಗಳನ್ನು ಕಟ್ಟಿಹಾಕಿದ್ದರು. ಅದರಲ್ಲೂ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರು ಉತ್ತಮ ಆರಂಭ ನೀಡಿದ್ದರು. ಆದರೂ ತಂಡವು ದೊಡ್ಡ ಮೊತ್ತ ಗಳಿಸದಂತೆ ವಿಲ್ ಹಾಗೂ ಇನ್ನುಳಿದ ಬೌಲರ್‌ಗಳು ಬಿಡಲಿಲ್ಲ. 163 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೂ ಸುಲಭ ಗೆಲುವು ಒಲಿಯಲಿಲ್ಲ. ಕಮಿನ್ಸ್‌ 3 ವಿಕೆಟ್ ಗಳಿಸಿ ತಮ್ಮ ತಂಡದ ಸೋಲು ತಪ್ಪಿಸುವ ಪ್ರಯತ್ನ ಮಾಡಿದ್ದರು. ಆದರೆ ತಿಲಕ್ ವರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಅವರ ಅಮೋಘ ಬ್ಯಾಟಿಂಗ್ ಮುಂದೆ ಕಮಿನ್ಸ್ ಸಫಲರಾಗಲಿಲ್ಲ. 

ಮುಂಬೈ ತಂಡವು ಕಳೆದ ಮೂರು ಪಂದ್ಯಗಳಲ್ಲಿ ಸತತ ಜಯಸಾಧಿಸಿದೆ. ಇದರಿಂದಾಗಿ ಭರ್ತಿ ಆತ್ಮವಿಶ್ವಾಸದಲ್ಲಿದೆ. ಅಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ಎದುರಿನ ಪಂದ್ಯದಲ್ಲಿ ‘ಹಿಟ್‌ಮ್ಯಾನ್’ ರೋಹಿತ್ ಶರ್ಮಾ ಅಜೇಯ 76 ರನ್‌ ಹೊಡೆದು ಲಯಕ್ಕೆ ಮರಳಿದ್ದಾರೆ. ಆ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಅಜೇಯ ಅರ್ಧಶತಕ ಗಳಿಸಿದ್ದರು. ರೋಹಿತ್ ಲಯಕ್ಕೆ ಮರಳಿರುವುದು ತಂಡದ ಶಕ್ತಿಯನ್ನು ವೃದ್ಧಿಸಿದೆ. ಅದೇ ಪಂದ್ಯದಲ್ಲಿ ಜಸ್‌ಪ್ರೀತ್ ಬೂಮ್ರಾ ಕೂಡ 2 ವಿಕೆಟ್ ಪಡೆದಿದ್ದರು. ಬೌಲಿಂಗ್ ವಿಭಾಗವೂ ಬಲಿಷ್ಠವಾಗಿದ್ದು, ಉಭಯ ತಂಡಗಳ ಹೋರಾಟ ರೋಚಕವಾಗುವ ಎಲ್ಲ ಸಾಧ್ಯತೆಗಳೂ ಇವೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಫೊರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್. 

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.