ADVERTISEMENT

IPL 2021: ಆರ್‌ಸಿಬಿ ಆಟಗಾರ ದೇವದತ್ ಪಡಿಕ್ಕಲ್‌ಗೆ ಕೋವಿಡ್‌ ದೃಢ

ರಾಯಲ್ ಚಾಲೆಂಜರ್ಸ್‌ ಬೆಂಗಳೂರಿಗೂ ತಟ್ಟಿದ ಕೊರೊನಾ ಬಿಸಿ

ಏಜೆನ್ಸೀಸ್
Published 4 ಏಪ್ರಿಲ್ 2021, 16:13 IST
Last Updated 4 ಏಪ್ರಿಲ್ 2021, 16:13 IST
 ದೇವದತ್‌ ಪಡಿಕ್ಕಲ್‌
ದೇವದತ್‌ ಪಡಿಕ್ಕಲ್‌   

ಬೆಂಗಳೂರು: ದೇಶದ ಹಲವೆಡೆ ಆತಂಕ ಮೂಡಿಸುತ್ತಿರುವ ಕೊರೊನಾ ಸೋಂಕಿನ ಎರಡನೇ ಅಲೆಯು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ರಾಯಲ್ ಚಾಲೆಂಜರ್ ಬೆಂಗಳೂರು ತಂಡಕ್ಕೂ ಕಾಲಿಟ್ಟಿದೆ.

ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಅವರಿಗೆ ಸೋಂಕು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಭಾನುವಾರ ಬೆಳಿಗ್ಗೆಯೇ ಹಲವು ಸುದ್ದಿ ಮಾಧ್ಯಮಗಳ ವೆಬ್‌ಸೈಟ್‌ಗಳಲ್ಲಿ ಈ ಸುದ್ದಿ ಪ್ರಕಟವಾಗಿದೆ. ಆದರೆ ರಾತ್ರಿಯವರೆಗೂ ಆರ್‌ಸಿಬಿ ಫ್ರ್ಯಾಂಚೈಸ್‌ನ ಮಾಧ್ಯಮ ವಿಭಾಗವು ಈ ಮಾಹಿತಿಯನ್ನು ಖಚಿತಪಡಿಸಿರಲಿಲ್ಲ.

ಆದರೆ ಬೆಂಗಳೂರಿನ ಯುವ ಆಟಗಾರ ದೇವದತ್ತ ಅವರಿಗೆ ಸೋಂಕು ತಗುಲಿರುವುದನ್ನು ಕೆಲವು ಮೂಲಗಳು ತಿಳಿಸಿವೆ. ಆರ್‌ಸಿಬಿಯ ಆರಂಭದ ಎರಡು ಪಂದ್ಯಗಳಲ್ಲಿ ದೇವದತ್ತ ಕಣಕ್ಕಿಳಿಯುವುದಿಲ್ಲ. ಅವರ ಬದಲಿಗೆ ಯುವ ಅಟಗಾರರಾದ ಸಚಿನ್ ಬೇಬಿ ಅಥವಾ ಮೊಹಮ್ಮದ್ ಅಜರುದ್ದೀನ್ ಅವರಿಗೆ ಸ್ಥಾನ ನೀಡುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.

ADVERTISEMENT

ಕರ್ನಾಟಕ ತಂಡದ ದೇವದತ್ತ ಹೋದ ವರ್ಷ ಯುಎಇಯಲ್ಲಿ ನಡೆದಿದ್ದ ಐಪಿಎಲ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಆರ್‌ಸಿಬಿಯ ಆರಂಭಿಕ ಬ್ಯಾಟ್ಸ್‌ಮನ್ ಆಗಿ 15 ಪಂದ್ಯಗಳಲ್ಲಿ ಆಡಿದ್ದರು. 473 ರನ್‌ಗಳನ್ನು ಗಳಿಸಿದ್ದರು. ಅದರಲ್ಲಿ ಐದು ಅರ್ಧಶತಕಗಳೂ ಸೇರಿವೆ. ಈಚೆಗೆ ನಡೆದಿದ್ದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿ ಮತ್ತು ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಗಳಲ್ಲಿಯೂ 20 ವರ್ಷದ ಎಡಗೈ ಬ್ಯಾಟ್ಸ್‌ಮನ್ ರನ್‌ಗಳ ಹೊಳೆ ಹರಿಸಿದ್ದರು.

ಸದ್ಯ ತಂಡವು ಚೆನ್ನೈನಲ್ಲಿದೆ. ನಾಯಕ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರು ಕ್ವಾರಂಟೈನ್‌ನಲ್ಲಿದ್ದಾರೆ. ತಂಡದ ಇನ್ನೂ ಕೆಲವು ಆಟಗಾರರು ಅಭ್ಯಾಸವನ್ನು ಮುಂದುವರಿಸಿದ್ದಾರೆ. ಕ್ರಿಕೆಟ್ ನಿರ್ದೇಶಕ ಮೈಕ್ ಹೆಸನ್ ಅವರು ಮಾರ್ಗದರ್ಶನ ನೀಡುತ್ತಿದ್ದಾರೆ. ಇದೇ ಒಂಬತ್ತರಂದು ಚೆನ್ನೈನಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ಆರ್‌ಸಿಬಿಯು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ಎದುರು ಕಣಕ್ಕಿಳಿಯಲಿದೆ.

ಡೆಲ್ಲಿ ಕ್ಯಾಪಿಟಲ್ಟ್ ತಂಡದ ಅಕ್ಷರ್ ಪಟೇಲ್ ಅವರಿಗೆ ಕೋವಿಡ್ ಇರುವುದು ಶನಿವಾರ ದೃಢಪಟ್ಟಿತ್ತು. ಅವರು ಐಸೋಲೆಷನ್‌ಗೆ ತೆರಳಿದ್ದಾರೆ. ಮುಂಬೈನ ವಾಂಖೆಡೆ ಕ್ರೀಡಾಂಗಣದ ಹತ್ತು ಮಂದಿ ಸಿಬ್ಬಂದಿ ಮತ್ತು ಕೆಲವು ಕಾರ್ಯಕ್ರಮ ವ್ಯವಸ್ಥಾಪಕರಿಗೂ ಕೋವಿಡ್ ಸೋಂಕು ಇರುವುದು ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.