ಮೊಹಾಲಿ/ ಮುಂಬೈ (ಪಿಟಿಐ): ಐಪಿಎಲ್ ತಂಡಗಳಾದ ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಕ್ರಮವಾಗಿ ಟ್ರೆವರ್ ಬೇಲಿಸ್ ಹಾಗೂ ಮಾರ್ಕ್ ಬೌಚರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.
ಪಂಜಾಬ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿದ್ದ ಅನಿಲ್ ಕುಂಬ್ಳೆ ಅವರ ಅವಧಿ ಕಳೆದ ಋತುವಿನೊಂದಿಗೆ ಕೊನೆಗೊಂಡಿತ್ತು. ಕುಂಬ್ಳೆ ಜತೆಗಿನ ಒಪ್ಪಂದ ಮುಂದುವರಿಸದಿರಲು ಪಂಜಾಬ್ ಫ್ರಾಂಚೈಸ್ ನಿರ್ಧರಿಸಿತ್ತು.
ಇದೀಗ ಅವರ ಜಾಗಕ್ಕೆ ಆಸ್ಟ್ರೇಲಿಯಾದ ಬೇಲಿಸ್ ನೇಮಕ ನಡೆದಿದೆ. ಅವರು ಈ ಹಿಂದೆ ಕೋಲ್ಕತ್ತ ನೈಟ್ ರೈಡರ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇವರ ಮಾರ್ಗದರ್ಶನದಲ್ಲಿ ಕೆಕೆಆರ್ ತಂಡ 2012 ಮತ್ತು 2014 ರಲ್ಲಿ ಚಾಂಪಿಯನ್ ಅಗಿತ್ತು. 2019ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡಕ್ಕೂ ಬೇಲಿಸ್ ಕೋಚ್ ಆಗಿದ್ದರು.
ದಕ್ಷಿಣ ಆಫ್ರಿಕಾ ತಂಡದ ಮಾಜಿ ವಿಕೆಟ್‌ಕೀಪರ್ ಬೌಚರ್, ಶ್ರೀಲಂಕಾದ ಮಾಹೇಲ ಜಯವರ್ಧನೆ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ. ಮುಖ್ಯ ಕೋಚ್ ಆಗಿದ್ದ ಜಯವರ್ಧನೆ ಅವರನ್ನು ಮುಂಬೈ ಫ್ರಾಂಚೈಸ್ ಇದೀಗ ‘ಗ್ಲೋಬಲ್ ಹೆಡ್’ ಆಗಿ ನೇಮಿಸಿದೆ.
ದಕ್ಷಿಣ ಆಫ್ರಿಕಾ ತಂಡದ ಮುಖ್ಯ ಕೋಚ್ ಆಗಿರುವ ಬೌಷರ್, ಮುಂಬರುವ ಟಿ20 ವಿಶ್ವಕಪ್ ಬಳಿಕ ಹುದ್ದೆ ತ್ಯಜಿಸುವುದಾಗಿ ಕಳೆದ ವಾರ ಪ್ರಕಟಿಸಿದ್ದರು.
‘ಮುಂಬೈ ಇಂಡಿಯನ್ಸ್‌ನಂತಹ ಯಶಸ್ವಿ ತಂಡವೊಂದರ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವುದು ಬಲುದೊಡ್ಡ ಗೌರವ. ಪ್ರಮುಖ ಆಟಗಾರರನ್ನು ಒಳಗೊಂಡ ತಂಡಕ್ಕೆ ಇನ್ನಷ್ಟು ಬಲ ತುಂಬುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಬೌಚರ್ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.