ಬೆಂಗಳೂರು: ಭಾರತ ಮತ್ತು ಪಾಕ್ ಉದ್ವಿಗ್ನತೆ ಬೆನ್ನಲ್ಲೇ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಶನಿವಾರದಿಂದ ಪುನರಾರಂಭವಾಗಲಿದೆ. ನಾಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹಾಗೂ ಕೋಲ್ಕತ್ತ ನೈಟ್ ರೈಡರ್ಸ್ (ಕೆಕೆಆರ್) ತಂಡಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಕೆಲವೇ ದಿನಗಳ ಹಿಂದೆ ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತರಾಗಿರುವ ವಿರಾಟ್ ಕೊಹ್ಲಿ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಇದೀಗ ಕ್ರಿಕೆಟ್ ಪ್ರಿಯರ ಗಮನವು ವಿರಾಟ್ ಕಡೆಗಿದೆ.
ಐಪಿಎಲ್ 18ನೇ ಆವೃತ್ತಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಮೊದಲ ಪ್ರಶಸ್ತಿಯ ಭರವಸೆ ಮೂಡಿಸಿರುವ ಆರ್‌ಸಿಬಿ, ಆಡಿರುವ 11 ಪಂದ್ಯಗಳಲ್ಲಿ 8 ಪಂದ್ಯ ಗೆದ್ದಿದೆ. ಒಟ್ಟು 16 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.
ಆಡಿರುವ 12 ಪಂದ್ಯಗಳಿಂದ 11 ಪಾಯಿಂಟ್ ಹೊಂದಿರುವ ಮಾಜಿ ಚಾಂಪಿಯನ್ ಕೆಕೆಆರ್ ತಂಡವು, ನಾಕೌಟ್ ತಲುಪಲು ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆಯಿದೆ.
ಲೀಗ್ ಹಂತದ ಪಂದ್ಯದಲ್ಲಿ, ಚೆನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗಾಯಗೊಂಡಿದ್ದ ಆರ್‌ಸಿಬಿ ನಾಯಕ ರಜತ್ ಪಾಟೀದಾರ್, ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ಮೂಲಕ ನಾಳಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸೂಚನೆ ನೀಡಿದ್ದಾರೆ.
ಭಾರತ ಮತ್ತು ಪಾಕ್ ಉದ್ವಿಗ್ನತೆ ಬೆನ್ನಲ್ಲೇ, ಸುರಕ್ಷಿತೆಯ ದೃಷ್ಟಿಯಿಂದ ಹಲವು ವಿದೇಶಿ ಆಟಗಾರರು ತವರಿಗೆ ಮರಳಿದ್ದರು. ಆರ್‌ಸಿಬಿ ಪರ ಆಡುತ್ತಿರುವ ಫಿಲ್ ಸಾಲ್ಟ್, ಲುಂಗಿ ಎನ್‌ಗಿಡಿ, ಟೀಮ್ ಡೆವಿಡ್, ಲಿಯಾಮ್ ಲಿವಿಂಗ್‌ಸ್ಟೋನ್, ರೊಮಾರಿಯೋ ಶೆಫರ್ಡ್ ತಂಡವನ್ನು ಕೂಡಿಕೊಂಡಿದ್ದು, ಗಾಯಗೊಂಡಿರುವ ವೇಗಿ ಜೋಷ್ ಹೇಜಲ್‌ವುಡ್ ನಾಳಿನ ಪಂದ್ಯದಲ್ಲಿ ಆಡುವ ಕುರಿತು ಅಧಿಕೃತ ಮಾಹಿತಿ ಹೊರಬಂದಿಲ್ಲ.
ಟೂರ್ನಿಯ ಮಧ್ಯದಲ್ಲಿ ಗಾಯಗೊಂಡಿದ್ದ ಕರ್ನಾಟಕದ ದೇವ್‌ದತ್ ಪಡೀಕಲ್ ಬದಲಿಗೆ, ಬದಲಿ ಆಟಗಾರನಾಗಿ ಮತ್ತೊರ್ವ ಕನ್ನಡಿಗ ಮಯಂಕ್ ಅಗರ್ವಾಲ್ ತಂಡವನ್ನು ಕೂಡಿಕೊಂಡಿದ್ದಾರೆ. ಇದೀಗ ಪಡಿಕ್ಕಲ್‌ನಿಂದ ತೆರವಾಗಿರುವ ಮೂರನೇ ಕ್ರಮಾಂಕಕ್ಕಾಗಿ ತಂಡದಲ್ಲಿ ಮಯಂಕ್ ಹಾಗೂ ಸ್ವಸ್ತಿಕ್ ಚಿಕಾರ ನಡುವೆ ಪೈಪೋಟಿ ನಡೆಯುತ್ತಿದ್ದು, ನಾಳಿನ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಯಾರು ಬ್ಯಾಟ್ ಮಾಡಲಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ಬರುತ್ತಿದ್ದು, ಪಂದ್ಯಕ್ಕೆ ಅಡ್ಡಿ ಪಡಿಸುವ ಸಾಧ್ಯತೆ ಕೂಡ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.